ವಿಜಯಪುರ: ನಗರದ ಭಕ್ತಿಕೇಂದ್ರವಾದ 770 ಅಮರಗಣಂಗಳರ ಸ್ಮಾರಕ ಲಿಂಗ ದೇವಾಲಯ ನವೀಕರಣ ಮತ್ತು ಮಂದಿರದಲ್ಲಿರುವ ಎಲ್ಲ ಲಿಂಗಗಳನ್ನು ಪುನರುಜ್ಜೀವನ ಮಾಡುವ ಅವಕಾಶ ನಮ್ಮ ಬಿ.ಎಲ್.ಡಿಇ ಸಂಸ್ಥೆಗೆ ಒದಗಿ ಬಂದಿರುವುದು ಸುದೈವ. ಈ ಮೂಲಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರಿಗೆ ಹಾಗೂ 12ನೇ ಶತಮಾನದ 770 ಶಿವಶರಣರಿಗೆ ನಾವು ಅಳಿಲು ಸೇವೆಯ ರೂಪದಲ್ಲಿ ಗೌರವ ಸಲ್ಲಿಸಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ರೂ. 1.51 ಕೋಟಿ ವೆಚ್ಚದಲ್ಲಿ ನವೀಕರಿಸಲಾದ 770 ಲಿಂಗಗಳ ದೇವಸ್ಥಾನ ಹಾಗೂ ಪುನರುಜ್ಜೀವನ ಮಾಡಲಾದ ಲಿಂಗಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ರೂ. 1.51 ಕೋ. ವೆಚ್ಚದಲ್ಲಿ ನಗರದ 770 ಅಮರಗಳಂಗಳರ ಲಿಂಗದ ಗುಡಿ ನವೀಕರಣ ಮತ್ತು ಈ ಹಿಂದೆ ಶೆಲ್ಲಿಕೇರಿ ಶಿಲೆಗಳಿಂದ ತಯಾರಿಸಲಾಗಿದ್ದ ಎಲ್ಲ ಲಿಂಗಗಳನ್ನು ಈಗ ಕೃಷ್ಣ ಶಿಲೆಯಿಂದ ಹೊಸದಾಗಿ ತಯಾರಿಸಿ ಪುನರುಜ್ಜೀವನ ಮಾಡಲಾಗಿದೆ. ಕಳೆದ ವರ್ಷ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಇಲ್ಲಿಗೆ ಭೇಟಿ ನೀಡಿದಾಗ ಈ ಕಟ್ಟಡ ಹಾಗೂ ಲಿಂಗಗಳು ಶಿಥಿಲಗೊಂಡಿದ್ದರಿಂದ ನವೀಕರಣ ಮತ್ತು ಪುನರುಜ್ಜೀವನಕ್ಕೆ ಸೂಚನೆ ನೀಡಿದ್ದರು. ಅವರ ಆಶಯದಂತೆ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿ ಇಂದು ಶುಕ್ರವಾರ ಮಹಾಶಿವರಾತ್ರಿಯ ಶುಭದಿನದಂದು ಭಕ್ತರಿಗಾಗಿ ಉದ್ಘಾಟಿಸಲಾಗಿದೆ ಎಂದು ಅವರು ತಿಳಿಸಿದರು.
