ವಿಜಯಪುರ: ರೈತರು ಇಸ್ರೇಲ್ ಮಾದರಿಯ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀರಿನ ಸದ್ಬಳಕೆಯೊಂದಿಗೆ ಉತ್ತಮ ಇಳುವರಿ ಪಡೆದು ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ದೇವರಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಹೇಳಿದರು.
ಅವರು, ಧಾರವಾಡದ ಕೃಷಿ ವಿಶ್ವವಿದ್ಯಾಲಯ, ವಿಜಯಪುರದ ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ವಿಜಯಪುರದ ಹಿಟ್ಟಿನಹಳ್ಳಿ ಫಾರ್ಮನಲ್ಲಿ ಆಯೋಜಿಸಿದ ಕೃಷಿ ಮೇಳ-2023-24ರ ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಇಸ್ರೇಲ್ ಕೃಷಿ ಮಾದರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಸಾವಯವ ಕೃಷಿಗೆ ಒತ್ತು ನೀಡಿ, ಕೃಷಿಯಲ್ಲಿ ಹೊಸ-ಹೊಸ ತಂತ್ರಜ್ಞಾನ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು. ಕೃಷಿಗೆ ಉತ್ತೇಜನ ನೀಡುವತ್ತ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು.ಇಂತಹ ಕೃಷಿ ಮೇಳವು ರೈತರಿಗೆ ಸಹಾಯಕವಾಗಲಿದೆ ಎಂದು ರೈತರು ತಮ್ಮ ಜಮೀನಿನ ಬದು, ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳನ್ನು ಬೆಳೆಸುವುದರಿಂದ ವಾತಾವರಣ ಶುದ್ಧಿಯಾಗಿ ಮಳೆಯಾಗಲು ಸಹಕರಿಸುತ್ತದೆ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಒಂದು ಉದ್ಯಮವಾಗಿ ಬೆಳೆಯಬೇಕು. ಇದಕ್ಕೆ ಪೂರಕವಾಗಿ ಕೃಷಿ ವಿಜ್ಞಾನಿಗಳು ಸಹಾಯಕರಾಗಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಬೇಕು.
ವ್ಯವಸಾಯದೊಂದಿಗೆ ಉಪ ಕಸುಬುಗಳಿಗೆ ಒತ್ತು ನೀಡಿ, ಆರ್ಥಿಕವಾಗಿ ಸಬಲರಾಗಬೇಕು ಎಂದರು. ಜಿಲ್ಲೆಯಲ್ಲಿ ವ್ಯವಸಾಯ ಮಾಡಲು ಹಾಗೂ ಎಲ್ಲಾ ಕಾಲದ ಬೆಳೆ ಬೆಳೆಯಲು ಸಮೃದ್ಧ ಭೂಮಿ ಇದೆ. ಅತಿ ಹೆಚ್ಚು ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿನ ಮಣ್ಣು, ಹವಾಗುಣ ವ್ಯವಸಾಯಕ್ಕೆ ಅನುಕೂಲತೆ ಒದಗಿಸಿದೆ. ಜಿಲ್ಲೆಯು ಕೃಷಿಯಲ್ಲಿ ಮಹತ್ವದ ಪಾತ್ರ ವಹಿಸಬೇಕು. ಐತಿಹಾಸಿಕ ಸಾಧನೆ ಕೃಷಿಯಲ್ಲಿ ಆಗಬೇಕು. ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ರೈತ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಪಿ.ಎಲ್. ಪಾಟೀಲ ಅವರು, ಒಣಬೇಸಾಯ ಸಂಶೋಧನಾ ಕೇಂದ್ರವಾದ ಹಿಟ್ಟಿನಹಳ್ಳಿಯು ಉತ್ತಮ ದರ್ಜೆಯ ಸಂಶೋಧನೆಗಳನ್ನು ಮಾಡಿದೆ. ರೈತರಿಗೆ ಒಣ ಬೇಸಾಯದ ಅಗತ್ಯ ಮಾಹಿತಿ ಹಾಗೂ ತಂತ್ರಜ್ಞಾನಗಳ ಪರಿಚಯ ಮಾಡಿಕೊಡಲಾಗುತ್ತಿದೆ ಎಂದರು.ಒಣ ಬೇಸಾಯ ರೈತರಿಗೆ ಉಪಯೋಗವಾಗುವ ಕೃಷಿ ಹೊಂಡದ ಸಂಶೋಧನೆ, ವಿನ್ಯಾಸ ರೈತರಿಗೆ ತಿಳಿಸಲಾಗಿದೆ. ಕೃಷಿ ಹೊಂಡದಿಂದ ರೈತರು ಬೆಳೆದ ಬೆಳೆಗಳಿಗೆ ನೀರು ಸಿಗುವಂತಾಗಿದೆ. ಬೆಳೆಗಳ ಇಳುವರಿ ಹೆಚ್ಚಿಸಿದೆ. ಕೃಷಿಹೊಂಡಗಳು ಆರ್ಥಿಕವಾಗಿ ಲಾಭದಾಯಕವಾಗಿದೆ ಎಂದು ತಿಳಿಸಿದರು.
