ಸಂಘ ಪರಿವಾರ ಕೋಮುದ್ವೇಷ ಬಿತ್ತುತ್ತಿದೆ: ಡಾ.ಪ್ರಕಾಶ ಅಂಬೇಡ್ಕರ್

ವಿಜಯಪುರ : ಸಂಘ ಪರಿವಾರ ಸರ್ವಾಧಿಕಾರ ಧೋರಣೆಯ ವೈದಿಕ ಸಂಸ್ಕೃತಿಯನ್ನು ಸ್ಥಾಪಿಸಿ ಸಂತ ಸಂಸ್ಕೃತಿಯನ್ನು ಕೊನೆಗಾಣಿಸಲು ಹವಣಿಸುತ್ತಿದೆ, ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಬಿತ್ತುತ್ತಿದೆ, ಭಾರತೀಯ ಸಂವಿಧಾನದ ಮೇಲೆ ನಿತ್ಯ ಆಕ್ರಮಣ ಮಾಡುತ್ತಿದೆ ಎಂದು ಖ್ಯಾತ ಚಿಂತಕ, ಮಾಜಿ ಸಂಸದ ಹಾಗೂ ಡಾ.ಬಿ.ಆರ್. ಅಂಬೇಡ್ಕರ ಅವರ ಮೊಮ್ಮಗ ಡಾ.ಪ್ರಕಾಶ ಅಂಬೇಡ್ಕರ ಕಳವಳ ವ್ಯಕ್ತಪಡಿಸಿದರು.
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ‘ಭಾರತೀಯ ಪ್ರಜಾತಂತ್ರಗಳು : ಸವಾಲು, ಮೀರುವ ದಾರಿಗಳು’ ಎಂಬ ಹಮ್ಮಿಕೊಳ್ಳಲಾಗಿದ್ದ ಮೇ ಸಾಹಿತ್ಯ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಂಡಿಸಿದ ಅವರು, ಸಂಘ ಪರಿವಾರದ ಉದ್ದೇಶವನ್ನು ನಾವು ಅರಿತುಕೊಳ್ಳಬೇಕು, ಹಿಂದೂ ಎಂಬ ಶಬ್ದದಲ್ಲಿ ಎರಡು ಸಂಸ್ಕೃತಿಗಳು ಅಡಕವಾಗಿವೆ, ಹಿಂದೂ ಶಬ್ದದಲ್ಲಿ ವೈದಿಕ ಸಂಸ್ಕೃತಿ ಹಾಗೂ ಸಂತ ಸಂಸ್ಕೃತಿ ಇದ್ದು, ವೈದಿಕ ಸಂಸ್ಕೃತಿ ಸರ್ವಾಧಿಕಾರ ಧೋರಣೆ ಅನುಸರಿಸಿದರೆ, ಸಂತ ಸಂಸ್ಕೃತಿ ಸಹೋದರತೆ, ಸಮಾನತೆಯನ್ನು ಅನುಸರಿಸುತ್ತದೆ, ಭಾರತೀಯ ಸಂವಿಧಾನ ಈ ಸಂತ ಸಂಸ್ಕೃತಿ ಆಧರಿಸಿ ರೂಪಿತವಾಗಿದೆ ಎಂದರು.


ಹಿಂದೂ ಸಂಸ್ಕೃತಿಯ ಒಂದು ಭಾಗವಾಗಿರುವ ವೈದಿಕ ಸಂಸ್ಕೃತಿಯನ್ನು ಬಿಜೆಪಿ, ಸಂಘ ಪರಿವಾರ ಅನುಸರಿಸುತ್ತಿದೆ, ಇಲ್ಲಿ ಯೋಚನೆಗೆ ಅವಕಾಶವಿಲ್ಲ, ಸರ್ವಾಧಿಕಾರ ಧೋರಣೆಯೇ ಇಲ್ಲಿ ಪ್ರಧಾನವಾಗಿದೆ, ಆದರೆ ಇದಕ್ಕೆ ವ್ಯತಿರಿಕ್ತವಾದ ಸಂತ ಸಂಸ್ಕೃತಿ ಚಾರ್ವಾಕದಿಂದ ಹಿಡಿದು ಪೆರಿಯಾರ ರಾಮಸ್ವಾಮಿ ಅವರವರೆಗೂ ವಿಸ್ತರಿಸಿದೆ, ಇಲ್ಲಿ ಶಾಂತಿ ಇದೆ, ಸ್ವೀಕಾರವಿದೆ, ಸಹನೆ ಇದೆ, ಸಹೋದರತೆ ಇದೆ ಹಾಗೂ ಸಮಾನತೆ ಇದೆ, ಭಾರತೀಯ ಸಂವಿಧಾನವು ಸಹ ಈ ಸಂತ ಸಂಸ್ಕೃತಿಯ ಪರಿಭಾಷೆಯಾಗಿದೆ ಎಂದರು.


ವೈದಿಕ ಸಂಸ್ಕೃತಿಯಲ್ಲಿ ಮಹಿಳೆಗೆ ಗೌರವವಿಲ್ಲ, ವಿಧವೆಯಾದರೆ ಕೇಶ ಮುಂಡನ ಮಾಡುವ ಕೆಟ್ಟ ಸಂಸ್ಕೃತಿ ಅಲ್ಲಿದೆ, ಆದರೆ ಸಂತ ಸಂಸ್ಕೃತಿಯಲ್ಲಿ ವಿಧವಾ ಪುನರ್ ವಿವಾಹಕ್ಕೆ ಅವಕಾಶವಿದೆ ಎಂದರು. ರಾಜಕೀಯ ವ್ಯವಸ್ಥೆಯ ಒಂದು ಭಾಗವಾದರೆ ಮಾತ್ರ ಭಾರತೀಯ ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಲು ಸಾಧ್ಯ ಎಂದರು.


ಮೀಸಲಾತಿ ಬಲದ ಮೇಲೆ ಸೇವೆಗೆ ಸೇರ್ಪಡೆಯಾದ ಅಧಿಕಾರಿಗಳು ಹುದ್ದೆ ಅಲಂಕರಿಸಿದ ನಂತರ ಅವರ ಧೋರಣೆ ಗಮನಿಸಿದಾಗ, ತಾವು ಕಲಿತ ಪಬ್ಲಿಕ್ ಶಾಲೆಗಳನ್ನೇ ದೂರುವಂತಾಗಿದೆ, ಈ ಪಬ್ಲಿಕ್ ಶಾಲೆಗಳೇ ಇರದಿದ್ದರೆ ಅವರು ಅಧಿಕಾರಿಗಳು ಆಗಲು ಸಾಧ್ಯವಿತ್ತೇ? ಸಾಮಾಜಿಕ ಹುದ್ದೆ, ಆರ್ಥಿಕ ಭದ್ರತೆ ಬಂದ ಮೇಲೆ ವಿಚಾರಗಳೇ ಬದಲಾಗುತ್ತಿರುವುದು ನೋವಿನ ಸಂಗತಿ ಎಂದು ಕಳವಳವ್ಯಕ್ತಪಡಿಸಿದರು.


ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಇಂದಿಗೂ ರಾಷ್ಟ್ರೀಯ ಪಕ್ಷಗಳು ಆಸಕ್ತಿ ವಹಿಸಿಲ್ಲ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಣ್ಣ ಸಮುದಾಯಗಳಿಗೂ ಪ್ರಾತಿನಿಧ್ಯವಿದೆ, ಆದರೆ ಅಧ್ಯಕ್ಷ ಮಾದರಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾತಿಯತೆ ಪ್ರೋತ್ಸಾಹಿಸುವುದು ದಟ್ಟವಾಗಿದೆ. ಕೆಲವೇ ರಾಜ್ಯಗಳಲ್ಲಿ ಸೀಮಿತವಾದ ಸಮುದಾಯಗಳು ಅಧ್ಯಕ್ಷ'ನಾಗಿ ಆಯ್ಕೆಯಾಗಲು ಸಾಧ್ಯವಾಗುವುದಿಲ್ಲ, ಹೀಗಾಗಿ ಅಧ್ಯಕ್ಷ ಮಾದರಿ ವ್ಯವಸ್ಥೆ ಸರಿಯಾದ ವ್ಯವಸ್ಥೆ ಅಲ್ಲ, ಜಾತಿ ಆಧರಿಸಿ ಟಿಕೇಟ್ ಹಂಚಿಕೆಯಾಗುತ್ತಿದೆ, ಸಣ್ಣ ಸಮುದಾಯದವರನ್ನುನಿಮ್ಮ ವೋಟ್ಗಳಿಲ್ಲ’ ಎಂದು ಲೇಬಲ್ ಅಂಟಿಸಿ ಅವರನ್ನು ರಾಜಕೀಯ ವ್ಯವಸ್ಥೆಯಿಂದ ದೂರ ಇರಿಸುವ ವ್ಯವಸ್ಥೆ ದೂರವಾಗಬೇಕಿದೆ ಎಂದರು.

ಶಪಥ ಸಂಸ್ಕೃತಿ ನಮ್ಮದಲ್ಲ…
ಭಾರತೀಯ ಸಂವಿಧಾನ ಪೀಠಿಕೆ ಪಾಲಿಸುವುದು, ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯವಾಗಬೇಕು, ಅದನ್ನು ಉಲ್ಲೇಖಿಸುವ ಕೈ ಮುಂದೆ ಮಾಡಿ ಶಪಥ ಸ್ವೀಕರಿಸುವ ಸಂಸ್ಕೃತಿ ನಮ್ಮದಲ್ಲ, ಈ ರೀತಿಯ ಕೈ ಮುಂದೆ ಮಾಡಿ ಪ್ರತಿಜ್ಞೆ ಸ್ವೀಕರಿಸುವ ಸಂಸ್ಕೃತಿ ಹಿಟ್ಲರ್ ಬಳಿ ಇತ್ತು, ಈ ಸಂಸ್ಕೃತಿಯನ್ನೇ ಸಂಘ ಪರಿವಾರ ಚಾಚುತಪ್ಪದೇ ಮಾಡುತ್ತಾ ಬಂದಿದೆ, ಹೀಗಾಗಿ ಪ್ರತಿಜ್ಞೆ ಸ್ವೀಕರಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಡಾ.ಪ್ರಕಾಶ ಅಂಬೇಡ್ಕರ ಉಲ್ಲೇಖಿಸಿದರು.
ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ, ಚಿಂತಕರಾದ ರಾಜೇಂದ್ರ ಚೆನ್ನಿ, ಡಾ.ರಿಯಾಜ್ ಫಾರೂಕಿ, ಡಾ.ಮಲ್ಲಮ್ಮ ಯಾಳವಾರ, ಭಗವಾನ ರೆಡ್ಡಿ, ಅಬ್ದುಲ್ ರಹಮಾನ ಬಿದರಕುಂದಿ, ಹಿರಿಯ ಸಮಾಜವಾದಿ ಪ್ರಕಾಶ ಹಿಟ್ನಳ್ಳಿ, ಮಹಿಳಾ ಹೋರಾಟಗಾರ್ತಿ ನಜ್ಮಾ ಬಾಂಗಿ, ರೈತ ನಾಯಕ ಭೀಮಶಿ ಕಲಾದಗಿ, ಹಿರಿಯ ಅಂಬೇಡ್ಕರ್ ವಾದಿ ತುಕಾರಾಮ ಚಂಚಲಕರ, ರಾಮಲಿಂಗಪ್ಪ ಬೇಗೂರ, ಲಡಾಯಿ ಪ್ರಕಾಶನದ ಬಸವರಾಜ ಸೂಳಿಭಾವಿ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಅನೀಲ ಹೊಸಮನಿ ಸ್ವಾಗತಿಸಿದರು. ಖ್ಯಾತ ಲೇಖಕಿ ಡಾ.ಎಚ್.ಎಸ್. ಅನುಪಮ ನೀರೂಪಿಸಿದರು.

Latest Indian news

Popular Stories