ವಿಜಯಪುರ: ಭಗವಂತ ಕರುಣಿಸಿದ ಅಮೂಲ್ಯವಾದ ಬದುಕಿನ ಬಗ್ಗೆ ಪ್ರವಚನಾಮೃತವನ್ನು ಉಣಬಡಿಸುವ ಶ್ರೀ ಸಿದ್ದೇಶ್ವರ ಶ್ರೀಗಳು ಬದುಕಿನ ಅರ್ಥದ ಸಂದೇಶವನ್ನು, ಬದುಕಿನ ತಾತ್ಪರ್ಯವನ್ನು ಸಾರಿ ಹೋಗಿದ್ದಾರೆ.
2014 ಗುರುಪೂರ್ಣಿಮೆಯ ಸಂದರ್ಭದಲ್ಲಿಯೇ ತಮ್ಮ ಅಂತಿಮ ಅಭಿವಂದನ ಪತ್ರವನ್ನು ಶ್ರೀ ಸಿದ್ದೇಶ್ವರ ಶ್ರೀಗಳು ರಚಿಸಿದ್ದಾರೆ. ಶ್ರೀಗಳ ಈ ಪತ್ರವೇ ಒಂದು ಆದರ್ಶ ಬದುಕಿನ ಸಂದೇಶ.
ಬದುಕು ಎಂದರೇನು? ದೇಹದ ಆಶಯ ಆ ಅಭಿವಂದನ ಪತ್ರದಲ್ಲಿ ವ್ಯಕ್ತ. ಅಲ್ಲಮಪ್ರಭುದೇವರ ವಚನಗಳನ್ನು ಪ್ರವಚನಗಳಲ್ಲಿ ಸದಾ ವಿವರಿಸುತ್ತಲೇ ಇದ್ದ ಶ್ರೀಗಳು ತಮ್ಮ ಅಭಿವನಂದನದ ಪತ್ರವನ್ನು ಸಂಪನ್ನಗೊಳಿಸಿದ್ದು ಸಹ ಅಲ್ಲಮನ ವಚನದಿಂದಲೇ…. ಬದುಕಿನ ಕುರಿತಾದ ಅಲ್ಲಮ್ಮನ ವಚವನ್ನು ಶ್ರೀಗಳು ಉಲ್ಲೇಖಿಸಿ ತಮ್ಮ ಪತ್ರವನ್ನು ಸಂಪನ್ನಗೊಳಿಸಿದ್ದಾರೆ.
ಶ್ರೀಗಳು ರಚಿಸಿದ ಅಭಿವಂದನ ಪತ್ರದ ಸಾರಾಂಶ……..
ಬದುಕು ಅನುಭವಗಳ ಪ್ರವಾಹ, ಅದರ ಸಿರಿವಂತಿಕೆಯು ವಿಶ್ವಚಿಂತನೆ ಹಾಗೂ ಸತ್ಯಶೋಧನೆಗಳಿಂದ. ಅದರ ಸೌಂದರ್ಯವು ರಾಗ ದ್ವೇಷರಹಿತವಾದ ಹಾಗೂ ಅಸೀಮಿತವಾಧ ಸದ್ಭಾವದಿಂದ. ಅದನ್ನು ಸಮೃದ್ಧಗೊಳಿಸುವುದೇ ಸಾಧನೆ. ಅಂತಹ ಜೀವನದ ಉಪಯುಕ್ತವಾ ಅನುಭವಗಳನ್ನು ಆಸಕ್ತರೊಂದಿಗೆ ಹಂಚಿಕೊಳ್ಳುವುದೇ ಧರ್ಮ, ಅದು ಸ್ವ-ಪರ ನೆಮ್ಮದಿಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಅವರ ಬದುಕನ್ನು ಸಹ ಅರ್ಥಪೂರ್ಣವಾಗಿ ಅರ್ಥೈಸಿರುವ ಶ್ರೀಗಳು, ನನ್ನದು ಆವೇಗವಿಲ್ಲದ, ಸಾವಧಾನದ ಬದುಕು, ಸಾಮಾನ್ಯ ಬದುಕು, ಅದನ್ನು ರೂಪಿಸಿದವರು ಗುರುದೇವರು, ಅದನ್ನು ಹದುಳಿಸಿದವರು ನಾಡಿನ ಪೂಜ್ಯರು, ಹಿತೈಷಿಗಳು, ಸಹೃದಯರು, ಸಾಧಕರು ಹಾಗೂ ಶ್ರೀ ಸಾಮಾನ್ಯರು. ನಿಸರ್ಗವು ಮೈ ಮನಸ್ಸುಗಳಿಗೆ ತಂಪನಿತ್ತಿದೆ, ತಾತ್ವಿಕ ಚಿಂತನೆಗಳು ತಿಳಿಬೆಳಗ ಹರಿಡಿವೆ, ಜಾಗತಿಕ ತತ್ವಜ್ಞಾನಿಗಳ ಮತ್ತು ವಿಜ್ಞಾಣಿಗಳ ಶೋಧಣೆಗಳು ದೃಷ್ಟಿಯ ಪರಿಸೀಮೆಯನ್ನು ದೂರ ದೂರ ಸರಿಸಿವೆ.
