ಹೈದರ್ ನದಾಫ್ ಕೊಲೆ ವಿಧಾನಸಭೆ ಚುನಾವಣೆ ದೃಷ್ಟಿಕೋನವನ್ನಿರಿಸಿಕೊಂಡು ನಡೆದ ಕೊಲೆ: ರಾಘವ ಅಣ್ಣಿಗೇರಿ ಗಂಭೀರವಾಗಿ ಆರೋಪ

ವಿಜಯಪುರ : ನಿನ್ನೆ ನಡೆದ ಶೂಟೌಟ್‌ನಲ್ಲಿ ಕೊಲೆಗೀಡಾಗಿರುವ ವ್ಯಕ್ತಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಎಐಎಂಐಎಂ ಟಿಕೇಟ್ ಆಕಾಂಕ್ಷಿಯಾಗಿದ್ದ, ಈಗ ಆ ವ್ಯಕ್ತಿಯ ಕೊಲೆ ನಡೆದಿರುವುದು ವಿಧಾನಸಭೆ ಚುನಾವಣೆ ದೃಷ್ಟಿಕೋನವನ್ನಿರಿಸಿಕೊಂಡು ನಡೆದ ಕೊಲೆ ಎಂದು ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಗಂಭೀರವಾಗಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಕೊಲೆಗೀಡಾಗಿರುವ ವ್ಯಕ್ತಿ ಹಾಗೂ ಎಐಎಂಐಎಂ ಪಕ್ಷದ ಅಧ್ಯಕ್ಷರು ಮಾತನಾಡಿರುವ ಆಡಿಯೋ ಬಿಡುಗಡೆಗೊಳಿಸಿದ ಅವರು, ಈ ಆಡೀಯೋ ಬಗ್ಗೆ ಸತ್ಯಾಸತ್ಯತೆಯನ್ನು ವಿಧೀ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದರು.

ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ತಮಗೆ ಬಿ-ಫಾರ್ಮ್ ತಪ್ಪಿರುವ ವಿಷಯವಾಗಿ ಕೊಲೆಗೀಡಾಗಿರುವ ವ್ಯಕ್ತಿ ಎಐಎಂಐಎಂ ಅಧ್ಯಕ್ಷರ ಜೊತೆ ಮಾತನಾಡುತ್ತಿರುವ ಸಂಭಾಷಣೆಯನ್ನು ಬಿಡುಗಡೆಗೊಳಿಸಿದ ಅಣ್ಣಿಗೇರಿ, ಈ ಆಡಿಯೋ ಮುಖಾಂತರ ಚುನಾವಣೆ ದೃಷ್ಟಿಕೋನದಲ್ಲಿರಿಸಿಕೊಂಡೇ ಕೊಲೆ ನಡೆದಿರುವುದು ಸ್ಪಷ್ಟವಾಗುತ್ತದೆ, ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ಸಂಭಾಷಣೆಯಲ್ಲಿ ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದೆ, ನಿನ್ನೆ ನಡೆದ ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಹೆಸರು ಸಹ ಉಲ್ಲೇಖವಾಗಿದೆ ಎಂದು ಅಣ್ಣಿಗೇರಿ ಆಡಿಯೋ ಬಹಿರಂಗಪಡಿಸಿದರು.

