ರೈತರ ಬೇಡಿಕೆ ಈಡೇರಿಕೆಗೆ ಅಗ್ರಹ

ವಿಜಯಪುರ : ಬಿತ್ತನೆ ಬೀಜಗಳ ದರ ಕಡಿಮೆ ಮಾಡುವುದು ಸೇರಿದಂತೆ ರೈತರಿಗೆ ಅನುಕೂಲ ಕಲ್ಪಿಸುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ನಂತರ ಲಿಖಿತ ಮನವಿ ಸಲ್ಲಿಸಿದರು.

ಧರಣಿಯಲ್ಲಿ ಪಾಲ್ಗೊಂಡ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕೆ. ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಹಿಂದೆದೂ ಕಂಡರಿಯದಂತ ಭೀಕರ ಬರಗಾಲ ಆವರಿಸಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಹಾಳಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹದರ ಮಧ್ಯ ಸರ್ಕಾರ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ರಾಜ್ಯ ಸರ್ಕಾರ ಜನ ವಿರೋಧಿ ಹಾಗೂ ರೈತ ವಿರೋಧಿ ಅನುಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಸಿಗಬೇಕಾದ ಸವಲತ್ತುಗಳನ್ನು ಕೊಡುತ್ತಿಲ್ಲ. ಈಗ ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಬಿತ್ತನೆ ಕಾರ್ಯಕ್ಕೆ ಮುಂದಾಗುತ್ತಿದ್ದ ರೈತರಿಗೆ ಬಿತ್ತನೆ ಬೀಜದದರ ಹೆಚ್ಚಿಸುವ ಮೂಲಕ ರೈತರಿಗೆ ಮತ್ತಷ್ಟು ಸಾಲದ ಹೊರೆ ಹಾಕಲು ಮುಂದಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕಳೆದ ವರ್ಷ ಐದು ಕೆ.ಜಿ. ತೊಗರಿ ಬೀಜಕ್ಕೆ 535 ರೂ.ಗಳವರೆಗೆ ಇದ್ದ ದರವನ್ನು 770 ಕ್ಕೆ ಏರಿಕೆ ಮಾಡಿದೆ. ಹೆಸರು 5 ಕೆ.ಜಿ.ಗೆ 501 ರಿಂದ 785 ರೂ.ಗಳಿಗೆ ಇನ್ನುಳಿದ ಬಿತ್ತನೆ ಬೀಜಗಳ ದರ ದುಪ್ಪಟ್ಟು ಹೆಚ್ಚಿಸಲಾಗಿದೆ ಮತ್ತು ಗೊಬ್ಬರದ ದರವನ್ನು ಹೆಚ್ಚಿಸಲಾಗಿದೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆ ಬೀಳುತ್ತಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚಿಸಿದ ಬಿತ್ತನೆ ಬೀಜಗಳ ದರವನ್ನು ಮೊದಲಿನ ದರಕ್ಕೆ ವಿತರಿಸಬೇಕು ಎಂದು ಒತ್ತಾಯಿಸಿದರುಲ.

ಬಾಲಪ್ಪಗೌಡ ಲಿಂಗದಳ್ಳಿ, ಗುರಲಿಂಗಪ್ಪ ಪಡಸಲಗಿ, ಚಂದ್ರಾಮ ತೆಗ್ಗಿ, ಚನಬಸಪ್ಪ ಸಿಂಧೂರ, ನಿಂಗರಾಯ ಮುತ್ಯಾ, ದಾವಲಸಾ ನಧಾಪ್, ಮಹೇಶ ಯಡಹಳ್ಳಿ, ಮಲ್ಲಪ್ಪ ಪಡಸಲಗಿ, ಗಿರಿಮಲ್ಲಪ್ಪ ದೊಪಡಮನಿ, ವಿಠ್ಠಲ ಬಿರಾದಾರ ಸೇರಿದಂತೆ ಉಪಸ್ಥಿತರಿದ್ದರು.

Latest Indian news

Popular Stories