ಸ್ಪರ್ಶ ಕುಷ್ಠರೋಗ ಅರಿವು ಅಭಿಯಾನ ಜಾಥಾಕ್ಕೆ ಚಾಲನೆ

ವಿಜಯಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಮತ್ತು ಪದವಿ ಪೂರ್ವ ಮಹಾವಿದ್ಯಾಲಯ ಲೊಯೋಲಾ ಕಾಲೇಜ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ “ಸ್ವರ್ಶ ಕುಷ್ಠರೋಗ ಅರಿವು ಅಭಿಯಾನ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಹಾಗೂ ಎನ್.ಜಿ.ಓ ಅಧ್ಯಕ್ಷರಾದ ಪೀಟರ್ ಅಲೆಕ್ಸಾಂಡರ ಜಂಟಿಯಾಗಿ ಚಾಲನೆ ನೀಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯದ ದಿನದ ಅಂಗವಾಗಿ ಪ್ರತಿ ವರ್ಷ ರಾಷ್ಟ್ರೀಯ ಕುಷ್ಠರೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ: 30-01-2024 ರಿಂದ 13-02-2024ರ ವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡು ಜನ ಸಮಾನ್ಯರಲ್ಲಿ ತಿಳುವಳಿಕೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ. ಸಂಪತ ಗುಣಾರಿ ರವರು ಹೇಳಿದರು.

ಕುಷ್ಠರೋಗ ಯಾವುದೇ ಪಾಪ ಅಥವಾ ಶಾಪದಿಂದ ಬರುವದಿಲ್ಲ. ಇದು ಸಹ ಒಂದು ಸಮಾನ್ಯ ಕಾಯಿಲೆಯಂತೆ ಎಲ್ಲರಿಗೂ ಬರಬಹುದು. ಮೈಕೋಬ್ಯಾಕ್ಟಿರಿಯಂ ಲೆಪ್ರೇ ಎನ್ನುವ ರೋಗಾಣುವಿನಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಸೀನುವದರಿಂದ, ಕೆಮ್ಮವದರಿಂದ, ಗಾಳಿಯ ಮೂಲಕ ರೋಗಾಣುಗಳು ಹೊರಗಡೆ ಬಂದು ಆರೋಗ್ಯವಂತ ಮನುಷ್ಯರಿಗೆ ಉಸಿರಾಟದ ಮೂಲಕ ಹರಡುವ ಸಾಧ್ಯತೆ ಇರುತ್ತದೆ.

1873ರಲ್ಲಿ ನಾರ್ವೇ ದೇಶದ ವಿಜ್ಞಾನಿ ಡಾ. ಹ್ಯಾನ್ಸನ್ ಎಂಬುವರು ಮೈಕೋ ಬ್ಯಾಕ್ಟೇರಿಯಂ ಲೆಪ್ರೇ ಎನ್ನುವ ರೋಗಾಣುವಿಂದ ಕುಷ್ಠರೋಗ ಬರುತ್ತದೆ ಎಂದು ಕಂಡು ಹಿಡಿದರು. ಅಂದಿನಿಂದ ಈ ರೋಗಕ್ಕೆ ಹ್ಯಾನ್ಸನ್ ಡಿಸೀಸ್ ಎಂದು ಕರೆಯುತ್ತಾರೆ.

ಕುಷ್ಠರೋಗದ ಲಕ್ಷಣಗಳು: ಸ್ಪರ್ಶ ಜ್ಞಾನವಿಲ್ಲದ ತಿಳಿ-ಬಿಳಿ ತಾಮ್ರ ವರ್ಣದ ಕಲೆಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಎಣ್ಣೆ ಸವರಿಸಿದಂತ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟುಗಳು, ಕಣ್ಣಿನ ರೆಪ್ಪಗಳನ್ನು ಮುಚ್ಚವಲ್ಲಿ ತೊಂದರೆ, ಕೈ ಅಥವಾ ಕಾಲುಗಳಲ್ಲಿನ ಗಾಯ ಬಹುದಿನದವರೆಗೆ ವಾಸಿಯಾಗದೇ ಇರುವದು, ಕೈ ಅಥವಾ ಕಾಲುಗಳ ಬೆರಳುಗಳು ಮಡಚಿಕೊಂಡಿರುವದು, ನಡೆಯುವಾಗ ಕಾಲು ಎಳೆಯುವದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನುಸುವಿಕೆ ಅಥವಾ ಮರಗಟ್ಟುವದು, ಕೈಯಿಂದ ವಸ್ತುಗಳು ಹಿಡಿಯಲು ಹಾಗೂ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇತ್ಯಾದಿ ಲಕ್ಷಣಗಳಿದ್ದವರು ಶಂಕಿತ ಕುಷ್ಠರೋಗವಿರಬಹುದು.

ಹತ್ತಿರದ ಎಲ್ಲ ಸರಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ರಾಷ್ಟ್ರೀಯ ಕುಷ್ಠರೋಗ ಕಳಂಕವನ್ನು ಕೊನೆಗೊಳಿಸಿ, ಘನತೆಯನ್ನು ಎತ್ತಿ ಹಿಡಿಯಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಬಸವರಾಜ ಹುಬ್ಬಳ್ಳಿ ರವರು ಹೇಳಿದರು. ನಂತರ ಪ್ರತಿಜ್ಞಾವಿಧಿಯನ್ನು ಭೋಧಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಎಮ್. ಕೋಲೂರು, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು, ಲೊಯೋಲಾ ಕಾಲೇಜಿನ ಭೋದಕ ಸಿಬ್ಬಂದಿವರ್ಗದವರು, ವಿಧ್ಯಾರ್ಥಿ ಹಾಗೂ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.

Latest Indian news

Popular Stories