ವಿಜಯಪುರ: ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲಾಗಿರುವ ಘಟನೆ ನಡೆದಿದೆ.
ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಇನ್ನು ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ್ದು ಇದರಿಂದ ತೆಪ್ಪ ನದಿಯಲ್ಲಿ ಮುಳುಗಿದ್ದು ಆರು ಮಂದಿ ಸಾವನ್ನಪ್ಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಬ್ಬರು ಈಜಿ ದಡ ಸೇರಿ ಜೀವ ಉಳಿಸಿಕೊಂಡಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಸದ್ಯ ಇಬ್ಬರ ಶವ ಹೊರ ತೆಗೆಯಲಾಗಿದ್ದು ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಓರ್ವ ಮೃತನ ಗುರುತು ಪತ್ತೆಯಾಗಿದ್ದು 34 ವರ್ಷದ ಪುಂಡಲಿಕ ಎಂಕಂಚಿ ಎಂದು ತಿಳಿದುಬಂದಿದೆ.