ಕೆಲವೊಂದು ಪೊಲೀಸ್ ಅಧಿಕಾರಿಗಳು ಉತ್ತರ ಪ್ರದೇಶಕ್ಕೆ ಹೋಗಿ ಟ್ರೇನಿಂಗ್ ತೆಗೆದುಕೊಂಡು ಬರಬೇಕು, ಗೂಂಡಾಗಳಿಗೆ ಹೆದರುವ ಅವಶ್ಯಕತೆ ಇಲ್ಲ ಎಂದರು. ಮಹಾನಗರ ಪಾಲಿಕೆ ಸದಸ್ಯೆಯ ಪತಿಯ ಮೇಲೆ ನಡೆದ ಶೂಟೌಟ್ ಪ್ರಕರಣ ನಡೆದಿರುವುದು ವಿಧಾನಸಭೆ ಚುನಾವಣೆಯ ದೃಷ್ಟಿಕೋನವನ್ನು ಇರಿಸಿಕೊಂಡು ನಡೆದ ಕೊಲೆಯಾಗಿದೆ ಹೊರತು ವೈಯುಕ್ತಿಕ ದ್ವೇಷಕ್ಕಾಗಿ ನಡೆದ ಕೊಲೆಯಲ್ಲ, ಕೂಡಲೇ ಈ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಿ ಈ ಪ್ರಕರಣವನ್ನು ತನಿಖೆ ನಡೆಸಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕರು ದಕ್ಷ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತರಾತುರಿಯಲ್ಲಿ ಶೂಟೌಟ್ ನಡೆದಿರುವುದು ವೈಯುಕ್ತಿಕ ದ್ವೇಷದಿಂಧ ನಡೆದಿದೆ ಎಂದು ಹೇಳಿಕೆ ನೀಡಿರುವುದು ಖಂಡನಾರ್ಹ. ಯಾವ ಒತ್ತಡಕ್ಕೂ ಒಳಗಾಗದೇ, ಪ್ರಭಾವಿಗಳಿಗೆ ಮಣಿಯದೇ ಈ ಪ್ರಕರಣದಲ್ಲಿರುವ ಕಾಣದ ಕೈಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದರು.

ಕಂಟ್ರಿ ಪಿಸ್ತೂಲ್ ಮೂಲಕ ಈ ಕೊಲೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಚೆಕ್‌ಪೋಸ್ಟ್ಗಳಿಂದ ಕಂಟ್ರಿ ಪಿಸ್ತೂಲ್ ಹೇಗೆ ನುಸುಳಿ ಬಂದಿತು? ಈ ಹಿಂದೆಯೇ ಸ್ವಾಮಿ ವಿವೇಕಾನಂದ ಸೇನೆ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗೂಂಡಾಗಳನ್ನು ಗಡಿಪಾರು ಮಾಡುವಂತೆ ಒತ್ತಾಯ ಮಾಡಿತ್ತು, ಆಗಲೇ ಅವರನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಮಾಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದರು.

ವಿಜಯಪುರ ನಗರ ಸಂಪೂರ್ಣ ಶಾಂತರೀತಿಯಲ್ಲಿ ಇತ್ತು, ನಿನ್ನೆ ನಡೆದ ಶೂಟೌಟ್ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ. ಮಹಾನಗರ ಪಾಲಿಕೆ ಸದಸ್ಯೆಯ ಪತಿಯ ಭೀಕರ ಕೊಲೆ ನಡೆದಿದೆ. ತಕ್ಷಣ ವಿಶೇಷ ತನಿಖಾ ತಂಡ ರಚನೆ ಮಾಡಿ ಇದನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಂಟ್ರಿ ಪಿಸ್ತೂಲ್ ಬಂದಿದ್ದಾರೂ ಎಲ್ಲಿಂದ?
ಕಂಟ್ರಿ ಪಿಸ್ತೂಲ್ ಎಲ್ಲಿಂದ ಬಂತು? ಚೆಕ್‌ಪೋಸ್ಟಗಳನ್ನು ನುಸುಳಿದ್ದು ಹೇಗೆ? ಪಿಸ್ತೂಲ್ ಇರಿಸಿಕೊಂಡು ಓಡಾಡುವ ರೌಡಿ ಶೀಟರ್‌ಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು, ರಾಜಾರೋಷವಾಗಿ ವ್ಯಕ್ತಿಯನ್ನು ಹತ್ಯೆ ಮಾಡುತ್ತಾರೆ ಎಂದರೆ ನಗರದ ಜನತೆ ಭಯಭೀತರಾಗಿದ್ದಾರೆ, ಆಗಲೇ ಗೂಂಡಾಗಳನ್ನು ಹದ್ದುಬಸ್ತಿನಲ್ಲಿಟ್ಟಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲವೇನೋ? ಎಂದರು.

ಚುನಾವಣಾ ಸಮಯವಾಗಿರುವುದರಿಂದ ಇಡೀ ನಗರವೇ ಒಂದು ರೀತಿ ಸೂಕ್ಷ್ಮ ಪ್ರದೇಶವಾಗಿದೆ, ಹೀಗಾಗಿ ಕೇಂದ್ರ ಸೇನಾ ಪಡೆ ಹಾಗು ಮಿಲಟರಿ ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಗರದಲ್ಲಿ ನಿಯೋಜಿಸಬೇಕು, ಭೋಗಸ್ ಮತದಾನ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಕೊಲೆಗೀಡಾದ ವ್ಯಕ್ತಿಯ ಸಮಗ್ರ ಕಾಲ್ ಡಿಟೇಲ್ಸ್ ಓಪನ್ ಮಾಡಿದರೆ ಎಲ್ಲವೂ ಬಹಿರಂಗವಾಗುತ್ತದೆ ಎಂದರು.

ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಭದ್ರತೆ ಒದಗಿಸಿ
ನನ್ನ ಮೇಲೆ ಈಗಾಗಲೇ ಉಗ್ರಗಾಮಿಗಳಿಂದ ಜೀವದ ಬೆದರಿಕೆ ಇದೆ, ಆತ್ಮರಕ್ಷಣೆಗಾಗಿ ಇರುವ ಪಿಸ್ತೂಲ್ ಜಿಲ್ಲಾಧಿಕಾರಿಗಳಿಗೆ ಗನ್ ಜಮಾವಣೆ ಮಾಡಿದ್ದೇನೆ, ಆದರೆ ಆತ್ಮರಕ್ಷಣೆ ಹೇಗೆ ಸಾಧ್ಯ? ಯಾರ ಜೀವ ಭಯವಿದೆಯೋ ಲೈಸನ್ಸ್ ಗನ್‌‌ಗಳನ್ನು ಅವರ ಬಳಿ ಇಟ್ಟುಕೊಳ್ಳಲು ಅನುಮತಿ ನೀಡಬೇಕು ಎಂದರು. ಅದೇ ತೆರನಾಗಿ ವಿಜಯಪುರ ನಗರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಶಾಸಕರು ಹೆಸರು ಬಹಿರಂಗಪಡಿಸಲಿ
ಬಸವನ ಬಾಗೇವಾಡಿಯಲ್ಲಿ ಎಐಎಂಐಎಂ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿರುವ ನಿಟ್ಟಿನಲ್ಲಿ ಧರ್ಮಗುರುವೊಬ್ಬರ ಕೈವಾಡವಿದೆ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ, ಆ ಘಟನೆಗೂ ಈ ಘಟನೆಗೂ ಸಾಮ್ಯತೆ ಇರುವುದ ಕಂಡು ಬರುತ್ತಿದ್ದು, ಕಾಂಗ್ರೆಸ್ ಶಾಸಕರು ನಂತರ ಹೆಸರು ಬಹಿರಂಗಗೊಳಿಸುವುದಕ್ಕಿಂತ ಈಗಲೇ ಅದನ್ನು ಬಹಿರಂಗಪಡಿಸುವುದು ಒಳ್ಳೆಯದು, ಈಗ ಹೆಸರು ಬಹಿರಂಗಪಡಿಸಿದರೆ ಪೊಲೀಸರಿಗೂ ಅನುಕೂಲವಾಗುತ್ತದೆ ಎಂದರು.

ವಿಡಿಎ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಜು ಕುರಿ, ಎಂ.ಎಸ್. ಕರಡಿ, ಮಹೇಶ ಒಡೆಯರ, ರಾಹುಲ್ ಜಾಧವ, ಕುಮಾರ ಗಡಗಿ, ಕಿರಣ ಪಾಟೀಲ, ಜವಾಹರ ಗೋಸಾವಿ, ಗುರು ಗಚ್ಚಿನಮಠ, ವಿವೇಕ ಸಜ್ಜನ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories