ಕೂಸಿನ ಮನೆಗಳಿಗೆ ನೋಡೆಲ್ ಅಧಿಕಾರಿ ಭೇಟಿ, ಪರಿಶೀಲನೆ

ವಿಜಯಪುರ : ನರೇಗಾ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ತಿಕೋಟಾ ಭಾಗದ ಕೂಸಿನ ಮನೆಗಳಿಗೆ ನೋಡೆಲ್ ಅಧಿಕಾರಿ ಎಸ್.ಸಿ. ಮ್ಯಾಗೇರಿ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲನೆ ನಡೆಸಿತು.

ತಿಕೋಟಾ ತಾಲೂಕು ವ್ಯಾಪ್ತಿಯ ಲೋಹಗಾಂವ, ಬಾಬಾನಗರ, ಕನಮಡಿ ಮತ್ತು ಹೊನವಾಡ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾದ ಕೂಸಿನ ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಸಮಗ್ರ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಸಿ. ಮ್ಯಾಗೇರಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾದ ಕೂಸಿನ ಮನೆಗಳು ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿವೆ. ಗ್ರಾಮೀಣ ಭಾಗದ ಜನರು ತಮ್ಮ 03 ವರ್ಷದೊಳಗಿನ ಮಕ್ಕಳನ್ನು ಈ ಕೇಂದ್ರದಲ್ಲಿ ಬಿಟ್ಟು ನಿಶ್ಚಿಂತೆಯಿಂದ ಕೂಲಿ ಕೆಲಸಕ್ಕೆ ತೆರಳಲು ಈ ಕೇಂದ್ರಗಳು ಸಹಕಾರಿಯಾಗಿವೆ. ಈ ಕೇಂದ್ರದಲ್ಲಿ ಮಕ್ಕಳಿಗೆ ಆಟ ಪಾಠದ ಜೊತೆಗೆ ಪೌಷ್ಠೀಕ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಕೂಸಿನ ಮನೆಯ ಮಹತ್ವವನ್ನು ವಿವರಿಸಿದರು.

ಅಧಿಕಾರಿ ಶೋಭಕ್ಕ ಶೀಳೀನ ಮಾತನಾಡಿ, ತಿಕೋಟಾ ತಾಲೂಕಿನಾದ್ಯಂತ 10 ಕೂಸಿನ ಮನೆಗಳು ಮಂಜೂರಾಗಿದ್ದು ಸರಕಾರದ ನಿರ್ದೇಶನದಂತೆ ಎಲ್ಲಾ ಕೇಂದ್ರಗಳನ್ನು ಆರಂಭ ಮಾಡಲಾಗಿದೆ. ಮತ್ತು ಕೇಂದ್ರದ ಆರೈಕೆದಾರರು ಸಮೀಕ್ಷೆ ಮಾಡಿ ಮಕ್ಕಳನ್ನು ದಾಖಲು ಮಾಡಿಕೊಳ್ಳುತ್ತಿದ್ದು, ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಈ ಕೇಂದ್ರಗಳಲ್ಲಿ ದಾಖಲು ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.
ಸಿಡಿಪಿಓ ವ್ಹಿ.ಕೆ.ಹೊಸಮನಿ, ಪಿಡಿಓ ಸುರೇಶ ಕಳ್ಳಿಮನಿ, ಪದ್ಮಿನಿ ಬಿರಾದಾರ, ರೇಣುಕಾ ಸೋಲಾಪುರ, ಮಹೇಶ ಕಗ್ಗೋಡ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಕೂಸಿನ ಮನೆ ಆರೈಕೆದಾರರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Latest Indian news

Popular Stories