ವೃಕ್ಷಥಾನ್ ಹೆರಿಟೇಜ್ ರನ್: ದೇಶಾದ್ಯಂತ ಗಮನ ಸೆಳೆಯುತ್ತಿದೆ: ಮಹಾಂತೇಶ ಬಿರಾದಾರ

ವಿಜಯಪುರ: ಡಿಸೆಂಬರ್ 24 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2023ಕ್ಕೆ ತಾಂತ್ರಿಕ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, 5 ಕಿ.ಮೀ, 10 ಕಿ.ಮೀ ಮತ್ತು 21 ಕಿ.ಮೀ ಓಟದಲ್ಲಿ ಪಾಲ್ಗೋಂಡ ಕ್ರೀಡಾಪಟುಗಳ ಓಟದ ಭಾವಚಿತ್ರಗಳು ನೇರವಾಗಿ ಅವರ ಇ-ಮೇಲ್ಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ನಡೆದ ಕೋರ್ ಕಮೀಟಿ ಸಭೆಯಲ್ಲಿ ಮಾತನಾಡಿದ ಅವರು, ಈ ಓಟದಲ್ಲಿ ಪಾಲ್ಗೋಳ್ಳುತ್ತಿರುವ ಫೇಸರ್, ಅಂಬಾಸೀಡರ್ ಮತ್ತು ಪ್ರಮುಖ ಕ್ರೀಡಾಪಟುಗಳು ಈ ಬಾರಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ. ಅಲ್ಲದೇ, ಕ್ರೀಡಾಪಟುಗಳು ಓಡುವ ಮಾರ್ಗದಲ್ಲಿ ಅಲ್ಲಲ್ಲಿ ನಾನಾ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಸಂಗೀತ ಮತ್ತು ನೃತ್ಯ ಪ್ರದರ್ಶನ ಮೂಲಕ ಓಟಗಾರರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಕೋರ್ ಕಮೀಟಿಯ ಎಲ್ಲ ಪದಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಹಕಾರದಿಂದ ಹೆರಿಟೇಜ್ ರನ್ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಭಾರಿಯ ಕಾರ್ಯಕ್ರಮ ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಗಮನ ಸೆಳೆಯುತ್ತಿದ್ದು ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಖ್ಯಾತ ಓಟಗಾರರಾದ ರಾಜಿಂದರ್ ಕೌರ್, ಶೋಭಾ ನರೇಂದ್ರಕುಮಾರ ನಾಗಶೆಟ್ಟಿ ಕೂಡ ಪಾಲ್ಗೊಂಡು ಸಿದ್ಧತೆ ಪರಿಶೀಲನೆ ಜೊತೆಗೆ ಸಲಹೆ ಸೂಚನೆಗಳನ್ನು ಆಲಿಸಿದರು. ಸಿ.ಆರ್.ಡಿ.ಎಸ್ ಪೌಂಡೇಶನ್ ಸಂಸ್ಥಾಪಕ ನಿರ್ದೇಶಕಿಯೂ ಆಗಿರುವ ಶೋಭಾ ನರೇಂದ್ರಕುಮಾರ ನಾಗಶೇಟ್ಟಿ ಮಾತನಾಡಿ, ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಓಟಗಾರರು ಈ ವೃಕ್ಷಥಾನ್ ಹೆರಿಟೇಜ್ ರನ್- 2023 ನಲ್ಲಿ ಪಾಲ್ಗೋಳ್ಳುತ್ತಿರುವುದು ಈ ಬಾರಿಯ ಕಾರ್ಯಕ್ರಮದ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲೆಯ ಜನತೆ ಮ್ಯಾರಾಥಾನ್ಗಳಲ್ಲಿ ಪಾಲ್ಗೋಳ್ಳಲು ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಖ್ಯಾತಿಯ ಅಲ್ಟ್ರಾ ಮ್ಯಾರಾಥಾನ್ ಕ್ರೀಡಾಪಟು 53 ವರ್ಷದ ರಾಜಿಂದರ್ ಕೌರ್ ಮಾತನಾಡಿ, ನಾನು ಈ ಮುಂಚೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಓಟಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ವೃಕ್ಷಥಾನ್ ಹೆರಿಟೇಜ್ ರನ್- 2023 ನಲ್ಲಿ ಪಾಲ್ಗೋಳ್ಳಲು ಸಾವಿರಾರು ಜನ ತಮ್ಮ ಹೆಸರುಗಳನ್ನು ನೋಂದಾಯಿಸಿರುವುದು ಅಚ್ಚರಿಯಷ್ಟೇ ಅಲ್ಲ, ಅತೀ ಹೆಚ್ಚು ಸಂತಸವನ್ನುಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೋಂದಣಿ ಸಮಿತಿ ಉಸ್ತುವಾರಿ ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಟ್ಟಿ ಈವರೆಗೆ 7000ಕ್ಕೂ ಹೆಚ್ಚು ಜನ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಸಂಖ್ಯೆ 8000 ದಾಟುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.
ಖ್ಯಾತ ಉದ್ಯಮಿ ಚಂದ್ರಕಾಂತ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಆಯೋಜನೆ ಕುರಿತು ಕೈಗೊಳ್ಳಲಾದ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಚಾಲಕ ಮುರಗೇಶ ಪಟ್ಟಣಶೆಟ್ಟಿ, ಈಗಾಗಲೇ ವೃಕ್ಷಥಾನ್ ಹೆರಿಟೇಜ್ ರನ್- 2023 ಕುರಿತು ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಹೆಸರು ನೋಂದಾಯಿಸಿದ್ದಾರೆ. ಅಲ್ಲದೇ, ರೂಟ್, ಹೈಡ್ರೇಶನ್ ಪಾಯಿಂಟ್ಸ್, ಕ್ರೀಡಾಪಟುಗಳು ಓಡುವ ಪ್ರಮುಖ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ನಗರದ ಎಲ್ಲರೂ ಈ ಕ್ರೀಡಾಕೂಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ನಾವೇದ ನಾಗಠಾಣ ಮಾತನಾಡಿ, ಈವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2023 ಆಯೋಜನೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಅಲ್ಲದೇ, ಇದರಲ್ಲಿ ಪಾಲ್ಗೋಳ್ಳುತ್ತಿರುವ ಖ್ಯಾತನಾಮರ ಕುರಿತು ಕೂಡ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋರ್ ಕಮೀಟಿಯ ಮುಖಂಡರಾದ ಸಂಕೇತ ಬಗಲಿ, ಶಿವನಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ಶಾಂತೇಶ ಕಳಸಗೊಂಡ, ಸಂತೋಷ ಔರಸಂಗ, ಶಿವಾನಂದ ಯರನಾಳ, ಅಮೀತ ಬಿರಾದಾರ, ನಾವೀದ ನಾಗಠಾಣ, ಸೋಮು ಮಠ, ಆಕಾಶ ಚೌಕಿಮಠ, ಮಹೇಶ ವಿ. ಶಟಗಾರ, ಜಗದೀಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories