ವರದಿ: ಸಮೀವುಲ್ಲಾ ಉಸ್ತಾದ
ವಿಜಯಪುರ: ಈಗಿನ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ವೈಶಿಷ್ಟವೇ ವಿಭಿನ್ನ. ಅವಿರೋಧ ಆಯ್ಕೆಯ ದಾಖಲೆ ಬರೆದಿರುವ ಏಕೈಕ ಕ್ಷೇತ್ರದ ಜೊತೆಗೆ ಬಿ.ಎಸ್. ಪಾಟೀಲ ಸಾಸನೂರ ಅವರಿಗೊಮ್ಮೆ ಒಮ್ಮೆ ಶಿವಪುತ್ರಪ್ಪ ದೇಸಾಯಿ ಅವರಿಗೊಮ್ಮೆ ಮಣೆ ಹಾಕುವ ಮೂಲಕ ವಿಶಿಷ್ಟ ರೀತಿಯ ಸ್ವಾರಸ್ಯಕ್ಕೂ ಹೆಸರಾಗಿದೆ.
ಒಮ್ಮೆ ಬಿ.ಎಸ್. ಪಾಟೀಲ ಸಾಸನೂರ, ಒಮ್ಮೆ ಶಿವಪುತ್ರಪ್ಪ ದೇಸಾಯಿ ಆಯ್ಕೆಯಾಗಬೇಕು ಎಂಬಂತೆ ಮತದಾರರು ನಿರ್ಧರಿಸಿದಂತಿತ್ತು, ಅಷ್ಟರ ಮಟ್ಟಿಗೆ ದೇಸಾಯಿ ಹಾಗೂ ಬಿ.ಎಸ್. ಪಾಟೀಲ ಸಾಸನೂರ ಈ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಗಳಾಗಿದ್ದರು. 1983 ರಿಂದ 2004ರವರೆಗೂ ಸಾಸನೂರ-ದೇಸಾಯಿ ಅವರ ನಡುವೆ ಈ ಕ್ಷೇತ್ರ ರಣಕಣವಾಗಿ ಮಾರ್ಪಟ್ಟಿತ್ತು.
1978 ರಲ್ಲಿ ಬಿ.ಎಸ್. ಪಾಟೀಲ ಸಾಸನೂರ ಅವರು ಜೆಎನ್‌ಪಿ ಪಕ್ಷದಿಂದ ಆಯ್ಕೆಯಾಗುವ ಮೂಲಕ ಶಾಸನಸಭೆ ಪ್ರವೇಶಿಸಿದರು.ತದನಂತ ನಡೆದ ಚುನಾವಣೆಯಲ್ಲೂ ಅಂದರೆ 1983 ರಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬಿ.ಎಸ್. ಪಾಟೀಲ ಸಾಸನೂರ ಪುನರಾಯ್ಕೆಯಾದರು. 1985 ರಲ್ಲಿ ಜೆಎನ್‌ಪಿಯಿಂದ ಶಿವಪುತ್ರಪ್ಪ ಮಡಿವಾಳಪ್ಪ ದೇಸಾಯಿ ಅವರು ಸಾಸನೂರ ಅವರನ್ನು ಪರಭಾವ ಮಾಡಿ ವಿಧಾನಸಭೆಗೆ ಎಂಟ್ರಿ ಮಾಡಿದರು. ಅಲ್ಲಿಂದ ದೇಸಾಯಿ ಹಾಗೂ ಸಾಸನೂರ ನಡುವಣ ಫೈಟ್‌ಗೆ ಈ ಮತಕ್ಷೇತ್ರ ಹೆಸರುವಾಸಿಯಾಗಿತ್ತು.
1989 ರಲ್ಲಿ ಪುನ: ಬಿ.ಎಸ್. ಫಾಟೀಲ ಸಾಸನೂರ ಅವರು ದೇಸಾಯಿ ಅವರನ್ನು ಪರಾಭವಗೊಳಿಸಿ ಶಾಸನಸಭೆ ಪ್ರವೇಶಿಸಿದರು. ನಂತರ 1994ರಲ್ಲಿ ಸಾಸನೂರ ಅವರನ್ನು ಪರಭಾವಗೊಳಿಸಿ ಶಿವಪುತ್ರಪ್ಪ ದೇಸಾಯಿ ಜನತಾದಳದಿಂದ ಆಯ್ಕೆಯಾದರು. ತದನಂತರ 1999 ರಲ್ಲಿ ಶಿವಪುತ್ರಪ್ಪ ದೇಸಾಯಿ ಅವರನ್ನು ಬಿ.ಎಸ್. ಪಾಟೀಲ ಸಾಸನೂರ ಪರಭಾವಗೊಳಸಿದರು. ಆನಂತರವೂ ಈ ಕ್ಷೇತ್ರದ ಸಂಪ್ರದಾಯವೇನೋ ಎಂಬಂತೆ ಪುನ: 2004 ರಲ್ಲಿ ಶಿವಪುತ್ರಪ್ಪ ದೇಸಾಯಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಬಿ.ಎಸ್. ಪಾಟೀಲ ಸಾಸನೂರ ಅವರನ್ನು ಪರಾಭವಗೊಳಿಸಿದರು. ಆ ಮೂಲಕ 1983 ರಿಂದ 2004ರವರೆಗೂ ಸಾಸನೂರ-ದೇಸಾಯಿ ಅವರ ನಡುವೆ ಈ ಕ್ಷೇತ್ರ ರಣಕಣವಾಗಿ ಮಾರ್ಪಟ್ಟಿತ್ತು. ನಂತರ 2008 ರಲ್ಲಿ ಎ.ಎಸ್. ಪಾಟೀಲ ನಡಹಳ್ಳಿ ಈ ಕ್ಷೇತ್ರದ ಮೇಲೆ ಅಧಿಪತ್ಯ ಸಾಧಿಸಿ ಸತತ ಎರಡು ಬಾರಿ ಆಯ್ಕೆಯಾದರು.
ಅವಿರೋಧ ಆಯ್ಕೆಯ ದಾಖಲೆ
ತಾಳಿಕೋಟೆ, ಹೂವಿನ ಹಿಪ್ಪರಗಿ, ದೇವರಹಿಪ್ಪರಗಿ ಹೀಗೆ 1957 ರಿಂದ ಇಲ್ಲಿಯವರೆಗೆ ಪ್ರಸ್ತುತ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಪುನರ್ವಿಂಗಡನೆಯಾಗುತ್ತಲೇ ಬಂದಿದೆ, ಆದರೆ ಅವಿರೋಧ ಆಯ್ಕೆಯ ಅನುಪಮ ದಾಖಲೆ (ತಾಳಿಕೋಟೆ ವಿಧಾನಸಭಾ ಕ್ಷೇತ್ರವಾಗಿದ್ದ ಸಂದರ್ಭದಲ್ಲಿ) ಬರೆಯುವ ಮೂಲಕ ಅಚ್ಚಳಿಯದ ಇತಿಹಾಸ ದಾಖಲಿಸಿದೆ.
1957 ರಲ್ಲಿ ರಚನೆಯಾದ ತಾಳಿಕೋಟೆ ವಿಧಾನಸಭಾ ಕ್ಷೇತ್ರ 1967 ರಲ್ಲಿ ಹೂವಿನ ಹಿಪ್ಪರಗಿ ವಿಧಾನಸಭಾ ಕ್ಷೇತ್ರವಾಗಿ ಬದಲಾಯಿತು, ತದನಂತರ 2008 ರಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರವಾಗಿ ಬದಲಾಗಿದೆ.
