ಸ್ವಯಂ ಚಾಲಿತ ಮೋಟಾರ ನಿಯಂತ್ರಣ ನೀರು ನಿರ್ವಹಣಾ ಉಪಕರಣಕ್ಕೆ ಪೇಟೆಂಟ್

ವಿಜಯಪುರ : ಇಕೋಫ್ರೆಂಡ್ಲಿ ರೂಫ್, ಸ್ವಯಂಚಾಲಿತ ಕಬ್ಬು ನಾಟಿ ಮಾಡುವ ಯಂತ್ರ ರೂಪಿಸುವ ಮೂಲಕ ವಿಜಯಪುರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಇಂಜನಿಯರಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪೇಟೆಂಟ್ ಪಡೆದುಕೊಂಡಿದ್ದು, ಈಗ ಮತ್ತೊಂದು ಸಂಶೋಧನೆಗೆ ಪೇಟೆಂಟ್ ದೊರಕಿದೆ.

ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ಪ್ರದೀಪ ಮಾಳಜಿ, ಡಾ.ವಿಜಯಕುಮಾರ ಜತ್ತಿ ಹಾಗೂ ವಿವಿಧ ವಿದ್ಯಾರ್ಥಿಗಳು ರೂಪಿಸಿರುವ ಸ್ವಯಂ ಚಾಲಿತ ಮೋಟಾರ ನಿಯಂತ್ರಣ ನೀರು ನಿರ್ವಹಣಾ ಉಪಕರಣಕ್ಕೆ ಭಾರತ ಸರ್ಕಾರದ ಪೇಟೆಂಟ್ ಕಾರ್ಯಾಲಯವು (ಬೌದ್ಧಿಕ ಆಸ್ತಿ ಸ್ವಾಮ್ಯ ಪ್ರಮಾಣ ಪತ್ರ) ಪೆಟೆಂಟ್ ನೀಡಿ ಗೌರವಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರಾಚಾರ್ಯ ಡಾ. ವಿ.ಜಿ.ಸಂಗಮ, ನೂತನವಾಗಿ ಪೇಟೆಂಟ್ ಗಿಟ್ಟಿಸಿಕೊಂಡಿರುವ ಈ ಆವಿಷ್ಕಾರವುಈಗಾಗಲೇ ಮಾರುಕಟ್ಟೆಯಲ್ಲಿ ಪ್ರಚಲಿತವಿರುವ ಇತರ ಯಂತ್ರಗಳಿಗಿಂತ ತುಂಬಾ ಭಿನ್ನವಾಗಿದೆ. ಈಗಿನ ಯಂತ್ರಗಳು ನೀರಿನ ಸಂಪರ್ಕದಲ್ಲಿ ಸದಾ ಇದ್ದು ಕೆಲ ಕಾಲದ ನಂತರ ತುಕ್ಕು ಹಿಡಿದು ಅಥವಾ ಶಾರ್ಟಸರ್ಕ್ಯೂಟ್ ಆಗಿ ಹಾಳಾಗಿ ರಿಪೇರಿ ಅಥವಾ ಹೊಸದು ಖರೀದಿಸುವ ಪ್ರಮೇಯದಲ್ಲಿವೆ ಆದರೆ ಈ ಹೊಸ ಉಪಕರಣವು ತುಂಬಾ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು ನೀರಿನ ಸಂಪರ್ಕಕ್ಕೆ ಬಾರದೆ ಶ್ರವಣಾತೀತ ಶಬ್ಧ ಕಂಪನಗಳನ್ನು ಬಳಸಿ ಅಲ್ಟ್ರಾಸಾನಿಕ್ ಸೆನ್ಸರ್ ಗಳನ್ನು ಬಳಸಿಕೊಂಡು ಅತ್ಯಂತ ನಿಖರವಾಗಿ ನೆಲದಡಿಯ ನೀರಿನ ಟ್ಯಾಂಕ್ ಹಾಗೂ ಮೇಲ್ಛಾವಣಿ ಮೇಲೆ ಇಟ್ಟಿರುವ ಸಿಂಟೆಕ್ಸನಲ್ಲಿರುವ ನೀರಿನ ಪ್ರಮಾಣದ ಅಳತೆಮಾಡಿ ನೀರಿನ ಲಭ್ಯತೆಗೆ ಅನುಗುಣವಾಗಿ ನೀರು ಸರಬರಾಜನ್ನು ಮಾಡುತ್ತದೆ.

ಈ ವ್ಯವಸ್ಥೆಯನ್ನು ಆ್ಯಂಡ್ರಾಯ್ಡ್ ಅಪ್ಲಿಕೆಷನ್ ಇರುವ ಮೋಬೈಲ ಮೂಲಕವು ನಿಯಂತ್ರಿಸಬಹುದು ಹಾಗೂ ಮೋಬೈಲನಲ್ಲಿಯೇ ನೀರಿನ ಬಳಕೆಯ ದತ್ತಾಂಶಗಳನ್ನು ಸಂಗ್ರಹಿಸಿ ನೀರಿನ ದುರ್ಬಳಕೆ ತಡೆಯಬಹುದು ಎಂದು ಡಾ.ಸಂಗಮ ವಿವರಿಸಿದ್ದಾರೆ.
ನೀರಿನ ಮಿತವ್ಯಯ ಹಾಗೂ ಪರಿಣಾಮಕಾರಿ ಬಳಕೆಗೆ ಈ ಆವಿಷ್ಕಾರ ಪೂರಕವಾದ ಹೆಜ್ಜೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪ್ರಶಸ್ತಿ
ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ವಿಭಾಗದ ಪ್ರಶಾಂತ ಉಕ್ಕಲಿ, ದರ್ಶನ ಶಟಗಾರ, ಪೂಜಾ ರಾಥೋಡ ಹಾಗೂ ಪ್ರೀಯಾ ಮೇತ್ರಿ ಅವರಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೊಡಮಾಡುವ ಮೆಯು ನೀಡುವ 2023-24ನೇ ಸಾಲಿನ ಪದ್ಮಶ್ರೀ ಡಾ. ಎಸ್.ಕೆ.ಶಿವಕುಮಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳು ರೂಪಿಸಿರುವ ಸ್ಮಾರ್ಟ್ ಆ್ಯಂಟಿ ಥ್ರೆಪ್ಟ್ ಕಂಟ್ರೋಲ್ ಸಿಸ್ಟಂ ಯೋಜನೆಗೆ ಈ ಪ್ರಶಸ್ತಿ ದೊರಕಿದೆ.

Latest Indian news

Popular Stories