ಸುಗಮ ಸಂಚಾರಕ್ಕೆ ಅನುಕೂಲವಾಗಲಿರುವ ರೇಲ್ವೆ ಮೇಲ್ಸುತುವೆ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಈ ಭಾಗದ ಜನರ ಹಾಗೂ ಜನಪ್ರತಿನಿಧಿಗಳ ಬಹುದಿನಗಳ ಬೇಡಿಕೆಯಾಗಿದ್ದ ರೇಲ್ವೆ ಮೇಲ್ಸುತುವೆ ಇಂದು ಲೋಕಾರ್ಪಣೆಗೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಸೋಮವಾರ ನಗರದ ಇಬ್ರಾಹಿಂಪೂರ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 81ಕ್ಕೆ ಬದಲಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಲೆವಲ್ ಕ್ರಾಸಿಂಗ್ ಗೇಟ್ ಸಂಖ್ಯೆ 81 ಇಬ್ರಾಹಿಂಪುರ ಹಾಲ್ಟ್ ಮತ್ತು ವಿಜಯಪುರ ರೈಲು ನಿಲ್ದಾಣಗಳ ನಡುವೆ ಇರುವುದರಿಂದ ಅತಿ ಹೆಚ್ಚಿನ ಜನದಟ್ಟಣೆಯಾಗಿ ಸುಗಮ ಸಂಚಾರಕ್ಕೆ ಅನಾನೂಕೂಲ ಆಗಿರುವುದನ್ನು ಮನಗಂಡು ತಡೆ ರಹಿತ ಸಂಚಾರಕ್ಕಾಗಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಈ ಭಾಗದ ಜನರ ಮತ್ತು ಜನಪ್ರತಿನಿಧಿಗಳ ಬೇಡಿಕೆಗೆ ಸ್ಪಂದಿಸಿ, 20.62 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಲಾಗಿತ್ತು. ಆದರೆ ರಸ್ತೆ ಬಳಕೆದಾರರಿಗೆ, ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಕಾಮಗಾರಿಯನ್ನು ಪರಿಷ್ಕರಣೆಗೊಳಿಸಿ, 31.275 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ರೇಲ್ವೆ ಮತ್ತು ಕರ್ನಾಟಕ ಸರ್ಕಾರ ವೆಚ್ಚ ಹಂಚಿಕೆ ಆಧಾರದಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ರಸ್ತೆ ಮೇಲ್ಸೇತುವೆ ಪೂರ್ವದಲ್ಲಿ ಬೆಂಗಳೂರು-ಸೋಲಾಪುರ ಹೆದ್ದಾರಿ ಸಂಖ್ಯೆ 50, ಸೋಲಾಪುರ, ಕಲಬುರಗಿ, ಹೊಸಪೇಟೆ, ಬಾಗಲಕೋಟೆ, ಆಲಮಟ್ಟಿಯನ್ನು ಸಂಪರ್ಕಿಸಲಿದ್ದು, ಪಶ್ಚಿಮದಲ್ಲಿ ವಿಜಯಪುರ ನಗರವನ್ನು ಸಂಪರ್ಕಿಸಬಹುದಾಗಿದ್ದು, ಈ ಸೇತುವೆ ನಿರ್ಮಾಣದಿಂದ ಸಂಚಾರಕ್ಕೆ ಅನುಕೂಲವಲ್ಲದೇ, ರೇಲ್ವೆ ಹಳಿಗಳ ಬಳಿ ಅತಿಕ್ರಮ ಪ್ರವೇಶವನ್ನು ತಡೆಯುವ ಮೂಲಕ ಪರಿಚಾಲನಾ ಮತ್ತು ಪ್ರಯಾಣಿಕ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ವಿಜಯಪುರದಿಂದ ದಿನನಿತ್ಯ 20ಕ್ಕಿಂತ ಹೆಚ್ಚಿನ ರೈಲುಗಳು ವಿವಿಧ ಮಹಾನಗರಗಳಿಗೆ ಸಂಚರಿಸಲಿದ್ದು, ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಸರಕು-ಸಾಗಾಣಿಕೆಗೆ ಅನುಕೂಲವಾಗಿ ಹೆಚ್ಚಿನ ಆದಾಯ ಬರಲಿದೆ. ಹೆದ್ದಾರಿ ಕಾಮಗಾರಿಗಳು ಮಂಜೂರಾಗಿದ್ದು, ಮಹಾರಾಷ್ಟ್ರ ಗಡಿ ಭಾಗದ ಅಗರಖೇಡ ಮೂಲಕ ಇಂಡಿ, ಅಥರ್ಗಾ, ನಾಗಠಾಣ ಗ್ರಾಮಗಳಿಗೆ ಹಾದು ಹೋಗಲಿರುವ ಈ ಹೆದ್ದಾರಿಯಿಂದ ಗ್ರಾಮದ ಅಭಿವೃದ್ದಿಗೂ ಸಹಕಾರಿಯಾಗಲಿದೆ. ಹುಬ್ಬಳ್ಳಿಯಿಂದ ವಿಜಯಪುರ ಮಾರ್ಗವಾಗಿ ಹುಮನಾಬಾದ್‍ಗೆ ಹೋಗುವ ದ್ವಿ-ಪಥ ಹೆದ್ದಾರಿಯನ್ನು ಚತುಷ್ಪಥ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರ ಸಹ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಅವರು ಹೇಳಿದರು.

ಹೊಟಗಿಯಿಂದ ವಿಜಯಪುರ ಮಾರ್ಗವಾಗಿ ಗದಗ ಸಂಪರ್ಕಿಸುವ ರೇಲ್ವೆ ಹಳಿಯನ್ನು ದ್ವಿ-ಪಥವನ್ನಾಗಿ ಪರಿವರ್ತನೆ ಹಾಗೂ ವಿದ್ಯುದ್ದೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟಾರೆಯಾಗಿ,ವಿಜಯಪುರದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ದೇವರಹಿಪ್ಪರಗಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಮೇಲ್ಸೇತುವೆ ಲೋಕಾರ್ಪಣೆಯಿಂದ ಇಲ್ಲಿಯ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಶಾಸಕ ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ರೇಲ್ವೆ ಇಲಾಖೆ ಅಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.

Latest Indian news

Popular Stories