ವಿಜಯಪುರ : ಗ್ಯಾರಂಟಿ ಯೋಜನೆಗಳಿಗೆ ಅಡ್ಡಗಾಲು ಹಾಕಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಸರ್ವರ್ ಹ್ಯಾಕ್ ಮಾಡಿದೆ ಎನ್ನುವ ಸಚಿವ ಸತೀಶ ಜಾರಕಿಹೊಳಿ ಆರೋಪದಲ್ಲಿ ಹುರುಳಿಲ್ಲ, ಅವರ ಬುದ್ಧಿ ಅಷ್ಟೇ ಇದೆ ಅದಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಅಸಮಾಧನ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು ಸರ್ವರ್ ಹ್ಯಾಕ್ ಏಕೆ ಮಾಡುತ್ತಾರೆ, ನಾವು ಸರ್ವರ್ ಹ್ಯಾಕ್ ಮಾಡಿಲ್ಲ ನೀವೇ ಹ್ಯಾಕ್ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರದ ಮೇಲೆಯೇ ಜಿಗಜಿಣಗಿ ಆರೋಪಿಸಿದರು.
10 ಕೆಜಿ ಅಕ್ಕಿ ಕೊಡುವೆ ಎಂದು ಹೇಳಿದ್ದ ಸಿದ್ಧರಾಮಯ್ಯ ಅವರು ಈ ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪಾಲು ಇದೆ ಎಂದು ಹೇಳಬೇಕಿತ್ತು ಅಲ್ಲವೇ? ಕೇಂದ್ರ ಸರ್ಕಾರದ ಅಕ್ಕಿ ಹೊರತಾಗಿ ಬೇರೆ ಹತ್ತು ಕೆಜಿ ಕೊಡುವುದಾಗಿಯಾದರೂ ಹೇಳಬೇಕಿತ್ತು, ಇವರು ಜನರಿಗೆ ಮೋಸ ಮಾಡುತ್ತಿದ್ದಾರೆ ಬಿಜೆಪಿಯವರಿಗೇನು ಬಡವರು ಬೇಡವಾಗಿದ್ದಾರಾ? ಎಂದು ಪ್ರಶ್ನಿಸಿದರು.
ಕೊರೋನಾ ಮಹಾಮಾರಿಯ ಕಾಲದಲ್ಲಿ ಉಚಿತ ಪಡಿತರವನ್ನು ಕೇಂದ್ರ ಸರ್ಕಾರ ನೀಡಿದೆ, ಕಾಂಗ್ರೆಸ್ ನವರ ಈ ಆರೋಪವನ್ನು ನಾನು ಖಂಡಿಸುತ್ತೇನೆ ಸರ್ವರ್ ಹ್ಯಾಕ್ ಮಾಡೋದು ನಾವು ಮಾಡಿದ ಕೆಲಸವಲ್ಲ.
ದೇಶದ ಇತರ ಕಡೆಗಳಲ್ಲಿ ಆಗದ ಸರ್ವರ್ ಡೌನ್ ಇಲ್ಲೆ ಯಾಕೆ ಡೌನ್ ಆಗಿದೆ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯಶಸ್ವಿಯಾಗಬಾರದು ಎಂದು ನಾವು ಯಾವ ಹುನ್ನಾರ ನಡೆಸಿಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದರು.