ಲಿಂಗಾಯತ ಒಳಪಂಗಡಗಳನ್ನು ಒಗ್ಗೂಡಿಸಿ ಮೀಸಲಾತಿ ಪಡೆಯಲು ರಂಭಾಪುರಿ ಜಗದ್ಗುರುಗುಳು ನೇತೃತ್ವ ವಹಿಸಬೇಕು: ಸಚಿವ ಎಂ.ಬಿ.ಪಾಟೀಲ

ವಿಜಯಪುರ: ಸಮುದಾಯದ ಸರ್ವಾಂಗೀಣ ಏಳಿಗೆಗಾಗಿ ಪಂಚಪೀಠಗಳು ಮತ್ತು ವಿರಕ್ತಮಠಗಳು ಸೇರಿಕೊಂಡು ಲಿಂಗಾಯತ ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಮೀಸಲಾತಿ ಪಡೆಯುವಂತಾಗಬೇಕು. ಇದಕ್ಕೆ ರಂಭಾಪುರಿ ಜಗದ್ಗುರುಗುಳು ನೇತೃತ್ವ ವಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಶನಿವಾರ ಸಂಸ್ಥಾನ ಹಿರೇಮಠ ಆಯೋಜಿಸಿದ್ದ ಶತಾಯುಷಿ ಶ್ರೀ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ ಹಾಗೂ ಉಭಯ ಶ್ರೀಗಳ ಧ್ವನಿ ಸುರುಳಿ ಬಿಡುಗಡೆ ಮತ್ತು ಸಂಗನಬಸವ ಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಧರ್ಮ ಸಭೆಯಲ್ಲಿ ಪಾಲ್ಗೋಂಡ ಸಚಿವರು, ಭಕ್ತರ ದೈವ ಅಭಿನವ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದರು.

ಪಂಚಪೀಠಗಳು ಮತ್ತು ವಿರಕ್ತಮಠಗಳು ಲೋಪದೋಷಗಳನ್ನು ಸರಿಪಡಿಸಲು ಲಿಂಗಾಯಿತ ಸಮುದಾಯದ ಉಪಪಂಗಡಗಳನ್ನು ಒಗ್ಗೂಡಿಸಬೇಕು. ಎಲ್ಲ ಉಪಪಂಗಡಗಳಿಗೆ ರಾಜ್ಯದಲ್ಲಿ 2ಎ ಮತ್ತು ಕೇಂದ್ರದಲ್ಲಿ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿಯ ಪಡೆಯಬೇಕು. ಎಲ್ಲ ಉಪಪಂಗಡಗಳನ್ನು ಒಂದೇ ಸೂರಿನಲ್ಲಿ ಸೇರಿಸದಿದ್ದರೆ ಅನ್ಯಾಯವಾಗುತ್ತವೆ. ಇದರಲ್ಲಿ ಯಾವ ಪ್ರತಿಷ್ಠೆಯೂ ಇಲ್ಲ. ರಂಭಾಪುರಿ ಶ್ರೀಗಳು ನೇರ, ಸ್ಪಷ್ಡ ನುಡಿಗಳಿಂದ ನಮ್ಮೆಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಕಾರಣರಾಗಿದ್ದಾರೆ. ಶ್ರೀಗಳು ನೇತೃತ್ವ ವಹಿಸಿಕೊಂಡು ಮುಂದಡಿ ಇಡದಿದ್ದರೆ ಸಮಾಜದ ಶಕ್ತಿ ಕಡಿಮೆಯಾಗಲಿದೆ. ಈಗ ಎಲ್ಲ ಉಪಪಂಗಡಗಳನ್ನು ಸೇರಿಸಿದರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಲಿಂಗಾಯಿತರ ಶೇ. 17 ರಷ್ಟಿದ್ದಾರೆ. ನಾನಾ ಕಾರಣಗಳಿಂದ ಬಿಟ್ಟು ಹೋಗಿರುವ ಪ್ರತಿಯೊಂದು ಉಪಪಂಗಡಗಳನ್ನು ಒಟ್ಟಿಗೆ ಸೇರಿಸಿದರೆ ಈ ಪ್ರಮಾಣ ಶೇ. 30ಕ್ಕೆರಲಿದೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಕೆಲಸವಾಗಬೇಕು ಎಂದು ಅವರು ಹೇಳಿದರು.

ಹರಿದು ಹಂಚಿ ಹೋಗಿರುವ ಲಿಂಗಾಯತ ಸಮುದಾಯವನ್ನು ಒಂದೆಡೆ ಸೇರಿಸಿ ಧರ್ಮ ಜಾಗೃತಿ, ಶಿಕ್ಷಣ ಪ್ರಸಾರ, ಬಸವಾದಿ ಶರಣರ ಸಂಸ್ಕೃತಿ ಮುಂದುವರೆಸುವ ಹಿನ್ನೆಲೆಯಲ್ಲಿ 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಸ್ಥಾಪನೆಯಾಯಿತು. ಸಿರಸಂಗಿ ಲಿಂಗರಾಜರ ತ್ಯಾಗ, ಅರಟಾಳ ರುದ್ರಗೌಡರ ಸಾಮಾಜಿಕ ಕಳಕಳಿಯಿಂದಾಗಿ ವೀರಶೈವ ಮಹಾಸಭೆ ಹಾಗೂ ಸಿರಸಂಗಿ ಟ್ರಸ್ಟ್ ಪ್ರಾರಂಭವಾಗಿವೆ. ಅಷ್ಟೇ ಅಲ್ಲ, ಅವರ ಪ್ರಯತ್ನದಿಂದಾಗಿ 100 ವರ್ಷಗಳ ಹಿಂದೆಯೇ ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಜಿಲ್ಲೆಗೊಂದರಂತೆ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿವೆ. ಈಗ ಮತ್ತೋಮ್ಮೆ ಸಮಾಜಕ್ಕೆ ನ್ಯಾಯ ಒದಗಿಸಲು ಎಲ್ಲರನ್ನೂ ಒಗ್ಗೂಡಿಸಿ ಮೀಸಲಾತಿ ಕೊಡಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ವೀರಶೈವ ಲಿಂಗಾಯತ ಮಠಗಳು ನಮ್ಮೆಲ್ಲರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿವೆ. ಮನಗೂಳಿ ಸ್ವಗ್ರಾಮದ ಶಿಷ್ಯ ತಪಶೆಟ್ಟಿಯವರ ಮನೆತನದ ಶ್ರೀ ರೇವಣಸಿದ್ಧ ಅವರು ಡಾ. ಮಹಾಂತ ಶಿವಾಚಾರ್ಯರಾಗಿ ಅವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತುಕೊಂಡು, ಅವರ ಅವಧಿಯಲ್ಲಿ ಮಠ ಹೆಚ್ಚು ಪ್ರಸಿದ್ಧಿಗೆ ಬಂದಿದೆ. ಅಪಾರ ಪಾಂಡಿತ್ಯ ಹೊಂದಿದ್ದ ಡಾ. ಮಹಾಂತ ಶಿವಾಚಾರ್ಯರು ಹಿರೇಮಠದ ಜಮೀನುಗಳನ್ನು ಅಭಿವೃದ್ಧಿಪಡಿಸಿದರು. ಅವರಲ್ಲಿದ್ದ ಅಪಾರ ಪಾಂಡಿತ್ಯ ಮತ್ತು ವಾಕ್ಚಾತುರ್ಯವನ್ನು ಗುರುತಿಸಿ, ಹರಿಹರದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರುಗಳಾಗಿ ನೇಮಕವಾಗಿ ಸಮಾಜ ಸೇವೆ ಮಾಡುವಾಗಲೇ ನಮ್ಮನ್ನು ಅಗಲಿದರು. ಈ ಮಠಕ್ಕೆ 16ನೇ ಪೀಠಾಧಿಪತಿಯಾಗಿ ನೇಮಕವಾಗಿರುವ ಹಾಲಿ ಪೀಠಾಧೀಶರಾದ ಶ್ರೀ ಅಭಿವನ ಸಂಗನಬಸವ ಶಿವಾಚಾರ್ಯರು ಯುವ ಸನ್ಯಾಸಿಗಳಾಗಿದ್ದು, ಈಗ ರಾಷ್ಟ್ರೀಯ ಹೆದ್ದಾರಿ ಸಮೀಪ ಭವ್ಯವಾದ ಕಲ್ಯಾಣ ಮಂಟಪ ಕಟ್ಟಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಾಗುವ ದಾರಿ ಇನ್ನೂ ದೀರ್ಘವಾಗಿದೆ. ಅವರು ಈ ಭಾಗದ ಎಲ್ಲರ ಪ್ರೀತಿಗೂ ಪಾತ್ರರಾಗಲಿ. ಶ್ರೀಗಳ ಜೊತೆಗೆ ನಾವಿದ್ದೇವೆ ಎಂದು ಸಚಿವ ಎಂ. ಬಿ. ಪಾಟೀಲ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಚಿವರು ರಂಭಾಪುರ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಮತ್ತು ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳನ್ನು ಗೌರವಿಸಿದರು. ಉಭಯ ಶ್ರೀಗಳು ಸಚಿವ ಎಂ. ಬಿ. ಪಾಟೀಲ ಅವರನ್ನು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಜಾಲಹಳ್ಳಿ ಬೃಹನ್ಮಠದ ಶ್ರೀ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಮಹಾಸ್ವಾಮಿಗಳು, ನಾಗಠಾಣ ಉದಯೇಶ್ವರ ಹಿರೇಮಠದ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಆಲಮೇಲ ಹಿರೇಮಠದ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಮನೋಹರ ಐನಾಪುರ, ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಮಾಜಿ ಸದಸ್ಯ ಚಂದ್ರಶೇಖರಗೌಡ ಪಾಟೀಲ, ಮುಖಂಡರಾದ ಸಂಗಮೇಶ ಬಬಲೇಶ್ವರ, ಡಾ. ಮಹಾಂತೇಶ ಬಿರಾದಾರ, ಡಾ. ಗಂಗಾಧರ ಸಂಬಣ್ಣಿ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories