ವಿಜಯಪುರ : ಕೆರೆ ತುಂಬುವ ಯೋಜನೆ ಅನುಷ್ಠಾನ ಹಿನ್ನೆಲೆಯಲ್ಲಿ ಇಂಡಿ ಭಾಗದ ರೈತರಲ್ಲಿ ಮಂದಹಾಸ ಮೂಡುತ್ತಿದೆ, ಅವರ ಬದುಕು ಹಸನಾಗುತ್ತಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2001 ರಲ್ಲಿ ಇಂಡಿ ಶಾಖಾ ಕಾಲುವೆ ಮೂಲಕ ಇಂಡಿ ಭಾಗಕ್ಕೆ ನೀರು ಕಲ್ಪಿಸಲಾಯಿತು. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಡಿ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕೆರೆಗಳಿಗೆ ನೀರು ತುಂಬುವ ಯೋಜನೆ ಅನುಷ್ಠಾನಗೊಂಡ ಹಿನ್ನೆಲೆ ಇಂಡಿ ಭಾಗದ ರೈತರು ಸಂತುಷ್ಠರಾಗಿದ್ದಾರೆ ಎಂದರು.
ಜನರು ಸಮೃದ್ಧಿಯಿಂದ ಬದುಕಲು ಪ್ರಾರಂಭಿಸಿದ್ದಾರೆ, ಇನ್ನೂ 16 ಗ್ರಾಮಗಳಿಗೆ ನೀರು ಕಲ್ಪಿಸಲು 18 ಕೆರೆ ತುಂಬುವ ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಟೆಂಡರ್ ಹಂತದಲ್ಲಿದೆ. ಇಂಡಿ ಪಟ್ಟಣಕ್ಕೆ 24*7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗೆ ಈ ಎಲ್ಲ ಯೋಜನೆಗಳಿಂದ ಇಂಡಿ ಭಾಗ ಸಮಗ್ರ ಪ್ರಗತಿ ಸಾಧಿಸಿದೆ ಎಂದರು.
ಮೆಗಾ ಮಾರುಕಟ್ಟೆ, ಕ್ರೀಡಾಂಗಣ, ಕೃಷಿ ವಿಜ್ಞಾನ ಕೇಂದ್ರ, ಲಿಂಬೆ ಅಭಿವೃದ್ಧಿ ಮಂಡಳಿ, ಭೀಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಇಂಡಿ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸಿವೆ. ಮುಂಬರುವ ದಿನಗಳಲ್ಲಿ ಇಂಡಿ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಸ್ತೆ ಅಭಿವೃದ್ಧಿ ಮಾತ್ರ ಕುಂಠಿತಗೊಂಡಿರುವುದು ನೋವು ತಂದಿದೆ. ಈ ಸರ್ಕಾರ ರಸ್ತೆ ಅಭಿವೃದ್ಧಿಗೆ ಅನುದಾನವೇ ಇರಿಸಲಿಲ್ಲ. ಸರ್ಕಾರದ ತಾರತಮ್ಯ ನೀತಿ ನೋವು ತರಿಸಿದೆ. ಸರ್ಕಾರದ ಬಗ್ಗೆ ಜನರಲ್ಲಿ ಸಾಕಷ್ಟು ಅಸಮಾಧಾನ ಇದ್ದು ಈ ಬಾರಿ ಜನ ತಕ್ಕ ಪಾಠ ಕಲಿಸಲಿದ್ದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಇಂಡಿ ಜಿಲ್ಲಾ ಕೇಂದ್ರಕ್ಕೆ ಬೇಡಿಕೆ
ಇಂಡಿ ಜಿಲ್ಲಾ ಕೇಂದ್ರ ಆಗಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಸದನದಲ್ಲೂ ಸಾಕಷ್ಟು ಬಾರಿ ಧ್ವನಿ ಎತ್ತಿದ್ದೇನೆ. ಜಿಲ್ಲಾ ಕೇಂದ್ರ ಆಗಲು ಬೇಕಿರುವ ಎಲ್ಲ ಮೂಲ ಸೌಕರ್ಯ ಇಂಡಿಯಲ್ಲಿವೆ. ಹೀಗಾಗಿ ಭವಿಷ್ಯದಲ್ಲಿ ಹೊಸ ಜಿಲ್ಲೆ ಸ್ಥಾಪನೆ ವೇಳೆ ಇಂಡಿಯನ್ನೂ ಪರಿಗಣಿಸಬೇಕೆಂಬುದು ನಮ್ಮ ಒತ್ತಾಯವಿದೆ ಎಂದು ಯಶವಂತರಾಯಗೌಡ ಪಾಟೀಲ ಪ್ರತಿಕ್ರಿಯಿಸಿದರು.
ಇಂಡಿ ಜಿಲ್ಲಾ ಕೇಂದ್ರ ಆಗುವುದರಿಂದ ಗಡಿಭಾಗದ ಅಪರಾಧ ಕೃತ್ಯಗಳಿಗೆ ಬ್ರೇಕ್ ಬೀಳಲಿದೆ. ಮೊದಲು ಐದು ಇದ್ದ ತಾಲೂಕು ಈಗ 13 ತಾಲೂಕು ಆಗಿಲ್ಲವೇ? ಅದೇ ರೀತಿ ಐದು ತಾಲೂಕು ಕೇಂದ್ರ ಸೇರಿ ಇಂಡಿ ಜಿಲ್ಲಾ ಕೇಂದ್ರ ಯಾಕಾಗಬಾರದು? ಮುಂದೊಂದು ದಿನ ಇಂಡಿ ಜಿಲ್ಲಾ ಕೇಂದ್ರವಾಗಿಸಲು ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನೂ ಕಲ್ಪಿಸುವೆ ಎಂದರು.