ಕೇಂದ್ರ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ತೃಪ್ತಿ ಇದೆ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕಳೆದ 10 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಂಸದನಾಗಿ ಕೇಂದ್ರ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ ತೃಪ್ತಿ ಇದೆ. ಇನ್ನು ಮುಂದೆ ಪಕ್ಷ ಅವಕಾಶ ಕೊಟ್ಟರೆ ಹೆಚ್ಚಿನ ಕೆಲಸ ಮಾಡಲು ಶ್ರಮ ವಹಿಸುತ್ತೇನೆಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು ರೈಲ್ವೇ, ವಿಮಾನ ನಿಲ್ದಾಣ, ಏಳು ಹೊಸ ರಾಷ್ಟ್ರೀಯ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿಜಯಪುರ ಜಿಲ್ಲೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕೆಂಬ ಹಂಬಲ ಇದೆ ಪಕ್ಷ ಮತ್ತೊಮ್ಮೆ ಅವಕಾಶ ಕೊಟ್ಟರೆ ದುಡಿಯುತ್ತೇನೆ ಇಲ್ಲವಾದಲ್ಲಿ ಯಾವಾಗಲೂ ಪಕ್ಷ ಕಾರ್ಯಕರ್ತರ ಜೊತೆ ಇರುತ್ತೇನೆಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವದನ್ನು ತಪ್ಪಿಸಲು ಆಗಲ್ಲ. ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ ಕೇವಲ ಜೋರಾಗಿ ಮಾತನಾಡುತ್ತಾರಷ್ಟೇ ಅವರು ಏನೇ ಮಾಡಿದರೂ ರಾಜ್ಯದಲ್ಲಿ 3ಕ್ಕೂ ಹೆಚ್ಚು ಸ್ಥಾನ ಗಳಿಸುವದಿಲ್ಲ. 75 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿಲ್ಲ. ಈಗ ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಮನೆ ಹೆಣ್ಣು ಮಕ್ಕಳಿಗೆ ಜಗಳ ಹತ್ತಿಸುವ ಕೆಲಸ ಮಾಡುತ್ತಿದ್ದಾರೆಂದು ಟೀಕಿಸಿದರು.

ವಿಜಯಪುರ ಜಿಲ್ಲಾ ಲೋಕಸಭಾ ಉಸ್ತುವಾರಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ ಸಮಾಜದ ಕೊನೆಯ ವ್ಯಕ್ತಿಗೂ ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಸುದ್ದಿ ಮುಟ್ಟಿಸಿ ಮನ ಪರಿವರ್ತನೆ ಕೆಲಸ ಪ್ರಾಮಾಣಿಕವಾಗಿ ಮಾಡಬೇಕೆಂದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಬಳಸಿಕೊಳ್ಳಬೇಕೆಂದು ಕಾಯಕರ್ತರಿಗೆ ಕರೆ ನೀಡಿದರು.
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಮಾಜದ ಕೊನೆಯ ವ್ಯಕ್ತಿಗೂ ಕೇಂದ್ರ ಸರ್ಕಾರದದಿಂದ ಏನು ಬೇಕು ಎಂಬ ಭಾವನೆಯನ್ನು ಅರಿತು ಅದನ್ನು ಪರಿಹಾರ ಮಾಡಲು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ (ಕೂಚಬಾಳ) ಮಾತನಾಡಿ ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ಜನರ ಮುಂದೆ ತೆಗೆದುಕೊಂಡು ಹೋಗಬೇಕು. ಅಲ್ಲದೇ ಬೂತ ಮಟ್ಟದಿಂದ ಪೇಜ್ ಪ್ರಮುಖರ ವರೆಗೆ ಸಂಘಟನೆ ಇನ್ನು ಪ್ರಬಲವಾಗಿ ಬೆಳೆಯಬೇಕು. ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಬಿಜೆಪಿ ಪಕ್ಷ ಅನೇಕ ಹಿರಿಯರ ತ್ಯಾಗ,ಶ್ರಮ, ಬಲಿದಾನದಿಂದ ಹಮ್ಮರವಾಗಿ ಬೆಳೆದಿದೆ. ಅನೇಕರನ್ನು ಪಕ್ಷ ಸೇರ್ಪಡೆ, ಮೋದಿ ಭಾವಚಿತ್ರವಿರುವ ಗೋಡೆ ಬರಹ ಅಭಿಯಾನ ಪ್ರತಿ ಮನೆಗಳಲ್ಲೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸ ಚರ್ಚೆ ನಡೆಯುವಂತೆ ಕಾರ್ಯಕರ್ತರು ಶ್ರಮ ವಹಿಸುವಂತೆ ತಿಳಿಸಿದರು. ನಿರಂತರವಾಗಿ ಮಂಡಲ ಮಟ್ಟಗಳಲ್ಲಿ ಸಭೆಗಳು ನಡೆಯಬೇಕು. ಪಕ್ಷದ ಕೆಳ ಹಂತದ ಕಾರ್ಯಕರ್ತರು ಬೂತ ಮಟ್ಟದಲ್ಲಿ ತೆಗೆದುಕೊಂಡು ಹೋದಾಗ ಚುನಾವಣೆ ಗೆಲ್ಲಲು ಸಾಧ್ಯ ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗ ಮಾತ್ರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಕ್ಕೆ ವೇಗ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಬ್ರಾಡಗೇಜ್ ರೈಲ್ವೇ ಹಳಿ ಬಲೀಕರಣ ದ್ವಿಪಥ ರೈಲ್ವೇ ಹಳಿ, ಕೆರೆ ತುಂಬುವ ಯೋಜನೆ, ಎನ್,ಟಿ,ಪಿ,ಸಿ ವಿಮಾನ ನಿಲ್ದಾಣ, ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದು ಸೇರಿದಂತೆ ನೂರಾರು ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅವಧಿಯಲ್ಲಿ ಮಾತ್ರ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿದರು. ಮಾಜಿ ಶಾಸಕ ರಮೇಶ ಭೂಸನೂರ, ವೇದಿಕೆಯ ಮೇಲೆ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ, ಪ್ರಕಾಶ ಅಕ್ಕಲಕೋಟ, ಸಂಜೀವ ಐಹೊಳೆ,ಬಸವರಾಜ ಯಂಕಂಚಿ, ಮಲ್ಲಮ್ಮ ಜೋಗೂರ, ಸಂಜೀವ ಐಹೊಳೆ, ಸೇರಿದಂತೆ ಹಲವರು ಇದ್ದರು. ಪ್ರಧಾನ ಕಾರ್ಯದರ್ಶಿಗಳಾದ ಸಾಬು ಮಾಶ್ಯಾಳ ಸ್ವಾಗತಿಸಿದರು. ಈರಣ್ಣ ರಾವೂರ ನಿರೂಪಿಸಿದರು. ಮುಳುಗೌಡ ಪಾಟೀಲ ವಂದಿಸಿದರು.

ಸಭೆಯಲ್ಲಿ ವಿವಿಧ ಮಂಡಲ ಹಾಗೂ ಪ್ರಕೋಷ್ಠಗಳ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

Latest Indian news

Popular Stories