`ಅಕ್ಷರ ದಾಸೋಹ’ಕ್ಕೆ ವಿಜಯಪುರ ಪ್ರಥಮ ಸಂಸದರೇ ಪ್ರೇರಣೆ….

ಸಮಿ, ವಿಜಯಪುರ
ವಿಜಯಪುರ : ಮಧ್ಯಾಹ್ನದ ಬಿಸಿಯೂಟ ಯೋಜನೆ ಇಂದು ರಾಷ್ಟçದಲ್ಲಿಯೇ ಹೆಸರುವಾಸಿ. ಆದರೆ ಇದಕ್ಕೆ ಪ್ರೇರಣೆಯಾಗಿದ್ದು ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರಥಮ ಸಂಸದ ದಿ.ರಾಮಪ್ಪ ಬಿದರಿ. ವಿಜಯಪುರ ಲೋಕಸಭಾ ಕ್ಷೇತ್ರದ ಇತಿಹಾಸದೊಂದಿಗೆ ಈ ಯೋಜನೆ ತಳುಕು ಹಾಕಿಕೊಂಡಿದೆ.

ಅನೇಕ ಐತಿಹಾಸಿಕ ಸ್ಮಾರಕಗಳನ್ನು ಒಡಲಾಳದಲ್ಲಿರಿಸಿಕೊಂಡ ವಿಜಯಪುರದ ರಾಜಕೀಯ ಇತಿಹಾಸ ರೋಚಕ. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಅನೇಕ ರೋಚಕ ಸಂಗತಿಗಳು ವಿಜಯಪುರ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ದಾಖಲಾಗಿವೆ. ವಿಧಾನಸಭೆ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡುವ ಮೂಲಕವೂ ವಿಜಯಪುರ ಗಮನ ಸೆಳೆದಿತ್ತು. ವಿಜಯಪುರ ಲೋಕಸಭಾ ಚುನಾವಣೆಗೆ ಈಗ ಮತ್ತೊಂದು ಚುನಾವಣೆಗೆ ದಿನಗಣನೆ ಆರಂಭವಾಗಿದೆ.
ಘಟನಾಘಟಿ ರಾಜಕಾರಣಿಗಳು ಪ್ರತಿನಿಧಿಸಿದ ಹೆಗ್ಗಳಿಕೆಯುಳ್ಳ ವಿಜಯಪುರ ಲೋಕಸಭಾ ಕ್ಷೇತ್ರ ಹ್ಯಾಟ್ರಿಕ್ ಗೆಲುವಿಗೆ ಅವಕಾಶ ಕೊಟ್ಟಿದ್ದು ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮಾತ್ರ. ಅವರನ್ನು ಹೊರತುಪಡಿಸಿ ಇಲ್ಲಿಯವರೆಗೆ ಹ್ಯಾಟ್ರಿಕ್ ಗೆಲುವಿನ ಉಡುಗೊರೆಯನ್ನು ಮತದಾರ ನೀಡಿಲ್ಲ. ಆದರೆ ಅನೇಕರಿಗೆ ಎರಡು ಬಾರಿ ಆಶೀರ್ವಾದ ಮಾಡಿದ್ದು ಇದೆ. ವಿಜಯಪುರ ಲೋಕಸಭಾ ಕ್ಷೇತ್ರ ಈ ಮುಂಚೆ ಎರಡು ಕ್ಷೇತ್ರಗಳಾಗಿ ವಿಂಗಡನೆಯಾಗಿತ್ತು, ವಿಜಯಪುರ ಉತ್ತರ ಹಾಗೂ ವಿಜಯಪುರ ದಕ್ಷಿಣ ಎಂಬ ಲೋಕಸಭಾ ಕ್ಷೇತ್ರವಾಗಿತ್ತು. 1957 ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ವಿಜಯಪುರ ದಕ್ಷಿಣ ಕ್ಷೇತ್ರದಿಂದ ರಾಮಪ್ಪ ಬಾಳಪ್ಪ ಬಿದರಿ ಅವರು ಹಾಗೂ ಉತ್ತರ ಕ್ಷೇತ್ರದಿಂದ ಸುಗಂಧಿ ಮುರಿಗೆಪ್ಪಣ್ಣ ಆಯ್ಕೆಯಾಗಿದ್ದರು.
ಅಜಾತಶತ್ರು, ಅಕ್ಷರ ದಾಸೋಹ ರೂವಾರಿ ಹಾಗೂ ಔಂಧ ಪ್ರಾಂತ್ಯದ ಪ್ರಧಾನಿಯೂ ಆಗಿದ್ದ ದಿ.ರಾಮಪ್ಪ ಬಿದರಿ ವಿಜಯಪುರ ಲೋಕಸಭಾ ಕ್ಷೇತ್ರದ ಪ್ರಥಮ ಸಂಸದರು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಘಟಾನುಘಟಿಗಳು ವಿಜಯಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಹಾಲಿ ಸಚಿವರಾಗಿರುವ ಡಾ.ಎಂ.ಬಿ. ಪಾಟೀಲ, ಪ್ರಸ್ತುತ ನಗರ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ, ಹಾಲಿ ಸಂಸದ ರಮೇಶ ಜಿಗಜಿಣಗಿ ಈ ಮೂವರು ಸಹ ರಾಜ್ಯ ರಾಜಕಾರಣದಲ್ಲಿ ದೊಡ್ಡ ಪ್ರಭಾವ ಬೀರುವ ರಾಜಕಾರಣಿಗಳು. ಈ ಮೂವರು ಸಹ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು ವಿಶೇಷ. ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ದಿ.ಕೆ.ಬಿ. ಚೌಧರಿ ಸಹ ರಾಜ್ಯ ರಾಜಕಾರಣದಲ್ಲಿ ದೊಡ್ಡ ಹೆಸರು ಮಾಡಿದವರು.

ಅಕ್ಷರದಾಸೋಹಕ್ಕೆ ಪ್ರೇರಣೆ ಪ್ರಥಮ ಸಂಸದ ಬಿದರಿ:
ವಿಜಯಪುರ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ದಿ.ರಾಮಪ್ಪ ಬಿದರಿ ವಿಜಯಪುರದ ಪ್ರಥಮ ಸಂಸದರು. ಔಂಧ್ ಪ್ರಾಂತ್ಯದ ಪ್ರಧಾನಿಯಾಗಿದ್ದ ಅವರು ಅನೇಕ ಜನಪರ ಯೋಜನೆಗಳನ್ನು ರೂಪಿಸಿದ್ದರು. ಬರಗಾಲದ ಸಂದರ್ಭದಲ್ಲಿ ಮಧ್ಯಾಹ್ನ ಊಟದ ಯೋಜನೆಯನ್ನು ಅಂದೇ ಜಾರಿಗೊಳಿಸಿದ್ದರು. ಈ ರೀತಿಯ ಮಹೋನ್ನತ ಯೋಜನೆಯನ್ನು ಜಾರಿಗೊಳಿಸಿದ ವ್ಯಕ್ತಿ ವಿಜಯಪುರ ಲೋಕಸಭಾ ಕ್ಷೇತ್ರದ ಪ್ರಥಮ ಚುಕ್ಕಾಣಿ ಹಿಡಿದಿದ್ದು ವಿಶೇಷ.

ಎರಡು ಬಾರಿ ಕೇಂದ್ರ ಸಚಿವ ಯೋಗ:
ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಆದರೆ ವಿಜಯಪುರ ಜಿಲ್ಲೆ ಪ್ರತಿನಿಧಿಸಿದ ಇಬ್ಬರು ಕೇಂದ್ರ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸನಗೌಡ ಪಾಟೀಲ ಯತ್ನಾಳರು ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಜವಳಿ, ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರೆ, ಹಾಲಿ ಸಂಸದ ರಮೇಶ ಜಿಗಜಿಣಗಿ ಈ ಹಿಂದಿನ ಲೋಕಸಭಾ ಅವಧಿಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟಾರೆಯಾಗಿ ಎರಡು ಬಾರಿ ಕೇಂದ್ರ ಸಚಿವ ಸ್ಥಾನದ ಯೋಗ ದೊರಕಿದೆ.

ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆ : ಈಗ ಕಮಲದ ಗಟ್ಟಿ ಕ್ಷೇತ್ರ
ಆರಂಭದಿಂದಲೂ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿಯೇ ಇದ್ದ ಈ ಕ್ಷೇತ್ರದಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದರು. ಈ ಕಾಂಗ್ರೆಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು 1999ರ ಚುನಾವಣೆ. 1999 ಚುನಾವಣೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ ಆಯ್ಕೆಯಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದರು. ಅಲ್ಲಿಂದ ಇಲ್ಲಿಯವರೆಗೂ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿಯೇ ಇದೆ. ಜಯಪ್ರಕಾಶ ನಾರಾಯಣ ಅವರ ಪಕ್ಷಕ್ಕೂ ಈ ಕ್ಷೇತ್ರ ನೆಲೆ ಒದಗಿಸಿತ್ತು, 1984 ರಲ್ಲಿ ಗುರಡ್ಡಿ ಶಿವಶಂಕರಪ್ಪ ಮಲ್ಲಪ್ಪ ಆಯ್ಕೆಯಾಗಿದ್ದರು. 1957 ರಲ್ಲಿ ಪಕ್ಷೇತರ ಅಭ್ಯರ್ಥಿಗೂ ಈ ಕ್ಷೇತ್ರ ಮಣೆ ಹಾಕಿದ್ದು, ಸುಗಂಧಿ ಮುರೆಗೆಪ್ಪಣ್ಣ ಅವರು ಆಯ್ಕೆಯಾಗಿದ್ದರು. ಎಸ್.ಡಬ್ಲ್ಯೂ.ಎ ಪಕ್ಷದಿಂದ 1967 ರಲ್ಲಿ ಜೆ.ಡಿ. ಪಾಟೀಲ, 1996 ರಲ್ಲಿ ಜೆಡಿಎಸ್ ಪಕ್ಷದಿಂದ ಪಾಟೀಲ ಬಸನಗೌಡ ರುದ್ರಗೌಡ ಆಯ್ಕೆಯಾದರು. ಅಂದರೆ ಅನೇಕ ಪಕ್ಷಗಳಿಗೂ ವಿಜಯಪುರ ಕ್ಷೇತ್ರ ಆಶೀರ್ವಾದ ಮಾಡಿದ್ದುಂಟು.

ಕೈ ಭದ್ರಕೋಟೆ ಬೇಧಿಸಿದ ಯತ್ನಾಳ
ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ ಪ್ರಬಲ ಕೋಟೆಯಾಗಿದ್ದ ವಿಜಯಪುರ ಲೋಕಸಭಾ ಕ್ಷೇತ್ರ ಈಗ ಬಿಜೆಪಿ ಭದ್ರಕೋಟೆ. ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿರುವ ಹಾಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವಿಜಯಪುರವನ್ನು ಬಿಜೆಪಿ ಭದ್ರಕೋಟೆಯಾಗಿಸಿದರು. ನಂತರ ಸಂಸದ ರಮೇಶ ಜಿಗಜಿಣಗಿ ಸತತ ಮೂರು ಬಾರಿ ಗೆದ್ದು ಈ ಭದ್ರಕೋಟೆಗೆ ಬಿಜೆಪಿ ಬಾವುಟವನ್ನು ಮತ್ತಷ್ಟು ಗಟ್ಟಿಯಾಗಿ ಝಳಪಿಸುವಂತೆ ಮಾಡಿದ್ದಾರೆ.

ಜಿಗಜಿಣಗಿ ಅವರಿಂದ ಮಾತ್ರ ಹ್ಯಾಟ್ರಿಕ್
1957 ರಿಂದ ರಚನೆಯಾದ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಮೇಶ ಜಿಗಜಿಣಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ, ಅವರನ್ನು ಹೊರುತಪಡಿಸಿ ಯಾರೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸಿಲ್ಲ. ಬಸನಗೌಡ ಪಾಟೀಲ ಯತ್ನಾಳ, ಬಿ.ಕೆ. ಗುಡದಿನ್ನಿ, ಕೆ.ಬಿ. ಚೌಧರಿ ಅವರಿಗೆ ವಿಜಯಪುರ ಲೋಕಸಭೆ ಮತದಾರರು ಎರಡು ಬಾರಿ ಅವಕಾಶ ಕರುಣಿಸಿದ್ದರು. ಪ್ರಥಮ ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು ಮಾತ್ರ ರಮೇಶ ಜಿಗಜಿಣಗಿ. 2009, 2014, 2019 ರಲ್ಲಿ ಸತತ ಮೂರು ಬಾರಿ ಜಿಗಜಿಣಗಿ ಈ ಕ್ಷೇತ್ರದ ಮೇಲೆ ಪಾರುಪತ್ಯ ಸಾಧಿಸಿದ್ದಾರೆ.

ಮತದಾರರ ವಿವರ:
ಒಟ್ಟು ಮತದಾರರು – 18,38,438
ಪುರುಷ ಮತದಾರರು – 9,39,813
ಮಹಿಳೆ ಮತದಾರರು – 8,98,413
ಇತರೆ ಮತದಾರರು – 212

ವಿಜಯಪುರ ಪ್ರತಿನಿಧಿಸಿದ ಸಂಸದರ ಪಟ್ಟಿ:
1957 – ಬಿದರಿ ರಾಮಪ್ಪ ಬಾಳಪ್ಪ – ಕಾಂಗ್ರೆಸ್ (ವಿಜಯಪುರ ದಕ್ಷಿಣ)
1957 – ಸುಗಂಧಿ ಮರೆಗಪ್ಪಣ್ಣ – ಪಕ್ಷೇತರ (ವಿಜಯಪುರ ಉತ್ತರ)
1962 – ರಾಜಾರಾಮ ಗಿರಿಧರಲಾಲ ಧುಬೆ – ಕಾಂಗ್ರೆಸ್ – (ವಿಜಯಪುರ ಉತ್ತರ)
1962 – ಸಂಗನಗೌಡ ಬಸನಗೌಡ ಪಾಟೀಲ – ಕಾಂಗ್ರೆಸ್- (ವಿಜಯಪುರ ದಕ್ಷಿಣ)
1967 – ಜಿ.ಡಿ. ಪಾಟೀಲ – ಎಸ್.ಡಬ್ಲ್ಯೂ.ಎ ಪಕ್ಷ
1971 – ಭೀಮಪ್ಪ ಯಲ್ಲಪ್ಪ ಚೌಧರಿ – ಕಾಂಗ್ರೆಸ್
1977 – ಚೌಧರಿ ಕಾಳಿಂಗಪ್ಪ ಭೀಮಣ್ಣ – ಕಾಂಗ್ರೆಸ್
1980 – ಚೌಧರಿ ಕಾಳಿಂಗಪ್ಪ ಭೀಮಣ್ಣ – ಕಾಂಗ್ರೆಸ್ (ಐ)
1984 – ಗುರಡ್ಡಿ ಶಿವಶಂಕರಪ್ಪ ಮಲ್ಲಪ್ಪ – ಜೆಎನ್ಪಿ
1989 – ಬಿ.ಕೆ. ಗುಡದಿನ್ನಿ – ಕಾಂಗ್ರೆಸ್
1991 – ಬಿ.ಕೆ. ಗುಡದಿನ್ನಿ – ಕಾಂಗ್ರೆಸ್
1996 – ಪಾಟೀಲ ಬಸನಗೌಡ ರುದ್ರಗೌಡ – ಜನತಾದಳ
1998 – ಡಾ.ಎಂ.ಬಿ. ಪಾಟೀಲ – ಕಾಂಗ್ರೆಸ್
1999 – ಬಸನಗೌಡ ಪಾಟೀಲ ಯತ್ನಾಳ – ಬಿಜೆಪಿ
2004 – ಬಸನಗೌಡ ಪಾಟೀಲ ಯತ್ನಾಳ – ಬಿಜೆಪಿ
2009 – ರಮೇಶ ಜಿಗಜಿಣಗಿ – ಬಿಜೆಪಿ
2014 – ರಮೇಶ ಜಿಗಜಿಣಗಿ – ಬಿಜೆಪಿ
2019 – ರಮೇಶ ಜಿಗಜಿಣಗಿ – ಬಿಜೆಪಿ

Latest Indian news

Popular Stories