ದ್ವೇಷ ರಾಜಕಾರಣ ಮಾಡಲ್ಲ, ಕೆಣಕಿದರೆ ಬಿಡಲ್ಲ: ಸಂಸದ ಜಿಗಜಿಣಗಿ

ವಿಜಯಪುರ : ‘ನನಗೆ ಜಾತಿ ಗೊತ್ತಿಲ್ಲ, ನನ್ನನ್ನು ದ್ವೇಷ ಮಾಡಿದವರನ್ನು ಹೆಗಲ ಮೇಲೆ ಕೈ ಹಾಕಿ ಜೊತೆಗೆ ಕರೆದುಕೊಂಡು ಹೋಗಿದ್ದೇನೆ, ನಾನು ದ್ವೇಷ ರಾಜಕಾರಣ ಮಾಡಲ್ಲ, ಆದರೆ ಕೆಣಕಿದರೆ ನಾನು ಬಿಡಲ್ಲ, ಇತಿಹಾಸ ನಿರ್ಮಾಣವಾಗುವವರೆಗೂ ನಾನು ಸಾಯುವುದಿಲ್ಲ, ಈ ರೀತಿ ದೇವರೇ ನನ್ನ ಹಣೆ ಬರಹ ಬರೆದಿದ್ದಾನೆ……’
ಸಂಸದ ರಮೇಶ ಜಿಗಜಿಣಗಿ ಅವರು ಸ್ಪಷ್ಟ ಹಾಗೂ ನೇರ ನುಡಿಗಳಿವು. ಅನಾರೋಗ್ಯ ಹಿನ್ನೆಲೆಯಲ್ಲಿ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಟಿಕೇಟ್ ಕೈತಪ್ಪಲಿದೆ ಎಂಬ ವದಂತಿಗಳಿಗೆ ಕಡ್ಡಿ ತುಂಡು ಮಾಡಿದಂತೆ ತೆರೆ ಎಳೆದ ಜಿಗಜಿಣಗಿ ತಮಗೆ ಟಿಕೇಟ್ ಪಕ್ಕಾ, ಈಗಾಗಲೇ ಹೈಕಮಾಂಡ್ ಈ ಭರವಸೆ ನನಗೆ ನೀಡಿದೆ ಎಂದು ಟೀಕಾಕಾರರಿಗೆ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

ವಿಜಯಪುರ ರೈಲ್ವೇ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ ಅವರು, `ನಾನು ಇನ್ನೂ ಇತಿಹಾಸ ನಿರ್ಮಾಣ ಮಾಡಬೇಕಿದೆ, ಇತಿಹಾಸ ನಿರ್ಮಾಣ ಮಾಡಿಯೇ ಸಾಯಬೇಕು ಎಂದು ಭಗವಂತ ನನ್ನ ಹಣೆ ಬರಹ ಬರೆದಿದ್ದಾರೆ, ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ, ವಿನಾಕಾರಣ ಕೆಲವರು ನನಗೆ ವಯಸ್ಸಾಗಿದೆ, ಅನಾರೋಗ್ಯ ಎಂದು ಹೇಳುತ್ತಾ ತಿರುಗಾಡುತ್ತಿದ್ದಾರೆ, ನಾನು ಜಲ್ದಿ ಸಾಯಬೇಕು ಎಂದು ಅವರು ಅಂದುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ನನಗೆ ಜಾತಿ ಎಂಬುದೇ ಗೊತ್ತಿಲ್ಲ, ಬ್ರಾಹ್ಮಣ, ಲಿಂಗಾಯತ, ಕುಂಬಾರ, ಬಡಿಗೇರ ಹೀಗೆ ಎಲ್ಲ ಸಮುದಾಯಗಳನ್ನು ಜೊತೆಗೆ ಕರೆದುಕೊಂಡು ಹೋಗಿದ್ದೇನೆ, ನಾನು ಪಕ್ಕದ ಚಿಕ್ಕೋಡಿಗೆ ಹೋಗಿ ಬಿ. ಶಂಕರಾನಂದರಂತಹ ಮೇರು ವ್ಯಕ್ತಿತ್ವದ ಘಟಾನುಘಟಿಯನ್ನು ಸೋಲಿಸಿದ್ದು, ಕಂದಾಯ ಮಂತ್ರಿಯಾಗಿದ್ದು ಸಾಮಾನ್ಯವೇ? ಈ ಇತಿಹಾಸವನ್ನು ನಿರ್ಮಿಸಿದ್ದೇನೆ, ಇನ್ನೂ ದೊಡ್ಡ ಇತಿಹಾಸ ಬರೆಯಬೇಕಿದೆ, ಆ ಇತಿಹಾಸ ಬರೆಯುವವರೆಗೂ ಸಹ ನಾನು ಸಾಯಲಾರೆ ಎಂದರು.

ಟಿಕೇಟ್ ನನಗೆ ಪಕ್ಕಾ ಎಂದು ಈಗಾಗಲೇ ಹೇಳಿದ್ದಾರೆ, ಅದರಲ್ಲಿ ಯಾವ ಡೌಟ್ ಇಲ್ಲ ಎಂದು ಮತ್ತೊಮ್ಮೆ ತಮಗೆ ಟಿಕೇಟ್ ಕನಫರಮ್ ಎಂಬ ಸಂದೇಶವನ್ನು ಜಿಗಜಿಣಗಿ ರವಾನಿಸಿದ್ದಾರೆ.

Latest Indian news

Popular Stories