6ರಲ್ಲಿ ಕಾಂಗ್ರೆಸ್, ಬಿಜೆಪಿ ಜೆಡಿಎಸ್‌ಗೆ ತಲಾ 1 ಕ್ಷೇತ್ರದಲ್ಲಿ ಜಯ

ವಿಜಯಪುರ : ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದ್ದು, ಬಿಜೆಪಿ ಹಾಗೂ ಜೆಡಿಎಸ್ ತಲಾ ಒಂದು ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಕಳೆದ ಬಾರಿ ನಾಲ್ಕು ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಮೂರು ಸ್ಥಾನಗಳನ್ನು ಕಳೆದುಕೊಂಡಿದ್ದು, ಮೂರು ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಮೂರು ಹೆಚ್ಚುವರಿ ಒಟ್ಟು ಆರು ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಳೆದ ಬಾರಿ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಅರಳಿದ್ದ ಜೆಡಿಎಸ್ ಈ ಬಾರಿ ದೇವರಹಿಪ್ಪರಗಿಯಲ್ಲಿ ಅರಳಿದೆ.
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ, ಬಸವನ ಬಾಗೇವಾಡಿಯಿಂದ ಶಿವಾನಂದ ಪಾಟೀಲ, ಮುದ್ದೇಬಿಹಾಳ ಕ್ಷೇತ್ರದಿಂದ ಸಿ.ಎಸ್. ನಾಡಗೌಡ, ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ವಿಠ್ಠಲ ಕಟಕಧೋಂಡ, ಇಂಡಿ ಕ್ಷೇತ್ರದಿಂದ ಯಶವಂತರಾಯಗೌಡ ಪಾಟೀಲ, ಸಿಂದಗಿಯಿಂದ ಅಶೋಕ ಮನಗೂಳಿ ಅಯ್ಕೆಯಾಗಿದ್ದಾರೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ನಗರ ವಿಧಾನಸಭಾ ಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಹಾಗೂ ದೇವರಹಿಪ್ಪರಗಿಯಿಂದ ಜೆಡಿಎಸ್ನ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಆಯ್ಕೆಯಾಗಿದ್ದಾರೆ.


ಕ್ಷೇತ್ರವಾರು ಅವಲೋಕಿಸುವುದಾದರೆ ಬಬಲೇಶ್ವರ, ಬಸವನ ಬಾಗೇವಾಡಿ, ಇಂಡಿ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಯಲ್ಲಿ ಉಳಿಸಿಕೊಳ್ಳುವ ಜೊತೆಗೆ ಸಿಂದಗಿ, ನಾಗಠಾಣ, ಮುದ್ದೇಬಿಹಾಳ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.


ವಿಜಯಪುರ ನಗರವನ್ನು ಮಾತ್ರ ಬಿಜೆಪಿ ಉಳಿಸಿಕೊಂಡಿದ್ದು, ಉಳಿದಂತೆ ಸಿಂದಗಿ, ಮುದ್ದೇಬಿಹಾಳ, ದೇವರಹಿಪ್ಪರಗಿ ಕ್ಷೇತ್ರಗಳನ್ನು ಕಳೆದುಕೊಂಡಿದೆ.


ಕಳೆದ ಬಾರಿ ನಾಗಠಾಣದಲ್ಲಿ ಖಾತೆ ತೆರೆದಿದ್ದ ಜೆಡಿಎಸ್ ಈ ಬಾರಿ ಮೂರನೇಯ ಸ್ಥಾನಕ್ಕೆ ಕುಸಿತಗೊಂಡಿದೆ. ಆದರೆ ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ತನ್ನ ಖಾತೆ ತೆರಿದಿದೆ.


ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಷಹಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಡಿಸಿಎಂ ದೇವೆಂದ್ರ ಫಡ್ನವೀಸ ಸೇರಿದಂತೆ ಅನೇಕ ಘಟಾನುಘಟಿಗಳು ಪ್ರಚಾರ ನಡೆಸಿದ್ದರು. ಮೋದಿಜಿ ಅವರು ಭೇಟಿ ನೀಡಿದ ವಿಜಯಪುರ ನಗರದಲ್ಲಿ ಮಾತ್ರ ಕಮಲ ಅರಳಿದ್ದು, ಉಳಿದ ಕಡೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ.


ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಹಿರಿಯ ನಾಯಕ ರಾಹುಲ್ ಗಾಂಧೀ ಅವರು ಪ್ರಚಾರ ನಡೆಸಿದ ವಿಜಯಪುರ ನಗರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ, ಆದರೆ ಪ್ರಿಯಾಂಕಾ ಗಾಂಧೀ ಇಂಡಿಯಲ್ಲಿ ಪ್ರಚಾರ ನಡೆಸಿದ್ದು, ಇಂಡಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಂತಾಗಿದೆ.

ಚಕ್ರವ್ಯೂಹ ಬೇಧಿಸಿದ ಯತ್ನಾಳ
ಯತ್ನಾಳರ ಸಾಂಪ್ರದಾಯಿಕ ಎದುರಾಳಿಗಳು `ಪರೋಕ್ಷ’ವಾಗಿ ಅವರ ವಿರುದ್ಧ ಚಕ್ರವ್ಯೂಹ ರಚಿಸಿದರು ಯತ್ನಾಳ ಚಕ್ರವ್ಯೂಹವನ್ನು ಬೇಧಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಒಂದು ರೀತಿ ಧರ್ಮಯುದ್ಧ ಎಂದೇ ಬಿಂಬಿತವಾಗಿದ್ದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಹಿಂದೂ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಪ್ರತಿಸ್ಪರ್ಧಿ ಅಬ್ದುಲ್ ಹಮೀದ್ ಮುಶ್ರೀಫ್ ಅವರನ್ನು 7874 ಮತಗಳ ಮೂಲಕ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಅಭಿವೃದ್ಧಿ ಹಾಗೂ ಹಿಂದೂತ್ವ ವಿಷಯ ಆಧರಿಸಿ ಮತಯಾಚಿಸಿದ್ದ ಯತ್ನಾಳ ವಿಜಯಪುರ ನಗರವನ್ನು ಸಿಂಗಾಪೂರವನ್ನಾಗಿಸುವ ಸಂಕಲ್ಪದೊಂದಿಗೆ ಚುನಾವಣೆ ಕಣದಲ್ಲಿದ್ದರು.

ಜಲನಾಯಕನಿಗೆ ಜನರೊಲವು
ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅನುಕಂಪ ಹಾಗೂ ಅಭಿವೃದ್ಧಿ ನಡುವಣ ಕಣ ಎಂದೇ ಬಿಂಬಿಸಲಾಗಿತ್ತು. ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲರು ಅನೇಕ ಬಾರಿ ತಾವು ಸೋಲು ಅನುಭವಿಸಿದ್ದೇನೆ, ಒಂದು ಬಾರಿ ನನಗೆ ಅವಕಾಶ ಕೊಡಿ ಎಂದು ಕಣ್ಣೀರ ಧಾರೆ ಸುರಿಸಿದಿದ್ದರು. ಈ ಸಂದರ್ಭದಲ್ಲಿ ಅನೇಕ ರಾಜಕೀಯ ವಿದ್ಯಮಾನ, ಕಲ್ಲು ತೂರಾಟ ಸೇರಿದಂತೆ ಅನೇಕ ರೀತಿಯ ಘಟನೆಗಳಿಂದಾಗಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಗಮನ ಸೆಳೆದೆತ್ತು. ಜಲವನ್ನು ಹರಿಸಿದ್ದೇನೆ, ನನಗೆ ಆಶೀರ್ವಾದ ಮಾಡಿ ಎಂಬ ಆಧಾರದಲ್ಲಿ ಮತ ಹೇಳಿದ್ದ ಎಂ.ಬಿ. ಪಾಟೀಲರಿಗೆ ಬಬಲೇಶ್ವರ ಜನತೆ ಆಶೀರ್ವಾದ ಕರುಣಿಸಿದ್ದು ಜಲನಾಯಕನಿಗೆ ಜನರೊಲವು ಇದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ನಾಗಠಾಣದಲ್ಲಿ ವಿಠ್ಠಲ ಕಟಕಧೋಂಡರಿಗೆ ವಿಜಯ
ನಾಗಠಾಣ ಮೀಸಲು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆದು ಹಾಲಿ ಜೆಡಿಎಸ್ ಶಾಸಕರಾಗಿದ್ದ ಡಾ.ದೇವಾನಂದ ಚವ್ಹಾಣ ಮೂರನೇಯ ಸ್ಥಾನಕ್ಕೆ ಕುಸಿಯಲ್ಪಟ್ಟಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರಾಗಿ ನಂತರ ಟಿಕೇಟ್ ದೊರಕದೇ ಇದ್ದ ಕಾರಣದಿಂದಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಕಳೆದ ಬಾರಿ ಭಾರೀ ಪೈಪೋಟಿ ನೀಡಿದ್ದರು. ನಾಗಠಾಣ ಕ್ಷೇತ್ರದ ಸಂಪ್ರದಾಯವೆಂಬಂತೆ ಸೋತವರಿಗೆ ಮಣೆ ಎಂಬಂತೆ ಈ ಬಾರಿ ಕಟಕದೊಂಡ ಗೆಲುವು ಸಾಧಿಸಿದ್ದಾರೆ. ಸರಳತೆ, ಉತ್ತಮ ವ್ಯಕ್ತಿ ಎನ್ನುವ ಭಾವ ಕಟಕದೊಂಡರಿಗೆ ಪ್ಲಸ್ ಆಗಿತ್ತು. ಅವರ ಪರವಾದ ಅನುಕಂಪವೂ ಸಹ ಅವರ ಗೆಲುವಿಗೆ ಕಾರಣವಾಗಿದೆ.

ನಡಹಳ್ಳಿ ಪರಾಭವ
ಮುದ್ದೇಬಿಹಾಳ ಕ್ಷೇತ್ರದಿಂದ ಎರಡನೇಯ ಬಾರಿ ಗೆಲುವಿನ ನಗೆ ಬೀರುವ ನಾಗಾಲೋಟದಲ್ಲಿದ್ದ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಮತದಾರ ಈ ಬಾರಿ ಆಶೀರ್ವಾದ ತೋರಿಲ್ಲ. ಈ ಹಿಂದೆ ಈ ಕ್ಷೇತ್ರದ ಶಾಸಕರಾಗಿರುತ್ತಿದ್ದ ಸಿ.ಎಸ್. ನಾಡಗೌಡರು ಈ ಬಾರಿ ಗೆಲುವು ಸಾಧಿಸಿದ್ದಾರೆ. ನಾಡಗೌಡರು ತಮ್ಮ ಸಾಂಪ್ರದಾಯಿಕ ಪ್ರಚಾರ ಶೈಲಿಯ ಜೊತೆಗೆ ವಿವಿಧ ರೀತಿಯಲ್ಲಿ ಶ್ರಮಿಸಿ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ.

ಯಶವಂತರಾಯಗೌಡರಿಗೆ ಹ್ಯಾಟ್ರಿಕ್
ಇಂಡಿ ವಿಧಾನಸಭಾ ಕ್ಷೇತ್ರದಿಂದ ಯಶವಂತರಾಯಗೌಡ ಪಾಟೀಲರು ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದಾರೆ. ತ್ರಿಕೋನ ಸ್ಪರ್ಧೆಯ ನಡುವೆಯೂ ಸಹ ಗೌಡರಿಗೆ ಇಂಡಿ ಜನತೆ ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ, ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ, ಮಿನಿ ವಿಧಾನಸೌಧ ಹೀಗೆ ನುಡಿದಂತೆ ನಡೆದಿರುವ ಅಭಿವೃದ್ಧಿಯ ಮೂಲಮಂತ್ರ ಹಾಗೂ ಸಾತ್ವಿಕ, ಜನಸ್ಪಂಧನೆಯ ಸ್ವಭಾವ ಗೌಡರಿಗೆ ಪ್ಲಸ್ ಆಗಿ ಪರಿಣಮಿಸಿ ವಿಜಯಲಕ್ಷ್ಮೀ ಒಲಿಯುವಂತೆ ಮಾಡಿದೆ.

