ಪಠ್ಯ ಪುಸ್ತಕ ವಿಚಾರದಲ್ಲಿ ಶಿಕ್ಷಣ ಸಚಿವರು ಸಂಪೂರ್ಣವಾಗಿ ವಿಫಲ: ಅರುಣ ಶಹಾಪೂರ

ವಿಜಯಪುರ: ರಾಜ್ಯ ಸರ್ಕಾರ ಪಠ್ಯಪುಸ್ತಕವನ್ನು ರಾಜಕೀಯಗೊಳಿಸುತ್ತಿರುವುದು ದುರಂತ, ಪಠ್ಯ ಪುಸ್ತಕ ವಿಚಾರದಲ್ಲಿ ಶಿಕ್ಷಣ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಗಂಭಿರವಾಗಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯಪುಸ್ತಕ ರಚನೆ ಒಂದು ಸ್ವಾಯುತ್ತ ಸಂಸ್ಥೆ ಅಂದರೆ ಡಿ.ಎಸ್.ಇ.ಆ.ರ್.ಟಿ.ಯಿಂದ ಆಗಬೇಕು, ಸಾರ್ವಜನಿಕ ಚರ್ಚೆಗೆ ಒಳಪಡಬೇಕು, ಆದರೆ ಈಗಿನ ಸರ್ಕಾರ ಮಕ್ಕಳ ಓದಿನಲ್ಲಿಯೂ ರಾಜಕೀಯ ಬೆರೆಸಲು ಹೊರಟಿರುವುದು ದುರಂತ, ಪ್ರಥಮ ಬಾರಿಗೆ ಪಠ್ಯ ಪುಸ್ತಕವನ್ನು ರಾಜಕೀಕರಣಗೊಳಿಸಿದ ಖ್ಯಾತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಪಠ್ಯ ಪರಿಷ್ಕರಣೆ ಸಮಿತಿ ಶಿಫಾರಸ್ಸಿನ ಮೇರೆಗೆ ಪಠ್ಯ ಪರಿಷ್ಕರಿಸಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ, ಪರಿಷ್ಕರಣೆ ಮಾಡುವ ಪಠ್ಯ ಯಾವುದು, ಪರಿಷ್ಕರಿಸಲು ಕಾರಣವೇನು? ಎಂಬುದನ್ನು ಶಿಕ್ಷಣ ಸಚಿವರು ಯಾವ ವಿಷಯವನ್ನು ಸ್ಪಷ್ಟವಾಗಿ ಹೇಳಿಲ್ಲ, ಹೀಗಾಗಿ ಒಂದು ರೀತಿ ಗೊಂದಲದ ಗೂಡಾಗಿ ಪರಿಗಣಿತವಾಗಿದೆ, ಕೂಡಲೇ ಎಲ್ಲ ವಿವರಗಳನ್ನು ಸಮಗ್ರವಾಗಿ ಶಿಕ್ಷಣ ಸಚಿವರು ಬಹಿರಂಗಗೊಳಿಸಬೇಕು ಎಂದರು.

ಕೆಲವೇ ಕೆಲವು ವಿಚಾರವಾದಿ ಹಾಗೂ ಎಡಪಂಥಿಯರನ್ನು ಇಟ್ಟುಕೊಂಡು ಪಠ್ಯ ಪರಿಷ್ಕರಣೆ ಮಾಡಿರುವುದು ಸರಿಯಲ್ಲ. ಇಡೀ ದೇಶ 2023ರ ರಾಷ್ಟ್ರೀಯ ಪಠ್ಯಕ್ರಮ ಅನುಸರಿಸುತ್ತಿದ್ದರೆ ಇದೀಗ ರಾಜ್ಯ ಸರ್ಕಾರ ಮತ್ತೊಮ್ಮೆ ಪಠ್ಯಪರಿಷ್ಕರಣೆ ಮಾಡುವುದರ ಉದ್ದೇಶವೇನು? ಎಂದು ಶಹಾಪೂರ ಪ್ರಶ್ನಿಸಿದರು.

ಪರಿಷ್ಕೃತ ಪಠ್ಯಕ್ರಮದ ಕುರಿತು ಈಗಲೇ ಚರ್ಚೆಯಾಗಲಿ. ಮುದ್ರಣಕ್ಕೆ ಮೊದಲು ಶಿಕ್ಷಣ ತಜ್ಞರು ಚರ್ಚೆ ಮಾಡಲಿ. ಭವಿಷ್ಯದಲ್ಲಿ ಆಗುವ ಅನಾಹುತಗಳಿಗೆ, ಗೊಂದಲಗಳಿಗೆ ಈಗಲೇ ತೆರೆ ಎಳೆಯಬೇಕು, ಪಠ್ಯಪುಸ್ತಕ ಮುದ್ರಣಕ್ಕೆ ನೂರಾರು ಕೋಟಿ ಖರ್ಚಾಗುತ್ತದೆ, ಹೀಗಾಗಿ ಮೊದಲೇ ಅದು ಪರಿಷ್ಕರಣೆಯಾಗಬೇಕು, ಮುದ್ರಣಗೊಂಡು ಬಂದ ಮೇಲೆ ಪುನ: ಪರಿಷ್ಕೃತ ಮುದ್ರಣ ಎಂದರೆ ಸರ್ಕಾರದ ಬೊಕ್ಕಸಕ್ಕೂ ದೊಡ್ಡ ಹಾನಿ ಎಂದು ಕಳವಳ ವ್ಯಕ್ತಪಡಿಸಿದರು.
ಈಗಾಗಲೇ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲಿ ಒಂದು ಸಲ ಪರಿಷ್ಕರಣೆ ಮಾಡಲಾಗಿದೆ. ಇದೀಗ ಎರಡನೇ ಬಾರಿ ಪರಿಷ್ಕರಿಸಲಾಗುತ್ತಿದೆ. ಹಾಗಾದರೆ ಈ ಮೊದಲು ಪರಿಷ್ಕೃತ ಪಠ್ಯ ಬೋಧಿಸಿದ್ದು ತಪ್ಪು ಎಂದಂತಾಯಿತಲ್ಲ? ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಶಿಕ್ಷಣ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಸಾಬೀತಾಗುತ್ತದೆ ಎಂದರು.
ಹಿರಿಯ ನ್ಯಾಯವಾದಿ ಬಸವರಾಜ ಯಾದವಾಡ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories