ಯಾಂತ್ರಿಕ ವಸ್ತುಗಳಿಂದ ದೂರವಿರಿ – ಪುಸ್ತಕದಿಂದ ಹತ್ತಿರವಿರಿ

ವಿಜಯಪುರ : ಮಕ್ಕಳನ್ನು ಮೊಬೈಲ್, ಹೆಡ್‌ಫೋನ್‌ಗಳಂತಹ ಯಾಂತ್ರಿಕ ವಸ್ತುಗಳಿಂದ ದೂರವಿದ್ದು, ಪುಸ್ತಕಗಳೊಂದಿಗೆ ಹತ್ತಿರವಾಗಿರಬೇಕು ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಹೇಳಿದರು.

ಬಬಲೇಶ್ವರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸೇವಕ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ `ಯುವ ಜನತೆ ಸಬಲೀಕರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ’ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ಮಕ್ಕಳು ಆಟ, ಪಾಠ, ಹಾಡು ಕುಣಿತದೊಂದಿಗೆ ಸ್ವಚ್ಚಂದವಾಗಿ ಬೆಳೆಯಬೇಕು. ಅವರನ್ನು ಟಿವಿ, ಮೊಬೈಲ್, ಹೆಡ್‌ಫೋನ್ ಗಳಂಥ ಯಾಂತ್ರಿಕ ವಸ್ತುಗಳಿಂದ ದೂರವಿರಿಸಿ, ಬರಿ ಶಾಲೆ, ಟ್ಯೂಷನ್, ಹೋಮವರ್ಕ್ ಎಂದು ಕೊಣೆಯಲ್ಲಿ ಕಟ್ಟಿ ಹಾಕದೆ. ಒಳ್ಳೆಯ ಸಂಸ್ಕೃತಿ ಸಂಸ್ಕಾರ ನೀಡುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದ್ದು.

ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.ಮಕ್ಕಳು ಇಂದು ಪಾಲಕರ ಅತಿಯಾದ ನಿರೀಕ್ಷೆ ಮತ್ತು ಒತ್ತಡಗಳಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಬರಿ ಹೆಚ್ಚು ಅಂಕಗಳಿಸಿ ಉನ್ನತ ಹುದ್ದೆಯ ನೌಕರಿ ಆಸೆಯ ಹಿಂದೆ ಬಿದ್ದು ಪ್ರಾಥಮಿಕ ಹಂತದಲ್ಲಿಯೇ ಒತ್ತಡಗಳಿಂದ ತತ್ತರಿಸುವಂತಾಗಿದೆ, ಈ ತತ್ತರಗಳಿಂದ ಮಕ್ಕಳನ್ನು ಮುಕ್ತವಾಗಿಸಬೇಕಿದೆ, ಬಾಲ್ಯದಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಆಟ, ನೃತ್ಯ, ಮನರಂಜನೆಯೂ ಸಹ ಮಕ್ಕಳ ಬೋಧನೆಯ ಭಾಗವಾಗುವಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಆದರೆ ಕೇವಲ ಒತ್ತಡ ಭರಿತ ಜೀವನಶೈಲಿಯ ಪರಿಣಾಮವಾಗಿ ಮಕ್ಕಳು ಧೈರ್ಯ, ಆತ್ಮವಿಶ್ವಾಸ ಹಾಗೂ ಜೀವನದ ಎಡರು ತೊಡರುಗಳನ್ನು ಎದುರಿಸುವ ಸಾಮರ್ಥ್ಯವಿಲ್ಲದೇ ಬಳಲಿ ಹೋಗುತ್ತಿದ್ದಾರೆ. ಕುಟುಂಬದಲ್ಲಿಯೇ ಆಗಲಿ, ಶಾಲೆಯಲ್ಲಿಯೇ ಆಗಲಿ ಅತಿಯಾದ ಒತ್ತಡ ಹೇರದೆ ಇಷ್ಟಪಟ್ಟು ಓದುವ ಹಾಗೂ ಜೀವನ ಕೌಶಲ್ಯ ಹೊಂದುವ ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ದೊರಕಬೇಕಿದೆ ಎಂದರು.

ಸೇವಕ ಸಂಸ್ಥೆಯ ಸಂಯೋಜಕಿ ವಿಮಲಾಕ್ಷಿ ಹಿರೇಮಠ ಮಾತನಾಡಿ, ಸೇವಿಕಾ ಸಂಸ್ಥೆ ರಾಜ್ಯ ಮಟ್ಟದ ನೊಂದಾಯಿತ ಸಂಸ್ಥೆಯಾಗಿದ್ದು, ಪ್ರಸ್ತುತ ಬಬಲೇಶ್ವರ ತಾಲೂಕಿನ ಹದಿನೈದು ಗ್ರಾಮ ಪಂಚಾಯತಗಳಲ್ಲಿ ಸುಮಾರು ಐವತ್ತೆರಡು ಹಳ್ಳಿಗಳಲ್ಲಿ ಮಹಿಳಾ ಶಿಕ್ಷಣಕ್ಕೆ ಪೂರಕವಾದ ಕಾರ್ಯಚಟುವಟಿಕೆಯ ಜೊತೆಗೆ ಪರಿಸರ ರಕ್ಷಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕರುಣಾ ಮಣೂರ ಹಾಗೂ ಸವಿತಾ ಇಟ್ಕರ್ ಸ್ವಾಗತ ಗೀತೆ ಹಾಡಿದರು. ಇಂದಿರಾ ಪಾರಟಿ ಭಕ್ತಿ ಗೀತೆ ಹಾಡಿದರು. ಆಪ್ತ ಸಮಾಲೋಚಕಿ ಅಶ್ವಿನಿ ಕೋಟಿ ಕಾರ್ಯಕ್ರಮ ನಿರೂಪಿಸಿದರು. ಪ್ರೇಮಾ ದೊಡ್ಡಮನಿ ವಂದಿಸಿದರು.

Latest Indian news

Popular Stories