ಶಿವಾನಂದ ಪಾಟೀಲರಿಗೆ ಗೆಲುವಿನ ಆನಂದ…
ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ತುರುಸಿನ ಸ್ಪರ್ಧೆ ಮಧ್ಯೆಯೂ ವಿಜಯಮಾಲೆ ಶಿವಾನಂದ ಪಾಟೀಲರ ಕೊರಳಿಗೆ ಬಿದ್ದಿದೆ. ಮೆಗಾ ಮಾರುಕಟ್ಟೆ ವಿವಿಧ ರೀತಿಯ ಅಭಿವೃದ್ಧೀ ಕಾಮಗಾರಿ ಮೊದಲಾದುವಗಳ ಬಲದ ಮೇಲೆ ಪಾಟೀಲರು ಚುನಾವಣೆ ಎದುರಿಸಿದ್ದರು. ಎಐಎಂಐಎಂ ಪಕ್ಷದ ಅಭ್ಯರ್ಥಿಯನ್ನು ಉದ್ದೇಶಪೂರ್ವಕವಾಗಿ ಬಸವನ ಬಾಗೇವಾಡಿಯಲ್ಲಿ ಕಣಕ್ಕಿಳಿಸಲಾಗಿದೆ, ಪಕ್ಷದವರೇ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಪಾಟೀಲರು ಗಂಭೀರವಾಗಿ ಆರೋಪಿಸಿದ್ದರು. ಆದರೆ ಎಐಎಂಐಎಂ ಯಾವ ರೀತಿಯಲ್ಲೂ ಶಿವಾನಂದ ಪಾಟೀಲರಿಗೆ ಸ್ಪರ್ಧೆ ನೀಡಿಲ್ಲ.

ಸಿಂದಗಿಯಲ್ಲಿ ಅಶೋಕ ಗೆಲುವಿನ ಅಲೆ


ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಕೆಲವೇ ಮತ ಅಂತರಗಳಿಂದ ಪರಾಭವಗೊಂಡಿದ್ದ ಅಶೋಕ ಮನಗೂಳಿ ಈಗ ವಿಜಯ ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಲಿ ಶಾಸಕ ರಮೇಶ ಭೂಸನೂರವನ್ನು ಹಿಂದಿಕ್ಕಿ ಗೆಲುವು ದಾಖಲಿಸಿದ್ದಾರೆ. ತಂದೆ ದಿ.ಎಂ.ಸಿ. ಮನಗೂಳಿ ಅವರ ಕಾಲದಲ್ಲಿ ಕೈಗೊಂಡ ಜನಪರ ಯೋಜನೆಗಳ ಶ್ರೀರಕ್ಷೆ, ಕಾಂಗ್ರೆಸ್ ಪಕ್ಷದ ಬಲ ಹಾಗೂ ಯುವಕರಾಗಿ ರಾಜಕೀಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವಿಕೆ ಫಲವಾಗಿ ಅಶೋಕ ಮನಗೂಳಿಗೆ ವಿಜಯ ದೊರಕಿದೆ.

ರಾಜುಗೌಡರಿಗೆ ಜನತಾ ದೇವರು ನೀಡಿದ ವರ
ದೇವರಹಿಪ್ಪರಗಿಯಲ್ಲಿ ಕೊನೆಗೂ ಜೆಡಿಎಸ್ ಪಕ್ಷದ ರಾಜುಗೌಡ ಪಾಟೀಲ ಕುದರಿಸಾಲೋಡಗಿ ವಿಜಯ ಸಾಧಿಸಿದ್ದಾರೆ. ಈ ಹಿಂದೆ ಕೆಜೆಪಿ, ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ ರಾಜುಗೌಡ ಪಾಟೀಲರು ಕೂದಲೆಳೆ ಅಂತರದಿಂದ ಸೋಲು ಅನುಭವಿಸಿದ್ದರು. ಆದರೂ ಕ್ಷೇತ್ರದ ಒಡನಾಟ, ಸೇವೆ ಮಾತ್ರ ಬಿಟ್ಟಿರಲಿಲ್ಲ. ಈ ಕಾರಣಕ್ಕಾಗಿಯೇ `ಅನುಕಂಪ’ದ ಅಲೆ ಪ್ರಬಲವಾಗಿ ದೇವರಹಿಪ್ಪರಗಿಯಲ್ಲಿ ಬೀಸಿದ ಪರಿಣಾಮ ರಾಜುಗೌಡರಿಗೆ ವಿಜಯಮಾಲೆ ದೊರಕಿದೆ.

Latest Indian news

Popular Stories