ಸಮಾಜ ಸೇವೆಯ ಮೂಲಕ ಜನ್ಮದಿನ‌ ಆಚರಿಸಿಕೊಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರ್ತಿ ರಾಜೇಶ್ವರಿ ಗಾಯಕವಾಡ

ವಿಜಯಪುರ : ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಭರವಸೆ ಆಟಗಾರ್ತಿ ರಾಜೇಶ್ವರಿ ಗಾಯಕವಾಡ ತಮ್ಮ ಜನ್ಮದಿನವನ್ನು ಸಮಾಜ ಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ವಿಜಯಪುರದ ಜುಮನಾಳದಲ್ಲಿರುವ ಶ್ರೀ ಸಿದ್ದೇಶ್ವರ ವಿದ್ಯಾಪೀಠ ಹಾಗೂ ಶ್ರೀಮತಿ ಸಿದ್ಧಮ್ಮ ಬ್ಯಾಕೋಡ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿರುವ ವೃದ್ಧರೊಂದಿಗೆ ಮಾತನಾಡುತ್ತ ಕೆಲ‌ಕಾಲ ಸಮಯಕಳೆದರು. ಅಲ್ಲಿರುವ ವೃದ್ಧರೊಂದಿಗೆ ಆಪ್ತಭಾವದಿಂದ ಬೆರೆತು ಅವರ ಕಷ್ಟ-ಸುಖ ಆಲಿಸಿದರು.

ನಂತರ ಹೊದಿಕೆ ಹಾಗೂ ಮೊದಲಾದ ಅವಶ್ಯಕ ಪರಿಕರಗಗಳನ್ನು ವಿತರಿಸಿದರು. ನಂತರ ಅವರಿಗೆ ಪ್ರೀತಿಯಿಂದ ಭೋಜವನ್ನು ಉಣಬಡಿಸಿದರು. ನಂತರ ಅನಾಥ ಮಕ್ಕಳೊಂದಿಗೂ ಬೆರೆತು ಕೇಕ್ ಕತ್ತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕವಾಡ, ಜನತೆಯ ಪ್ರೀತಿ, ಹಾರೈಕೆಯ ಫಲವಾಗಿಯೇ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಿದೆ, ಗುರು, ಹಿರಿಯರಲ್ಲಿ, ಬಡವರಲ್ಲಿ, ವೃದ್ಧರಲ್ಲಿ ದೇವರನ್ನು ಕಾಣು ಎಂದು ನನ್ನ ತಂದೆ ನನಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿ ಹೋಗಿದ್ದಾರೆ, ಆ ದಾರಿಯಲ್ಲಿ ನಾನು ಸಾಗಿರುವೆ ಎಂದರು.

ಸಮಾಜ ನಮಗೆ ಎಲ್ಲವನ್ನೂ ನೀಡಿದೆ, ಸಮಾಜಕ್ಕಾಗಿ ದುಡಿಯುವುದು ನಮ್ಮ ಕರ್ತವ್ಯ ಸಹ ಹೌದು. ನನಗೆ ಅಭಿಮಾನ, ಅನುಗ್ರಹ ನೀಡಿದ ಜನರಿಗಾಗಿ ನಾನು ಸದಾ ದುಡಿಯುವೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.ಸಂಸ್ಥೆಯ ಅಧ್ಯಕ್ಷ ಶರಣಗೌಡ ಬಿರಾದಾರ, ಮುತ್ತಣ್ಣ ದೇಸಾಯಿ, ಪೂಜಾ ವಾಡಲಗಿ, ರಾಜು ಮೇಲಿನಮನಿ, ಸಹನಾ, ವಿಶ್ವನಾಥ ಗಾಯಕವಾಡ ಮೊದಲಾದವರು ಪಾಲ್ಗೊಂಡಿದ್ದರು.

Latest Indian news

Popular Stories