ಮತ ಎಣಿಕೆಗೆ ಜಿಲ್ಲಾಡಳಿತ ಸನ್ನದ್ಧ: 112 ಟೇಬಲ್‌ಗಳಲ್ಲಿ 154 ಸುತ್ತುಗಳಲ್ಲಿ ಮತ ಎಣಿಕೆ

ವಿಜಯಪುರ : ವಿಜಯಪುರದ ಸೈನಿಕ ಶಾಲೆಯ ಆವರಣದಲ್ಲಿ ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಜಿಲ್ಲಾಡಳಿತ ಮತ ಎಣಿಕೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ 14 ಟೇಬಲ್‌ಗಳಲ್ಲಿ ಒಟ್ಟು 154 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.


ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ 18, ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ 18, ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ 17, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 18, ವಿಜಯಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 21, ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 22, ಇಂಡಿ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 20 ಸುತ್ತುಗಳಲ್ಲಿ ಒಟ್ಟು 154 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ಆಯಾ ವಿಧಾನಸಭಾ ಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಇಎಎಂ ಮತಯಂತ್ರಗಳ ಮತ ಎಣಿಕೆ ಕಾರ್ಯ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 8 ಮತಕ್ಷೇತ್ರಗಳಿಗೆ 112 ಟೇಬಲ್‌ಗಳಲ್ಲಿ ಹಾಗೂ ಅಂಚೆ ಮತಪತ್ರಗಳ ಎಣಿಕೆಗಾಗಿ 12 ಟೇಬಲ್ ಹಾಗೂ ಇಟಿಪಿಬಿಎಸ್ ಮತ ಪತ್ರಗಳ ಸ್ಕ್ಯಾನಿಂಗ್ ಕಾರ್ಯವನ್ನು 06 ಟೇಬಲ್‌ಗಳಲ್ಲಿ ಕೈಗೊಳ್ಳಲಾಗಿದೆ.


ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಒಡೆಯರ್ ಸದನದಲ್ಲಿ, ಬಸವನ ಬಾಗೇವಾಡಿ ಹಾಗೂ ಬಬಲೇಶ್ವರ ವಿಧಾನಸಬಾ ಕ್ಷೇತ್ರದ ಮತ ಎಣಿಕೆ ಆದಿಲ್‌ಷಾಹಿ ಸದನದಲ್ಲಿ, ವಿಜಯಪುರ ನಗರ ಹಾಗೂ ನಾಗಠಾಣ ಮತ ಕ್ಷೇತ್ರದ ಮತ ಎಣಿಕೆ ಹೊಯ್ಸಳ ಸದನದಲ್ಲಿ, ಇಂಡಿ ಹಾಗೂ ಸಿಂದಗಿ ಮತಕ್ಷೇತ್ರದ ಮತ ಎಣಿಕೆ ವಿಜಯ ನಗರ ಸದನದಲ್ಲಿ ನಡೆಯಲಿದೆ.

483 ಸಿಬ್ಬಂದಿಗಳ ನಿಯೋಜನೆ
ಸುಸೂತ್ರ ಮತ ಎಣಿಕೆಗೆ ಸಂಬಂಧಿಸಿದಂತೆ ಒಟ್ಟು 483 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, 12 ಅಸಿಸ್ಟಂಟ್ ರಿಟರ್ನಿಂಗ್ ಅಧಿಕಾರಿ, 124 ಮೇಲ್ವಿಚಾರಕರು, 136 ಎಣಿಕೆ ಸಹಾಯಕರು, 124 ಮೈಕ್ರೋ ಅರ್ಬ್ಸರವರ್ ಹಾಗೂ 87 ಸಿಬ್ಬಂದಿಗಳನ್ನು ಕಾಯ್ದಿರಿಸಿದ ಸಿಬ್ಬಂದಿಯಾಗಿ ನಿಯೋಜಿಸಲಾಗಿದೆ. ಚುನಾವಣಾಧಿಕಾರಿಗಳ ಕೊಠಡಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಟ್ಯಾಬುಲೇಷನ್ ಹಾಗೂ ಆನಲೈನ್‌ನಲ್ಲಿ ದತ್ತಾಂಶ ಸಂಗ್ರಹಣೆಗೆ ಪ್ರತ್ಯೇಕವಾದ ಟೇಬಲ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಭದ್ರಕೋಟೆ
ಮತ ಎಣಿಕೆ ಕೇಂದ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಬ್ಬರು ಡಿವೈಎಸ್‌ಪಿ, 4 ಸಿಪಿಐ, 10 ಪಿಎಸ್‌ಐ, 17 ಎಎಸ್‌ಐ, 92 ಸಿಪಿಸಿ, 78 ಹವಾಲ್ದಾರ್‌ಗಳನ್ನು ನಿಯೋಜಿಸಲಾಗಿದ್ದು, 1 ಸಿಐಎಸ್‌ಪಿ, 2 ಕೆಎಸ್‌ಆರ್‌ಪಿ-ಐಆರ್‌ಬಿ ಹಾಗೂ 3 ಸಿವಿಲ್ -ಡಿಎಆರ್ ತುಕಡಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಮೂಲಕ ಹದ್ದಿನ ಕಣ್ಣು ಇರಿಸಲಾಗುತ್ತಿದೆ.

Latest Indian news

Popular Stories