ಶಾಸಕ ಯತ್ನಾಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಒತ್ತಾಯ

ವಿಜಯಪುರ : ವಿಜಯಪುರ ನಗರದ ಅಭಿವೃದ್ಧಿ ಬಗ್ಗೆ ಒಂದಕ್ಷರೂ ಮಾತನಾಡದ ವಿಜಯಪುರ ನಗರ ಶಾಸಕರು ವಿನಾಕಾರಣ ಹಿಂದೂ-ಮುಸ್ಲಿಂ ಎಂದು ಬೇಧಭಾವ ಸೃಷ್ಟಿ ಮಾಡುತ್ತಿದ್ದಾರೆ, ದ್ವೇಷ ಹರಡುತ್ತಿರುವ ನಗರ ಶಾಸಕರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಬೇಕು ಎಂದು ಅಲ್ಪಸಂಖ್ಯಾತ ಮುಖಂಡ ಮೊಹ್ಮದ್ರಫೀಕ್ ಟಪಾಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ ಏನೂ ಬೇಕಾದರೂ ಹೇಳಲಿ, ಆದರೆ ಒಂದು ಸಮುದಾಯವನ್ನು ಕೇಂದ್ರಿಕರಿಸಿ ಮಾತನಾಡುವುದು ಸರಿಯಲ್ಲ, ಶ್ರೇಷ್ಠ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮದ ವೇದಿಕೆಯನ್ನು ತಮ್ಮ ದ್ವೇಷ ರಾಜಕಾರಣಕ್ಕೆ ಬಳಸಿಕೊಂಡಿರುವುದು ಸರಿಯಲ್ಲ, ಶಿವಾಜಿ ಮಹಾರಾಜರ ಬಗ್ಗೆ ನಮಗೆ ಅಪಾರ ಅಭಿಮಾನವಿದೆ, ಅವರು ಎಂದೂ ಹಿಂದೂ-ಮುಸ್ಲಿಂ ಎಂದು ಬೇಧ-ಭಾವ ಮಾಡಲಿಲ್ಲ, ಛತ್ರಪತಿ ಶಿವಾಜಿ ಮಹಾರಾಜರು ದೇಶದ ವೀರ ನಾಯಕ, ಶಿವಾಜಿ ಮಹಾರಾಜರ ಆದರ್ಶಗಳ ಬಗ್ಗೆ ಕಾರ್ಯಕ್ರಮದಲ್ಲಿ ನಗರ ಶಾಸಕರು ಒಂದಕ್ಷರವೂ ಹೇಳಲಿಲ್ಲ, ಕೇವಲ ಹಿಂದೂ-ಮುಸ್ಲಿಂ ದ್ವೇಷ ಬಿತ್ತುವ ಮಾತು ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ಸರ್ವಧರ್ಮದ ಸಮನ್ವಯ ಕೇಂದ್ರ, ಇಲ್ಲಿರುವ ನಾವೆಲ್ಲರೂ ಸಹೋದರರಂತೆ ಬದುಕುತ್ತಿದ್ದೇವೆ, ಎಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಇಲ್ಲಿ ಧಂಗೆ ಆಗಿಲ್ಲ, ಆದರೆ ನಗರ ಶಾಸಕರು ವಿನಾಕಾರಣ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ, ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಮಾತನಾಡಿ, ಭಯೋತ್ಪಾದಕರಿಗೆ, ದೇಶದ್ರೋಹಿಗಳಿಗೆ ಟೀಕೆ ಮಾಡಲಿ, ಬಯ್ಯಲಿ, ಆದರೆ ವಿನಾಕಾರಣ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಬೈಯುತ್ತಿದ್ದಾರೆ. ಸರ್ವಧರ್ಮ ಸಮಭಾವದ ಪ್ರತೀಕವಾಗಿದ್ದ ಶಿವಾಜಿ ಮಹಾರಾಜರ ಕಾರ್ಯಕ್ರಮದಲ್ಲಿ ಈ ರೀತಿಯ ಕೋಮು ಭಾವನೆ ಕೆರಳಿಸುವ ಕೆಲಸ ಮಾಡಿರುವ ನಗರ ಶಾಸಕರ ವರ್ತನೆ ಖಂಡನೀಯ ಎಂದರು. ಒಂದು ರೀತಿ ಬಸನಗೌಡರೇ ನಿಜವಾದ ಹಿಂದೂ ವಿರೋಧಿಗಳು, ಬಸವಣ್ಣನವರ ಹೆಸರು ಇರಿಸಿಕೊಂಡಿರುವ ಅವರು ಬಸವಣ್ಣನ ವಿರೋಧಿಗಳು ಎಂದರು.

ಡಾ.ಗಂಗಾಧರ ಸಂಬಣ್ಣಿ ಮಾತನಾಡಿ, ಕೇವಲ ಬಿಜೆಪಿಗರು ತಮ್ಮನ್ನಷ್ಟೇ ದೇಶಭಕ್ತರು ಎಂದು ತಿಳಿದುಕೊಂಡಿದ್ದಾರೆ, ಕಾಂಗ್ರೆಸ್ ಪಕ್ಷಕ್ಕೆ ದೇಶಭಕ್ತಿಯೇ ಜೀವಾಳವಾಗಿದೆ ಎಂಬುದನ್ನು ಬಿಜೆಪಿಗರು ಮರೆಯಬಾರದು ಎಂದರು.

ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ವಿಜಯಪುರ ನಗರ ಶಾಸಕರು ಮನಗೂಳಿ ಅಗಸಿ, ಟಿಪ್ಪು ಸುಲ್ತಾನ ಸರ್ಕಲ್ನಲ್ಲಿ ಪಾಕ್ ಧ್ವಜ ಹಾರಿಸಿದ್ದು ನೆನಪು ಹಾರಿದಂತಿದೆ, ನಗರದಲ್ಲಿ 20 ದಿನಗಳಿಗೊಮ್ಮೆ ನೀರು ಬರುತ್ತಿದೆ, ಅದನ್ನು ಬಿಟ್ಟು ಕೇವಲ ದ್ವೇಷ ಕಾರುವ ಮಾತುಗಳನ್ನು ಆಡುತ್ತಾ ಯತ್ನಾಳ ಕಾಲಹರಣ ಮಾಡುತ್ತಿದ್ದಾರೆ, ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ, ದೇಶವಿರೋಧಿಗಳನ್ನು ಮಟ್ಟ ಹಾಕಲಿ ಅದಕ್ಕೆ ನಮ್ಮ ಬೆಂಬಲವೂ ಇದೆ, ಆದರೆ ವಿನಾಕಾರಣ ಹಿಂದೂ-ಮುಸ್ಲಿಂ ಜಗಳ ಹಚ್ಚುವ ಕೆಲಸ ಬೇಡ ಎಂದರು.

ಪಾಲಿಕೆ ಮಾಜಿ ಸದಸ್ಯ ಅಬ್ದುಲ್ರಜಾಕ್ ಹೊರ್ತಿ ಮಾತನಾಡಿ, ಹೈದರಾಬಾದನಿಂದ ಬಂದ ರಾಜಾಸಿಂಗ್ ಇಲ್ಲಿ ಬಂದು ಜಗಳ ಹಚ್ಚುವ ಕೆಲಸ ಮಾಡಿರುವುದು ಎಷ್ಟು ಸರಿ? ಕೂಡಲೇ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದ ಒತ್ತಾಯಿಸಿದರು.

Latest Indian news

Popular Stories