ಕೃಷಿಯ ಜೊತೆಗೆ ಉಪ ಕಸಬುಗಳಾದ ಕೋಳಿ ಸಾಕಾಣಿಗೆ, ಆಡು ಸಾಕಾಣಿಕೆ, ಪಶು ಸಾಕಣೆ, ಮೊಲ ಸಾಕಾಣಿಕೆ, ಜೇನು ಕೃಷಿಯನ್ನು ಮಾಡಬೇಕು. ಕೃಷಿಯಲ್ಲಿ ಹೊಸ ಹೊಸ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಅಥವಾ ಮಾಹಿತಿಗಾಗಿ ಸಂಸ್ಥೆಯ ವಿಜ್ಞಾನಿಗಳ ಸಹಾಯ ಪಡೆಯಬೇಕು ಎಂದು ತಿಳಿಸಿದರು.
ಬೀಜ ಘಟಕದಲ್ಲಿ ಬೀಜ ಸಂಸ್ಕರಣೆ ಕೇಂದ್ರ ಮತ್ತು ಬೀಜ ಪರೀಕ್ಷಾಲಯಗಳಿದ್ದು, ಬೀಜ ಸಂಸ್ಕರಣೆ ಮತ್ತು ಪರೀಕ್ಷೆ ಮಾಡಲಾಗುತ್ತದೆ. ಇಲ್ಲಿ ಕೃಷಿ ಸಂಶೋಧನಾ ಕೇಂದ್ರದ ಬೀಜಗಳನ್ನಲ್ಲದೇ, ರೈತರು ಬೆಳೆದ ಬೀಜಗಳನ್ನು ಸಹ ನಿಗಧಿತ ದರದಲ್ಲಿ ಸಂಸ್ಕರಣೆ ಮಾಡಿಕೊಡಲಾಗುವುದು. ಇದಲ್ಲದೆ, ರೈತರ ಸಹಭಾಗಿತ್ವದಲ್ಲಿ ಮುಖ್ಯವಾಗಿ ಹಿಂಗಾರಿ ಜೋಳ, ಕಡಲೆ, ಸಜ್ಜೆ, ಗೋವಿನಜೋಳ, ತೊಗರಿ, ಶೇಂಗಾ ಮತ್ತು ಈರುಳ್ಳಿ ಬೀಜೊತ್ಪಾದನೆಯನ್ನು ಕೈಗೊಳ್ಳಲಾಗುತ್ತದೆ ಹಾಗೂ ಬೀಜ ಮಾರಾಟ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ತಜ್ಞರೊಂದಿಗೆ ಚರ್ಚೆ, ಪ್ರಯೋಗ ತಾಕುಗಳ ಭೇಟಿ, ಕೃಷಿ ಯಂತ್ರೋಪಕರಣ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಕೀಟನಾಶಕ ಸಿಂಪರಣೆಗಾಗಿ ಡ್ರೋನ್ ಬಳಕೆ, ಸೌರ ಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪಸೆಟ್ಟಿನಿಂದ ನೀರೆತ್ತುವುದು, ಸ್ವಯಂ ಚಾಲಿತ ಸೂಕ್ಷ್ಮನೀರಾವರಿ ಪದ್ಧತಿ, ಕೃಷಿ ಹವಾಮಾನ ಶಾಸ್ತ್ರ ಒಣಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿಯ ಅಭಿವೃದ್ಧಿ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಪಶು ಸಂಗೋಪನೆ, ಬೀಜೋತ್ಪಾದನೆ ಹಾಗೂ ಬೀಜ ಸಂಸ್ಕರಣೆ, ಕೃಷಿ ಮಾರುಕಟ್ಟೆ / ಗೃಹ ವಿಜ್ಞಾನ ಕುರಿತಂತೆ ಮಾಹಿತಿ ನೀಡಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾಧಿಕಾರಿ ಡಾ.ಎ. ಭೀಮಪ್ಪ , ಶ್ರೀನಿವಾಸ ಕೋಟ್ಯಾನ, ಧಾರವಾಡ ಕೃಷಿ ವಿದ್ಯಾಧಿಕಾರಿಗಳಾದ ಡಾ.ಎಚ್.ಬಿ. ಬಬಲಾದ, ಧಾರವಾಡ ಕೃಷಿ ಸಂಶೋಧನ ನಿರ್ದೇಶಕರಾದ ಡಾ.ಬಿ.ಡಿ ಬಿರಾದಾರ, ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಎಸ್.ಎಸ್.ಅಂಗಡಿ, ಪ್ರಾದೇಶಿಕ ಕೃಷಿ ಸಂಶೋಧನ ನಿರ್ದೇಶಕರಾದ ಡಾ.ಅಶೋಕ ಎಸ್. ಸಜ್ಜನ, ವಿಜಯಪುರ ಕೃಷಿ ವಿಸ್ತರಣ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕರಾದ ಡಾ.ಆರ್.ಬಿ. ಬೆಳ್ಳಿ, ವಿಜಯಪುರ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಡಿ. ಡಬ್ಲ್ಯೂ ವಿಲಿಯಮ್ ರಾಜಶೇಖರ, ಹಿಟ್ಟಿನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿಕುಮಾರ ಸಾಬು ಕಡಿಮನಿ ಉಪಸ್ಥಿತರಿದ್ದರು.
ಎತ್ತಿನಬಂಡಿ ಜಾಥಾಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಕೃಷಿ ಮೇಳ ಕಾರ್ಯಕ್ರಮದ ಅಂಗವಾಗಿ 20 ಎತ್ತಿನ ಬಂಡಿ ಜಾಥಾ ನಡೆಯಿತು. ಈ ಎತ್ತಿನ ಬಂಡಿ ಜಾಥಾಕ್ಕೆ ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ ಚಾಲನೆ ನೀಡಿದರು. ನಗರದ ಅಂಬೇಡ್ಕರ ವೃತ್ತದಿಂದ ಬಸವೇಶ್ವರ ಸರ್ಕಲ್, ಬಸ್ ಸ್ಟ್ಯಾಂಡ್, ಬಾಗಲಕೋಟ ಕ್ರಾಸ್, ಜಲನಗರ, ಇಬ್ರಾಹಿಂಪೂರ್ ಮಾರ್ಗವಾಗಿ ಕೃಷಿ ಮೇಳ ನಡೆಯುವ ಹಿಟ್ಟಿನಹಳ್ಳಿ ಫಾರ್ಮಗೆ ಬೆಳೆಗ್ಗೆ 10.30 ಗಂಟೆಗೆ ತಲುಪಿತು.
ಫಲ-ಪುಷ್ಪ ಪ್ರದರ್ಶನ: ಕೃಷಿಮೇಳದಲ್ಲಿ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ತರಕಾರಿಗಳಿಂದ ರಚಿಸಿದ ರಂಗೋಲಿ ಜನರ ಗಮನ ಸೆಳೆಯಿತು. ವಿವಿಧ ಹೂಗಳ ಗುಚ್ಚವನ್ನು ಪ್ರದರ್ಶನಕ್ಕೆ ಎರ್ಪಡಿಸಲಾಗಿತ್ತು. ಬೋನ್ಸಯ್ ಮರಗಳು, ಹಾಗೂ ಔಷದ ಸಸಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.