ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೇಂದ್ರ ಸರ್ಕಾರ ಕ್ರಮ ವಹಿಸಲು ಮನವಿ

ವಿಜಯಪುರ : ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಕೇಂದ್ರ ಸರ್ಕಾರ ಗಂಭೀರ ಕ್ರಮ ವಹಿಸಬೇಕು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ನವರ ಪ್ರಕರಣವನ್ನು ರಾಜ್ಯ ಸರಕಾರವು ಎಸ್.ಐ.ಟಿ. ಗೆ ವಹಿಸಿರುವುದು ಉತ್ತಮ ನಡೆಯಾಗಿದೆ, ಕರ್ನಾಟಕದ ಎಸ್.ಐ.ಟಿ. ಬಗ್ಗೆ ಭರವಸೆ ಇದ್ದು, ಕರ್ನಾಟಕದ ಪೊಲೀಸರು ದಕ್ಷರಿದ್ದು, ಈಗಾಗಲೇ ಛಾಪಾ ಕಾಗದ ಪ್ರಕರಣದಲ್ಲಿ ಹಾಗೂ ತೀರಾ ಇತ್ತೀಚಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣವನ್ನು ಭೇದಿಸಿದ ಪ್ರಕರಣದಲ್ಲಿ ಇದನ್ನು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

ಅಲ್ಲದೆ ಸಂಸದ ಪ್ರಜ್ವಲ್ ರೇವಣ್ಣ ನವರನ್ನು ಎಲ್ಲಿದ್ದರೂ ಕರೆತಂದು ಬಂಧಿಸಲು ಕೇಂದ್ರ ಸರಕಾರದವರು ಸೂಕ್ತ ಕ್ರಮ ಜರುಗಿಸಬೇಕು, ಘಟನೆ ಚರ್ಚೆಯಾಗುವ ಸಂದರ್ಭದಲ್ಲಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದ್ದು, ಕೂಡಲೇ ಕೇಂದ್ರ ಸರ್ಕಾರ ಪ್ರಜ್ವಲ ರೇವಣ್ಣ ಬಂಧನಕ್ಕೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಪ್ರಜ್ವಲ್ ರೇವಣ್ಣನವರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಹಾಗೂ ತುರ್ತಾಗಿ ಭರವಸೆಯ ಅವಶ್ಯಕತೆ ಇದೆ. ಸದರಿ ಪ್ರಕರಣವು ಒಂದು ಗಂಭೀರ ಸ್ವರೂಪದ್ದಾಗಿದ್ದು, ನಾಡಿನ ಜನತೆ ತಲೆತಗ್ಗಿಸುವಂತಹ ಹಾಗೂ ನಾಚಿಕೆಗೇಡಿನ ವಿಷಯವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಮಹಾದೇವಿ ಗೋಕಾಕ, ಭಾರತಿ ಹೊಸಮನಿ, ಮಂಜುಳಾ ಗಾಯಕವಾಡ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಮುಸ್ಕಾನ ಶಿವಣಗಿ, ಅಂಬಿಕಾ ಪಾಟೀಲ, ಶರಣಮ್ಮಾ ನಾಯಕ, ಜ್ಯೋತಿ ಗುಡಿಮನಿ, ಲಲಿತಾ ನಾಯಕ, ಭಾಗೀರಥಿ ನಾಗರಹಳ್ಳಿ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಸುಮಿತ್ರಾ ಹನೂರ, ಶಶಿಕಲಾ ಮಣೂರ, ಶಾರದಾ ಬೆಟಗೇರಿ, ಅಶ್ವಿನಿ ಪಾತ್ರೋಟಿ, ಶಮೀಮಾ ಅಕ್ಕಲಕೋಟ, ಸಂಜನಾ ಭಜಂತ್ರಿ ಉಪಸ್ಥಿತರಿದ್ದರು.

Latest Indian news

Popular Stories