ವಿಜಯಪುರ: ದೇಶದಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಮುಖ ಕಾರಣವಾಗಿದ್ದು, ಇದಕ್ಕೆ ಆಸ್ಪದ ನೀಡದಂತೆ ತಿಳಿಸಿದ ಅವರು,ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ನಗರದ ಗಾಂಧಿಭವನದಲ್ಲಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಕುರಿತು ಜಿಲ್ಲೆಯ ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್ ವೈದ್ಯರುಗಳಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ ಕುಂದರ್ ಅವರು ಮಾತನಾಡಿ, ಪುರುಷ ಮತ್ತು ಮಹಿಳೆಯರಲ್ಲಿ ಸಮಾನ ಅನುಪಾತ ಕಾಪಾಡಲು ಹೆರಿಗೆಗೆ ಮುನ್ನ ಭ್ರೂಣಲಿಂಗ ಪತ್ತೆ ಮಾಡುವ ನಿಷೇಧ ಕಾಯ್ದೆ-1994 ಜಾರಿಯಲ್ಲಿದೆ. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮತ್ತು ಕಾನೂನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮಕ್ಕೆ ಅವಕಾಶವಿದೆ ಎಂದು ಹೇಳಿದರು.
ಇದರಿಂದ ಸಮಾಜದ ಮೇಲೆ ಆಗುವ ದುಷ್ಪರಿಣಾಮಗಳು, ಕಾನೂನು ಕ್ರಮಗಳು, ದಾಖಲಾತಿಗಳ ನಿರ್ವಹಣೆ ಕುರಿತು ಎನ್ಐಎಂಸಿ ಸದಸ್ಯರಾದ ಪಿಸಿ&ಪಿಎನ್ಡಿಟಿಯ ಗೊರಕ ಮಂದ್ರೂಪಕರ ಅವರು ಹಾಗೂ ಕುಟುಂಬದ ವ್ಯವಸ್ಥೆ ಮೇಲೆ ಬೀರುವ ಪರಿಣಾಮ, ವಿವಾಹ ವಿಚ್ಛೇದನ, ಮತ್ತಿತರ ಸಮಸ್ಯೆ ಕುರಿತು ಪಿಸಿ & ಪಿಎನ್ಡಿಟಿ ವಿಭಾಗದ ಉಪ ನಿರ್ದೇಶಕರಾದ ಡಾ.ಚಂದ್ರಿಕಾ, ಸ್ತ್ರೀರೋಗ ತಜ್ಞರು, ರೇಡಿಯೋಲಾಜಿಸ್ಟ್, ವೈದ್ಯರುಗಳಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಡಾ.ಕೆ.ಡಿ.ಗುಂಡಬಾವಡಿ, ಡಾ.ಜೈಬುನ್ನೀಸಾ ಬೀಳಗಿ, ಪೀಟರ್ ಅಲೆಕ್ಸಾಂಡರ್, ಕಾನೂನು ಸಲಹೆಗಾರರಾದ ತುಳಸಿರಾಮ ಸೂರ್ಯವಂಶಿ, ಡಾ.ವಿದ್ಯಾ ತೊಬ್ಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲೂರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪರಶುರಾಮ ಹಿಟ್ನಳ್ಳಿ, ವಿಜಯ ಮಹಾಂತೇಸ ಹಗರಬಾಳ ಸೇರಿದಂತೆ ಜಿಲ್ಲೆಯ ಎಲ್ಲ ನೊಂದಾಯಿತ ಸ್ಕ್ಯಾನಿಂಗ್ ಸೆಂಟರ್ ವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ರವಿಕಿತ್ತೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.