1957 ರಲ್ಲಿ ಕುಮಾರಗೌಡ ಪಾಟೀಲ ಅವರು ಪಕ್ಷೇತರವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಪ್ರಥಮ ಶಾಸಕರಾದರು. 1962 ರಲ್ಲಿ ಕಾಂಗ್ರೆಸ್ ಪಕ್ಷದ ಗದಗಿಗೆಪ್ಪಗೌಡ ನಿಂಗನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಜಿದ್ದಾಜಿದ್ದಿನ ಚುನಾವಣೆ ಕಣದಲ್ಲಿ ವಿಧಾನಸಭೆ ನಾಯಕರೊಬ್ಬರನ್ನು ಅವಿರೋಧವಾಗಿ ಕಳುಹಿಸುವ ಮೂಲಕ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿಯೇ ಒಂದು ಸಾರ್ವಕಾಲಿಕ ದಾಖಲೆಯನ್ನು ತಾಳಿಕೋಟೆ ವಿಧಾನಸಭಾ ಕ್ಷೇತ್ರದ (ಇಂದಿನ ದೇವರಹಿಪ್ಪರಗಿ) ಜನತೆ ದಾಖಲಿಸಿದ್ದು ವಿಶೇಷವೇ ಸರಿ.
ಈ ವಿಧಾನಸಭಾ ಕ್ಷೇತ್ರದಿಂದ ಇಲ್ಲಿಯವರೆಗೂ ಹ್ಯಾಟ್ರಿಕ್ ಸಾಧನೆ ತೋರಿಲ್ಲ. ಬಿ.ಎಸ್. ಪಾಟೀಲ ಸಾಸನೂರ ನಾಲ್ಕು ಬಾರಿ ಆಯ್ಕೆಯಾದರೂ ಹ್ಯಾಟ್ರಿಕ್ ದಾಖಲೆ ಮಾಡಿಲ್ಲ, ಶಿವಪುತ್ರಪ್ಪ ದೇಸಾಯಿ ಮೂರು ಬಾರಿ, ಗದಿಗೆಪ್ಪಗೌಡ ಪಾಟೀಲ ಎರಡು ಬಾರಿ, ಎ.ಎಸ್. ಪಾಟೀಲ ನಡಹಳ್ಳಿ ಎರಡು ಬಾರಿ ಈ ಕ್ಷೇತ್ರದ ಶಾಸಕರಾಗಿದ್ದಾರೆ.
ಮತಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು
1957 – ಕುಮಾರಗೌಡ ಅಡಿವೆಪ್ಪಗೌಡ ಪಾಟೀಲ (ಪಕ್ಷೇತರ)
1962 – ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ (ಕಾಂಗ್ರೆಸ್)
1967 – ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ (ಕಾಂಗ್ರೆಸ್)
1972 – ಕೆ.ಡಿ. ಪಾಟೀಲ (ಎನ್‌ಸಿಓ)
1978 – ಬಿ.ಎಸ್. ಪಾಟೀಲ ಸಾಸನೂರ (ಜೆಎನ್‌ಪಿ)
1983 – ಬಿ.ಎಸ್. ಪಾಟೀಲ ಸಾಸನೂರ (ಕಾಂಗ್ರೆಸ್)
1985 – ಶಿವಪುತ್ರಪ್ಪ ದೇಸಾಯಿ (ಜೆಎನ್‌ಪಿ)
1989 – ಬಿ.ಎಸ್. ಪಾಟೀಲ ಸಾಸನೂರ (ಕಾಂಗ್ರೆಸ್)
1994 – ಶಿವಪುತ್ರಪ್ಪ ದೇಸಾಯಿ (ಜನತಾದಳ)
1999 – ಬಿ.ಎಸ್. ಪಾಟೀಲ ಸಾಸನೂರ (ಕಾಂಗ್ರೆಸ್)
2004 – ಶಿವಪುತ್ರಪ್ಪ ದೇಸಾಯಿ (ಬಿಜೆಪಿ)
2008 – ಎ.ಎಸ್. ಪಾಟೀಲ ನಡಹಳ್ಳಿ (ಕಾಂಗ್ರೆಸ್)
2013 – ಎ.ಎಸ್. ಪಾಟೀಲ ನಡಹಳ್ಳಿ (ಕಾಂಗ್ರೆಸ್)
2018 – ಸೋಮನಗೌಡ ಪಾಟೀಲ ಸಾಸನೂರ (ಬಿಜೆಪಿ)