ರಾಜೀವ ಗಾಂಧಿ ವಿವಿ ಕಬಡ್ಡಿ ತಂಡಕ್ಕೆ ಆಯ್ಕೆ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ತಿಕೋಟಾ ನರ್ಸಿಂಗ್ ಕಾಲೇಜಿನ ಬಿ.ಎಸ್ಸಿ ನರ್ಸಿಂಗ್ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಕುಮಾರ ನಾವಿ ಮತ್ತು ಐಶ್ವರ್ಯ ಪಾರೆ ಅವರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಅಲ್ಲದೇ, ಇದೇ ಕಾಲೇಜಿನ ದೈಹಿಕ ನಿರ್ದೇಶಕ ಭೀಮರಾವ ದೇಸಾಯಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಇನ್ನು ಮುಂದೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕಬಡ್ಡಿಯಲ್ಲಿ ಪ್ರತಿನಿಧಿಸಲಿದ್ದಾರೆ.

ಯುನಿವರ್ಸಿಟಿ ಬ್ಲ್ಯೂ ಆಗಿ ಆಯ್ಗೆಯಾದ ಬಿ.ಎಸ್ಸಿ ನರ್ಸಿಂಗ್ 2ನೇ ವರ್ಷದ ವಿದ್ಯಾರ್ಥಿ ಕುಮಾರ ನಾವಿ ಅವರನ್ನು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಎಂ. ಕೆ. ರಮೇಶ ಮತ್ತು ಬಿ.ಎಸ್ಸಿ ನರ್ಸಿಂಗ್ 2ನೇ ಸೆಮಿಸ್ಟರ್ ವಿದ್ಯಾರ್ಥಿನಿ ಐಶ್ವರ್ಯ ಪಾರೆ ಅವರನ್ನು ವಿವಿಯ ಕ್ರೀಡಾ ವಿಭಾಗದ ಉಪನೋಂದಣಾಧಿಕಾರಿ ಡಾ. ಬಿ. ವಸಂತ ಶೆಟ್ಟಿ ಅವರು ನವೆಂಬರ್ 20 ರಂದು ಸೋಮವಾರ ಇಬ್ಬರೂ ಕ್ರೀಡಾಪಟುಗಳಿಗೆ ಪದಕ ಮತ್ತು ಆಯ್ಕೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಬಸವ ನಾಡಿನ ವಿದ್ಯಾರ್ಥಿಗಳ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಜಿ. ಕೆ. ಪಾಟೀಲ, ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ತಿಕೋಟಾದ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ ಸಿದ್ದಾಪುರ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Latest Indian news

Popular Stories