ಅಮಾನವೀಯವಾಗಿ ಗೋವು ಸಾಗಾಣೆ, 1 ಗೋವು, 10 ಕರು ಸಾವು | 110 ದನ ರಕ್ಷಣೆ

ವಿಜಯಪುರ: ಬುಲೆರೋ ಪಿಕಪ್ ವಾಹನದಲ್ಲಿ ಅಮಾನವಿಯವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು 110 ಗೋವುಗಳನ್ನು ರಕ್ಷಣೆ ಮಾಡಿದ್ದು, 1 ಗೋವು, 10 ಕರುಗಳು ಸಾವಿಗೀಡಾದ ಘಟನೆ ಇಂಡಿ ತಾಲ್ಲೂಕಿನ ಹಿರೇಬೇವನೂರು ಗ್ರಾಮದಲ್ಲಿ ನಡೆದಿದೆ.

ಮಹಾರಾಷ್ಟ್ರದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಮಂಗಳವಾರ ಮಧ್ಯರಾತ್ರಿ ಮೂರು ಬುಲೆರೋ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ಇಂಡಿ ತಾಲ್ಲೂಕಿನ ಹಿರೇಬೇವನೂರು ಗ್ರಾಮಸ್ಥರು ಅಡ್ಡಗಟ್ಟಿ ರಕ್ಷಣೆ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಗ್ರಾಮಸ್ಥರು ವಾಹನಗಳನ್ನು ಅಡ್ಡಗಟ್ಟಿದ್ದು, ಈ ಸಂದರ್ಭದಲ್ಲಿ ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದು, ಓರ್ವನನ್ನು ಗ್ರಾಮಸ್ಥರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ವಾಹನಗಳಲ್ಲಿ ಬಹುತೇಕ ಕರುಗಳೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು, ಗೋವುಗಳು ಕೂಗದಂತೆ ಅವುಗಳ ಬಾಯಿಗೆ ಪ್ಲಾಸ್ಟಿಕ್‌ ಟೇಪ್‌ನ್ನು ಸುತ್ತಿ, ಕಾಲುಗಳಿಗೆ ಹಗ್ಗ ಕಟ್ಟಿ, ಒಂದರ ಮೇಲೆ ಒಂದರಂತೆ ಗೋವುಗಳನ್ನು ಹಾಕಿ ಸಾಗಿಸಲಾಗುತ್ತಿತ್ತು.

ವಾಹನದಲ್ಲಿ ಉಸಿರಾಟದ ತೊಂದರೆಯಿಂದಾಗಿ 1 ಆಕಳು ಹಾಗೂ 10 ಕರುಗಳು ವಾಹನದಲ್ಲೇ ಜೀವ ಕಳೆದುಕೊಂಡಿದ್ದವು, ಗೋವುಗಳ ಬಾಯಿಗೆ ಸುತ್ತಿದ್ದ ಪ್ಲಾಸ್ಟಿಕ್ ಟೇಪ್ ಹಾಗೂ ಕಾಲುಗಳಿಗೆ ಕಟ್ಟಿದ್ದ ಹಗ್ಗವನ್ನು ಸ್ಥಳಿಯರು ಬಿಚ್ಚಿ ರಕ್ಷಿಸುವ ಕೆಲಸ ಮಾಡಿದ್ದಾರೆ.

ಗ್ರಾಮಸ್ಥರು ಇಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸೆರೆ ಸಿಕ್ಕ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ರಕ್ಷಿಸಿರುವ 110ಕ್ಕೂ ಹೆಚ್ಚು ಗೋವುಗಳನ್ನು ಪೊಲೀಸರು ವಿಜಯಪುರ ಗೋಶಾಲೆಗಳಿಗೆ ಸಾಗಿಸಿದ್ದಾರೆ. ಮೃತ 11 ಗೋವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

Latest Indian news

Popular Stories