ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಗಣ್ಯರ ದಂಡು

ವಿಜಯಪುರ : ಅನಾರೋಗ್ಯದಿಂದ ನಿತ್ರಾಣವಾಗಿರುವ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಶಾಸಕರಾದ ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ ಮತ್ತು ಕಾಂಗ್ರೆಸ್ ಮುಖಂಡರು ಭೇಟಿಯಾಗಿ, ದರ್ಶನ ಪಡೆದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ಮಾತನಾಡಿರುವೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ, ಅವರು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು. ಧರ್ಮ ಎಂಬುದು ಜೀವನ ಮಾರ್ಗ, ಮನುಷ್ಯನ ಒಳಿತಿಗೆ ಸಹಕಾರಿ ಎಂದು ಜನತೆಗೆ ತಿಳಿಸುತ್ತಿದ್ದರು ಎಂದರು. ಶ್ರೀಗಳು ಜಾತ್ಯತೀತ ನಿಲುವುಳ್ಳವರಾಗಿದ್ದಾರೆ, ಆಳವಾದ ಜ್ಞಾನ ಹೊಂದಿದ್ದಾರೆ, ಸಿದ್ದೇಶ್ವರ ಶ್ರೀಗಳು ದೊಡ್ಡ ಧಾರ್ಮಿಕ ಸಂತ, ಅವರು ಪ್ರವಚನದ ಮೂಲಕ ಜನರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದವರು ಎಂದರು.

ಊಹಾಪೋಹಗಳಿಗೆ ಕಿವಿಗೊಡಬೇಡಿ
ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಆಹಾರ ಸೇವನೆ ಮಾಡದ ಕಾರಣದಿಂದಾಗಿ ಶ್ರೀಗಳು ನಿತ್ರಾಣವಾಗಿದ್ದಾರೆ, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು. ಶ್ರೀ ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಶಕ್ತಿ, ನುಡಿದಂತೆ ನಡೆಯುವ ಮಹಾನ್ ಸಂತ, ಸದ್ಭಕ್ತರ ಪ್ರಾರ್ಥನೆ ಫಲಿಸಲಿ, ಅವರು ಶೀಘ್ರವೇ ಗುಣಮುಖವಾಗಲಿ ಎಂದರು. ಭಗವಂತನಲ್ಲಿ ನಾನು ಸಹ ಅವರ ಆರೋಗ್ಯಕ್ಕಾಗಿ ಅನುಕ್ಷಣ ಪ್ರಾರ್ಥಿಸುತ್ತಿರುವೆ ಎಂದರು.

ಮುಸ್ಲಿಂ ಧರ್ಮಗುರು ಭೇಟಿ
ಕರ್ನಾಟಕ ಅಹಲೆ ಸುನ್ನತ್ ಜಮಾತ್ ಅಧ್ಯಕ್ಷ, ಮುಸ್ಲಿಂ ಧರ್ಮಗುರು ಹಜರತ್ ಸೈಯ್ಯದ್ ತನ್ವೀರ ಪೀರಾ ಹಾಶ್ಮೀ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದರು.
ನಂತರ ಮಾತನಾಡಿದ ಅವರು, ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಒಬ್ಬ ಮಹಾನ್ ಸಂತ, ಸರ್ವಧರ್ಮಗಳ ಸಮನ್ವಯತೆಯ ತತ್ವಗಳನ್ನು ಸಾರುವ ಮಹಾನ್ ಜ್ಞಾನಿ, ಮಾನವೀಯತೆ, ಪರೋಪಕಾರ, ದಯೆಯ ಗುಣವನ್ನು ಜನರಲ್ಲಿ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಅವರು ಶೀಘ್ರವೇ ಚೇತರಿಸಲಿ ಎಂದು ನಾನು ಸಹ ಅಲ್ಲಾಹುವಿನಲ್ಲಿ ದುವಾ ಮಾಡಿರುವೆ, ಸಮಸ್ತ ಮುಸ್ಲಿಂ ಬಾಂಧವರು ಸಹ ಶ್ರೀಗಳ ಗುಣಮುಖರಾಗಲು ದುವಾ ಮಾಡುತ್ತಿದ್ದಾರೆ ಎಂದರು.

ಶ್ರೀಗಳ ಕಾಲಘಟ್ಟದಲ್ಲಿ ನಾವಿರುವುದೇ ಪುಣ್ಯ….
ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಾಶೀರ್ವಾದ ಪಡೆದು ಅವರ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಖ್ಯಾತ ಚಿಂತಕ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ.ಗುರುರಾಜ್ ಕರ್ಜಗಿ ಮಾತನಾಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ವ್ಯಕ್ತಿತ್ವ ಬಣ್ಣಿಸುವ ಪದಗಳೇ ಇಲ್ಲ, ಅವರ ಮೇರು ವ್ಯಕ್ತಿತ್ವವನ್ನು ಬೋಧಿಸಲು ಪದಗಳು ಸಾಲುವುದೇ ಇಲ್ಲ ಎಂದರು. ಸರಳತೆ, ಸಾತ್ವಿಕತೆ, ಸಂಸ್ಕಾರ, ಜೀವನ ಮೌಲ್ಯಗಳ ಸಾಕಾರ ರೂಪದಂತಿರುವ ಶ್ರೀಗಳನ್ನು ನಾವು ನೋಡುವುದೇ ಒಂದು ಪುಣ್ಯ, ಅವರಿರುವ ಕಾಲಘಟ್ಟದಲ್ಲಿ ನಾವು ಇರುವುದೇ ಒಂದು ದೊಡ್ಡ ಪುಣ್ಯ, ಶೀಘ್ರದಲ್ಲಿ ಮಹಾನ್ ಸಂತ ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.

Latest Indian news

Popular Stories