ವಿಜಯಪುರ: ವಿಜಯಪುರ ಜಿಲ್ಲೆಯ ವಕ್ಪ್ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಜಿಲ್ಲೆಯ ರೈತರ ಜಮೀನುಗಳಿಗೆ ವಕ್ಪ್ ನೋಟಿಸ್ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಆತಂಕ ವ್ಯಕ್ತಪಡಿಸುವಂತಾಗಿದೆ.
ಸದ್ಯ ವಿಜಯನಗರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಕೆಂಡಾಮಂಡಲಾಗಿದ್ದು, ಹೋರಾಟದ ಕಿಚ್ಚು ದಿನೇ ದಿನೇ ಜೋರಾಗುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ 7 ಹಾಗೂ 8 ರಂದು ಸಚಿವ ಜಮೀರ ಅಹ್ಮದ ಖಾನ್ ಅಧಿಕಾರಿಗಳ ಸಭೆ ನಡೆಸಿದ್ದರು. ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಕ್ಫ್ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯಲ್ಲಿ ವಕ್ಫ್ ಆಸ್ತಿಗೆ ಸಂಬಂಧ ಪಟ್ಟಂತೆ ಪ್ಲ್ಯಾಂಗಿಗ್ ಮಾಡುವಂತೆ ಸೂಚಿಸಿದ್ದರು.
ಇದಕ್ಕೆ 45 ದಿನಗಳ ಕಾಲ ಗಡುವನ್ನು ಕೂಡ ನೀಡಿದ್ದರು. ಇದಕ್ಕೆ ಸಂಬಂಧ ಪಟ್ಟಂತೆ ಜಿಲ್ಲೆಯ ಬಹುತೇಕ ಭಾಗದ ರೈತರುಗಳಿಗೆ ಆಯಾ ತಹಶಿಲ್ದಾರರಿಂದ ನೋಟಿಸ್ ಹೋಗಿದೆ ಕೆಲ ರೈತರಿಗೆ ನೋಟಿಸ್ ನೀಡಿದ್ದು, ಅವರ ಪಹಣಿಯಲ್ಲಿ ಇದು ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ.
ಇದರಿಂದ ಕಳೆದ ಎರಡುಮೂರು ತಲೆಮಾರುಗಳಿಂದ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬಂದ ರೈತರು ಕಂಗಾಲಾಗಿದ್ದಾರೆ. ಈ ಆಸ್ತಿಗೆ ಸಂಬಂಧಪಟ್ಟಂತೆ ತಮ್ಮ ಬಳಿ ಏನು ದಾಖಲೆ ಇದೆ ಅದನ್ನು ಕೊಡಿ ಎಂದು ತಹಶೀಲ್ದಾರರು ಆಯಾ ಭಾಗದ ರೈತರಿಗೆ ನೊಟೀಸ್ ಕೂಡ ನೀಡಿದ್ದಾರೆ. ಸದ್ಯ ಈ ಘಟನೆಯಿಂದ ಕಂಗಾಲಾಗಿರುವ ಅನೇಕ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಹೋರಾಟ ಕೈಗೊಂಡಿದ್ದಾರೆ.
ಇದಲ್ಲದೆ ಹಲವು ಕಡೆಗಳಲ್ಲಿ ರೈತರಿಗೆ ನೋಟಿಸ್ ನೀಡದೆಯೇ ವಕ್ಪ್ ಎಂದು ಆಸ್ತಿಯಲ್ಲಿ ನಮೂದು ಮಾಡಲಾಗಿದೆ. ಇಂಡಿ ತಾಲ್ಲೂಕಿನ ತೆನಿಹಳ್ಳಿ ಗ್ರಾಮದ ಯಮನಪ್ಪ ಕೆಂಗನಾಳ ಎನ್ನುವ ರೈತನ ಸರ್ವೇ ನಂಬರ್ 110ರ 14.5 ಎಕರೆ ಜಮೀನಿನ ಪಹಣಿ ಪತ್ರದಲ್ಲಿ ಕರ್ನಾಟಕ ವಕ್ಫ್ ಬೋರ್ಡ ಎಂದು ಸೇರ್ಪಡೆಯಾಗಿದೆ. ತನ್ನ ಪಿತ್ರಾರ್ಜಿತ ಆಸ್ತಿ ಇದು. ಏಕಾಏಕಿ ಈ ರೀತಿ ವಕ್ಪ್ ಆಸ್ತಿ ಎಂದು ಘೋಷಣೆ ಮಾಡಿದರೆ ನಾವೇನು ಮಾಡೋದು ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಬಬಲೇಶ್ವರ ಶಾಸಕ ಹಾಗೂ ಸಚಿವ ಎಂಬಿ ಪಾಟೀಲ್ ಮಾತನಾಡಿದ್ದು, ವಕ್ಫ್ ಸಮಿತಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಾರೆ. ಒಂದೇ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ್ ಆಸ್ತಿ ಎಂದು ಸೇರಿಸಲಾಗುವುದಿಲ್ಲ. ಈ ಕುರಿತು ಸಭೆ ನಡೆಸಿ ಎಲ್ಲಾ ಗೊಂದಲಗಳಿಗೆ ಉತ್ತರ ನೀಡಲಾಗುವುದು ಎಂದಿದ್ದಾರೆ. ವಿಜಯಪುರ ರೈತರ ಹೋರಾಟ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