12ನೇ ಶತಮಾನದಲ್ಲಿ ನಾನಾ ಜಾತಿ ಮತ್ತು ಸಮುದಾಯದ 770 ಜನ ಶಿವಶರಣರು ಬಸವೇಶ್ವರರ ಜೊತೆಗೂಡಿ ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದರು. ಆದರೆ ಅವರಲ್ಲಿ ಬಸವೇಶ್ವರು, ಅಕ್ಕಮಹಾದೇವಿ ಸೇರಿದಂತೆ ಕೆಲವರ ಹೆಸರುಗಳನ್ನು ಹೊರತು ಪಡಿಸಿದರೆ ಆದಯ್ಯ, ನನ್ನಯ್ಯ, ಸುಜ್ಞಾನಿ ದೇವ, ಕಲಕೇತ ಬೊಮ್ಮಯ್ಯ, ಏಕಾಂತದ ರಾಮಯ್ಯ ಸೇರಿದಂತೆ 770 ಅಮರಗಣಂಗಳರ ಹೆಸರುಗಳು ಚಿರಪರಿಚಿತವಾಗಿಲ್ಲ. ಈ ಎಲ್ಲ ಶರಣರ ಹೆಸರನ್ನು ಚಿರಸ್ಥಾಯಿಯಾಗಿಸಲು 1960ರಲ್ಲಿ ಬಂಥನಾಳ ಶಿವಯೋಗಿಗಳು ಇಲ್ಲಿ 770 ಅಮರಗಣಂಗಳರ ಲಿಂಗ ಪ್ರತಿಷ್ಠಾಪಿಸಿದ್ದರು. ಅಲ್ಲದೇ, ಅಂದು ಪ್ರತಿಯೊಂದು ಲಿಂಗ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ತಲಾ ಓರ್ವ ದಂಪತಿಗೆ ನೀಡಿದ್ದರು. ಈ ದೇವಸ್ಥಾನ ಶಿಥಿಲಗೊಂಡ ಹಿನ್ನೆಲೆಯಲ್ಲಿ ಈಗ ಅದನ್ನು ನವೀಕರಣ ಮತ್ತು ಪುನರುಜ್ಜೀವನ ಮಾಡಲಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಬಂಥನಾಶ ಶಿವಯೋಗ ನಿರ್ಮಿಸಿದ್ದ ಈ ದೇವಸ್ಥಾನ ಮತ್ತು ಲಿಂಗಗಳು ಶಿಥಿಲವಾಗಿದ್ದರಿಂದ ಬಿ.ಎಲ್.ಡಿ.ಇ ಸಂಸ್ಥೆ ರೂ. 1.51 ಕೋಟಿ ವೆಚ್ಚದಲ್ಲಿ ನವೀಕರಣ ಮತ್ತು ಪುನರುಜ್ಜೀವನ ಮಾಡಿರುವುದು ಎಲ್ಲ ಭಕ್ತರಿಗೆ ಸಂತಸ ತಂದಿದೆ. ಅಲ್ಲದೇ, ಅಂದು 770 ಶಿಶರಣರ ಲಿಂಗ ಪ್ರತಿಷ್ಠಾಪನೆಗೆ ಭಕ್ತಿಸೇವೆ ಸಲ್ಲಿಸಿದ್ದ ದಂಪತಿಯ ಹೆಸರನ್ನು ಸೇರಿಸಿ ನವೀಕರಿಸಲಾದ ನಾಮಫಲಕವನ್ನೂ ಅಳವಡಿಸುವ ಮೂಲಕ ಶಿವಶರಣರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ. ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಕ್ಷೇತ್ರಕ್ಕೆ ಹೆಸರಾಗಿರುವ ವಿಜಯಪುರ ನಗರದ ಭಕ್ತಿಕೇಂದ್ರವಾಗಿರುವ ಈ ದೇವಸ್ಥಾನ ಇನ್ನು ಮುಂದೆ ಮತ್ತಷ್ಟು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಶರಣಬಸವ ವಾರದ, ಡಾ. ಮಹಾಂತೇಶ ಬಿರಾದಾರ, ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಎಂ. ಎಂ. ಸಜ್ಜನ, ಸಿದ್ರಾಮಪ್ಪ ಉಪ್ಪಿನ, ನೀಲಾ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಶಾಸಕ ಸುನೀಲಗೌಡ ಪಾಟೀಲ ಅವರು ತಮ್ಮ ಪತ್ನಿ ರೇಣುಕಾ ಅವರ ಜೊತೆ ಲಿಂಗದ ಗುಡಿಯಲ್ಲಿ ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಅರ್ಚಕರಿಂದ ಆಶೀರ್ವಾದ ಪಡೆದರು.