ಆದ್ದರಿಂದಲೇ ನಾನು ಎಲ್ಲರಿಗೂ, ಎಲ್ಲದಕ್ಕೂ ಉಪಕೃತ. ಬದುಕು ಮುಗಿಯುತ್ತದೆ. ದೀಪ ಆರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ, ಉಳಿಯುವುದು ಬರೀ ಬಯಲು…. ಮಹಾಮೌನ, ಶೂನ್ಯ ಸತ್ಯ. ಹಲವು ದಶಕಗಳ ಕಾಲ ಈ ಅದ್ಭುತ ಜಗತ್ತಿನಲ್ಲಿ ಬಾಳಿದ್ದೇನೆ, ನೋಡಿ ತಿಳಿದು ಅನುಭವಿಸಿದ್ದೇನೆ. ನನ್ನ ಬದುಕು ಕೊನೆಗೊಳ್ಳುವ ಮುಂಚೆ ಅದನ್ನು ಕೃತಜ್ಞತೆಯಿಂದ ಸ್ಮರಿಸಬೇಕು, ಅದಕ್ಕಾಗಿ ಅಂತಿಮ ಅಭಿವಾದನ ಪತ್ರ ಎಂದು ಶ್ರೀಗಳು ರಚಿಸಿದ್ದಾರೆ.
ತಮ್ಮ ದೇಹದ ವಿಷಯವಾಗಿಯೂ ವಿಷಯ ಉಲ್ಲೇಖಿಸಿದರುವ ಶ್ರೀಗಳು, ದೇಹವನ್ನು ಭೂಮಿಯಲ್ಲಿಡುವ ಬದುಲು ಅಗ್ನಿಯರ್ಪಿತ ಮಾಡುವುದು, ಶ್ರಾದ್ಧಿಕ ವಿಧಿ-ವಿಧಾನ ಕರ್ಮಗಳು ಅನಗತ್ಯ, ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು, ಯಾವುದೇ ಬಗೆಯ ಸ್ಮಾರಕ ನಿರ್ಮಿಸಲಾಗದು ಎಂದು ಘೋಷಿಸಿದ್ದಾರೆ.
ಅಂತಿಮವಾಗಿ ಅಲ್ಲಮನ ವಚನಗಳನ್ನು ಉಲ್ಲೇಖಿಸಿ` ಸತ್ಯವೂ ಇಲ್ಲ, ಅಸತ್ಯವೂ ಇಲ್ಲ. ಸಹಜವೂ ಇಲ್ಲ, ಅಸಹಜವೂ ಇಲ್ಲ, ನಾನೂ ಇಲ್ಲ, ನೀನೂ ಇಲ್ಲ, ಇಲ್ಲ..ಇಲ್ಲ….ಎಂಬುದು ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು ಎಂದಿದ್ದಾರೆ.
ಅಂತ್ಯ: ಪ್ರಣಾಮಾಜಂಲಿ ಎಂದು ಬರೆದು ತಮ್ಮ ಹಸ್ತಾಕ್ಷರ ಮಾಡಿದ್ದಾರೆ. ಅದಕ್ಕೆ ನ್ಯಾಯಾಧೀಶರು ಸಹ ಸಹಿ ಮಾಡಿದ್ದಾರೆ.