ಅರಣ್ಯ ಬೆಳೆಸಲು ಸಮಗ್ರ ಯೋಜನೆ ರೂಪಿಸಲು ಸಚಿವ ಎಂ.ಬಿ.ಪಾಟೀಲ ಸೂಚನೆ

ವಿಜಯಪುರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ (NHAI)ದವರು ರಾಜ್ಯದ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಕೈಗೊಂಡಿದ್ದು, ಈ ಹೆದ್ದಾರಿಯಿಂದ ಕಡಿಮೆಯಾಗುವ ಅರಣ್ಯ ಜಮೀನಿಗೆ ಬದಲಾಗಿ ವಿಜಯಪುರ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಉದ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೂತನಾಳ ಮತ್ತು ಬಾಬಾನಗರ ಬಳಿ 200 ಹೆಕ್ಚರ್ ಪ್ರದೇಶವನ್ನು ಗುರುತಿಸಲು ಹಾಗೂ ಈ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಕುರಿತು ಸಮಗ್ರ ಯೋಜನೆ ರೂಪಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರವಿವಾರ ಭೂತನಾಳ ಕೆರೆಗೆ ಭೇಟಿ ನೀಡಿದ ಅವರು ಶತಮಾನದ ಹಿಂದೆ 1910 ಖ್ಯಾತ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಉಸ್ತುವಾರಿಯಲ್ಲಿ ನಿರ್ಮಿಸಿದ ಮತ್ತು ಈಗ ನವೀಕರಣ ಮಾಡಲಾಗಿರುವ ಗೆಸ್ಟಹೌಸ್ ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ (NHAI)ದವರು ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಮೀಸಲಿಟ್ಟಿರಯವ ಅರಣ್ಯ ಅಭಿವೃದ್ಧಿ ಕಾರ್ಯಗಳನ್ನು ಭೂತನಾಳ ಅಥವಾ ತಿಕೋಟಾ ತಾಲೂಕಿನ ಬಾಬಾನಗರ ಬಳಿ ಅರಣ್ಯಾಭಿವೃದ್ಧಿಗೆ ಬಳಸಬೇಕು. ಇದರಿಂದ ವಿಜಯಪುರ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಾಗುತ್ತದೆ ಮತ್ತು ಸರಕಾರಿ ಜಮೀನು ಅತಿಕ್ರಮಣ ತಪ್ಪಲಿದೆ. ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಇದೇ ವೇಳೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರಿನಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ನಿರ್ಮಿಸಿ ಅಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ವಿಜ್ಞಾನ ಮತ್ತು ಧ್ಯಾನ ಕೇಂದ್ರ, ತಾರಾಲಯ ಸ್ಥಾಪಿಸಲು ಸ್ಥಳ ಗುರುತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ರೀತಿ ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿರುವ ಕಲ್ಲಿನ ಖಣಿಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಿ ಆ ಸ್ಥಳವನ್ನು ಸಾರ್ವಜನಿಕ ಉದ್ದೇಶಗಳಿಗೆ ಬಳಸುವ ಕುರಿತು ಅವರು ಚರ್ಚೆ ನಡೆಸಿದರು.

ಈ ಸಂದರ್ಭಸಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸಿಎಫ್ ಭಾಗ್ಯವಂತ ಮಸೂದಿ, ಆರ್. ಎಫ್. ಓ ಸಂತೋಷ ಅಜೂರ, ಡಾ. ಮಹಾಂತೇಶ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ

ವಿಜಯಪುರ: ಈ ಬಾರಿ ಭೀಕರ ಬರಗಾಲವಿದೆ. ಮುಂಬರುವ ಬೇಸಿಗೆಯಲ್ಲಿ ಜನ ಜಾನುವಾರಗಳಿಗೆ ನೀರಿನ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಿ, ಅಧಿಕಾರಿಗಳು ಪೂರ್ವ ಯೋಜನೆಯೊದಿಗೆ ಕಾರ್ಯ ನಿರ್ವಹಿಸಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಮಪರ್ಕವಾಗಿ ಕುಡಿಯುವ ನೀರು ಒದಗಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಭೂತನಾಳ ಕೆರೆಯನ್ನು ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರು ಹರಿಯುವ ಪ್ರಮಾಣ, ನೀರೆತ್ತುವ ಪಂಪ್, ವಿದ್ಯುತ್ ಪರಿಕರಗಳ ಸಾಮರ್ಥ್ಯ ಸೇರಿದಂತೆ ವಿವಿಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿದ ಮಾಹಿತಿ ಪಡೆದ ಸಚಿವರು, ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾದ್ಯತೆಯ ಮೇಲೆ ನೀಗಿಸಬೇಕು. ಮಳೆಯ ಅಭಾವದಿಂದ ಭೂತನಾಳ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪರ್ಯಾಯ ಮಾರ್ಗದಿಂದ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ಹರಿಸಲಾಗುತ್ತಿದೆ. ಇನ್ನು ಹೆಚ್ಚುವರಿಯಾಗಿ 8-10 ಮೋಟರ್ ಅಳವಡಿಸಿ ಕೆರೆಗೆ ನೀರು ಹರಿಸಿ ಸಂಗ್ರಹಿಸಿಟ್ಟುಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಿಡಗುಂದಿ ಅಕ್ವಾಡೆಕ್ಟನಿಂದ ಪರ್ಯಾಯ ಮಾರ್ಗದ ಮೂಲಕ ಭೂತನಾಳ ಕೆರೆಗೆ ನೀರು ಹರಿಸಿ, ನಗರದ ಜನರಿಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು, ನೀರನ್ನು ಭೂತನಾಳ ಕೆರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆಯೂ ಅಗತ್ಯ ಬಿದ್ದರೆ ಇನ್ನು ಹೆಚ್ಚುವರಿಯಾಗಿ ಮೋಟರ್ ಅಳವಡಿಸಿ ಪೂರ್ಣ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಭೂತನಾಳ ಕೆರೆಗೆ ನೀರು ಸಂಗ್ರಹಿಸಲು ಅರಕೇರಿ ಶಾಖಾ ಕಾಲುವೆ ಮೂಲಕ ನೀರು ಹರಿಸುವ ಪರ್ಯಾಯ ಮಾರ್ಗದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಹಾನಗರ ಪಾಲಿಕೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೂತನಾಳ ಕೆರೆಯಿಂದ ನಗರಕ್ಕೆ ಕುಡಿಯುವ ನೀರು ಒದಗಿಸಲು ಪಂಪ್ ಹೌಸ್ ಆರಂಭಿಸಲಾಗಿದೆ. ಇನ್ನು ಎರಡು ದಿನಗಳಲ್ಲಿ ಮತ್ತಷ್ಟು ನೀರು ಸಂಗ್ರಹವಾಗುವುದರಿಂದ ಇನ್ನೊಂದು ಪಂಪ್ ಆರಂಭಿಸಿ ನಗರಕ್ಕೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿರುವ ಐತಿಹಾಸಿಕ ಬಾವಿಗಳ ಪುನಃಶ್ಚೇತನಗೊಳಿಸಿ, ಸ್ವಚ್ಛಗೊಳಿಸಿ ಭಾವಿಯ ನೀರನ್ನು ಗೃಹ ಬಳಕೆಗಾಗಿ ಉಪಯೋಗಿಸುವಂತೆ ಕ್ರಮ ವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದಲ್ಲಿರುವ ಎರಡು ಭಾವಿಗಳಿಂದ ಸ್ವಚ್ಛಗೊಳಿಸಲಾಗಿದ್ದು, ಈ ಭಾವಿಯ ನೀರನ್ನು ಗೃಹ ಬಳಕೆಗೆ ಉಪಯೋಗಿಸಲು ಕ್ರಮ ವಹಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ನಗರದಲ್ಲಿನ 476 ಕೊಳವೆ ಬಾವಿಗಳಿಗೆ ಹಾಗೂ 27 ತೆರೆದ ಬಾವಿಗಳಿಗೆ ವಿದ್ಯುತ್ ಮೋಟರ್ ಅಳವಡಿಸಿದ್ದು, ಇವುಗಳಿಂದ ನಗರದ ಜನರ ದಿನಬಳಕೆಗಾಗಿ ಪ್ರತಿ ದಿನ ನೀರು ಪೂರೈಸಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದು ಹೇಳಿದರು.
ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ವಿಜಯಪುರ ನಗರಕ್ಕೆ ಭೂತನಾಳ ಕೆರೆಯ ನೀರು ಕುಡಿಯಲು ಬಳಸಲಾಗುತ್ತಿದೆ.ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ಸಮಸ್ಯೆಬಾರದಂತೆ ನೋಡಿಕೊಳ್ಳಲು ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಬಸವನ ಬಾಗೇವಾಡಿ ವೃತ್ತದ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರರಾದ ಗೋವಿಂದ ರಾಠೋಡ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories