Vijayapura | ಜಿಲ್ಲಾಧಿಕಾರಿಗಳಿಂದ ನಗರದ ವಿವಿಧೆಡೆ ದಿಢೀರ ಭೇಟಿ: ಪರಿಶೀಲನೆ

ವಿಜಯಪುರ: ವಿಜಯಪುರ ನಗರದಲ್ಲಿ ಕೊಳಚೆ ಮಂಡಳಿಯಿಂದ ಯೋಗಾಪುರದಲ್ಲಿ ನಿರ್ಮಿಸಲಾದ ಮನೆಗಳು, ಬಸವನ ನಗರದಲ್ಲಿ ಪಾಲಿಕೆಯಿಂದ ನಿರ್ಮಿಸಲಾದ ಮನೆಗಳು, ತಾಜಬಾವಡಿ, ಭೂತನಾಳ ಕೆರೆಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ದಿಢೀರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ನಗರದ ಯೋಗಾಪುರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸಲಾದ ಮನೆಗಳಲ್ಲಿ ಹಲವು ಮನೆಗಳು ಖಾಲಿ ಇದ್ದು, ಕಿಟಕಿ ಬಾಗಿಲುಗಳು ದುರಸ್ತಿಗೊಳಿಸಬೇಕು. ಮನೆಗಳನ್ನು ಹಂಚಿಕೆ ಮಾಡಿರುವ ಫಲಾನುಭವಿಗಳ ಪಟ್ಟಿ ಹಾಗೂ ಖಾಲಿ ಇರುವ ಮನೆಗಳ ಪಟ್ಟಿ ಮಾಡಿ, ಎರಡು ದಿನಗಳಲ್ಲಿ ಪಾಲಿಕೆಗೆ ಒದಗಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಸವನ ನಗರದಲ್ಲಿ ಪಾಲಿಕೆಯಿಂದ ನಿರ್ಮಿಸಿದ ಆಶ್ರಯ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಆಶ್ರಯ ಮನೆಗಳಿಗೆ ಹಕ್ಕು ಪತ್ರ ಪಡೆದುಕೊಂಡ ಮಾಲೀಕರಗೆ ಆ ಮನೆಗಳಲ್ಲಿ ವಾಸಿಸುತ್ತಿರುವ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಪಾಲಿಕೆ ಅಭಿಯಂತರರಿಗೆ ಸೂಚನೆ ನೀಡಿದರು.

ಅರಕೇರಿ ಗ್ರಾಮದ ಹತ್ತಿರ ಕೆಬಿಜೆಎನ್ಎಲ್ ಶಾಖಾ ಕಾಲುವೆ ಕೊಳವೆ ಮಾರ್ಗದ ಮೂಲಕ ಭೂತನಾಳ ಕೆರೆಗೆ ನೀರು ತುಂಬಿಸುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ನಗರದ ತಾಜ್ಬಾವಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವಕ್ಫ್ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ಕೆಬಿಜೆಎನ್ಎಲ್ ಮುಖ್ಯ ಅಭಿಯಂತರ ಎಚ್.ಎನ್.ಶ್ರೀನಿವಾಸ, ಪಾಲಿಕೆ ಅಭಿಯಂತರ ವಿ.ಎಂ. ಹಿರೇಮಠ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಾಯ್.ಎಂ.ಹಳ್ಳಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿ ಸಸಾಲಟ್ಟಿ, ನಗರ ನೀರು ಸರಬರಾಜು ಮಂಡಳಿ ಅಧಿಕಾರಿ ಬಸವರಾಜ ಭಂಗೀನವರ ವಕ್ಫ್ ಅಧಿಕಾರಿ ತಬಸ್ಸುಮ್ ಇತರರು ಉಪಸ್ಥಿತರಿದ್ದರು.

ಸಾಧಕನಿಗೆ ಸದಾವಕಾಶಗಳು ಹುಡುಕಿಕೊಂಡು ಬರುತ್ತವೆ: ಎಂ.ಎಂ.ತಾಂಬೋಳಿ

ವಿಜಯಪುರ: ಸಾಧನೆಗೆ ಛಲವಿರಬೇಕು. ಸಾಧಕನಿಗೆ ಸದಾವಕಾಶಗಳು ಹುಡುಕಿಕೊಂಡು ಬರುತ್ತವೆ. ಶ್ರಮದಿಂದ ಕ್ರಮವಾಗಿ ಅಧ್ಯಯನ ನಡೆಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಇಂತಹವರ ಸಾಲಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ನಿಲ್ಲುತ್ತಾರೆ ಎಂದು ಖ್ಯಾತ ನ್ಯಾಯವಾದಿ ಎ ಎಂ ತಾಂಬೋಳಿ ಹೇಳಿದರು.
ನ್ಯಾಯಾಧೀಶರಾಗಿ ಆಯ್ಕೆಯಾಗಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ನ್ಯಾಯಾಧೀಶ ಜಹೀರ ಅತನೂರ ಇವರ ಗೌರವ ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಆದರೆ ನ್ಯಾಯಾಂಗ ಇಲಾಖೆಯಲ್ಲಿ ಎಲ್ಲ ಪರೀಕ್ಷೆ ಪಾಸಾಗಿ ನ್ಯಾಯಾಧೀಶರಾಗುವುದು ನಾಗರೀಕ ಸೇವಾ ಪರೀಕ್ಷೆಗಿಂತ ಕಠಿಣವಾಗಿರುತ್ತದೆ. ಇಂತಹದರಲ್ಲಿ ಉತ್ತಮ ರೀತಿಯಲ್ಲಿ ಓದಿ ಕುಟುಂಬ ಹಾಗೂ ಜಿಲ್ಲೆಗೆ ಕೀರ್ತಿ ತಂದ ನ್ಯಾಯಾಧೀಶ ಜಹೀರ ಅತನೂರ ಅವರ ಸಾಧನೆ ಶ್ಲಾಘನೀಯವಾಗಿದೆ ಎಂದರು.
ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಇರಫಾನ್ ಶೇಖ ಹಾಗೂ ಶಿಕ್ಷಕ-ಸಾಹಿತಿ ಕಬೂಲ್ ಕೊಕಟನೂರ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರಲ್ಲಿ ಇಂತಹ ಪ್ರತಿಭೆಗಳು ಬಹಳ ಕಡಿಮೆ ಆದರೂ ಛಲ ಬಿಡದೆ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ಜಹೀರ್ ಅತನೂರ, ನ್ಯಾಯಾಧೀಶನಾಗಲು ನಮ್ಮ ತಂದೆಯೇ ಪ್ರೇರಣೆಯಾಗಿದ್ದರು. ಇಷ್ಟ ಪಟ್ಟು ಓದಿದೆ ಮನನ ಮಾಡಿಕೊಂಡೆ ಯಾವುದೇ ವಿಶೇಷ ತರಬೇತಿ ಪಡೆಯದೆ ಪರೀಕ್ಷೆ ಬರೆದು ಯಶಸ್ವಿಯಾದೆ. ಸಾಕಷ್ಟು ಅವಕಾಶಗಳನ್ನು ಬಳಸಿಕೊಂಡು ಯುವಜನತೆ ಮುಂದೆ ಬರಬೇಕು ಉನ್ನತ ಹುದ್ದೆಯ ಕನಸು ನನಸು ಮಾಡಿಕೊಳ್ಳಬೇಕೆಂದರು.
ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಂಜುಮನ್ ಪದವಿ ಕಾಲೇಜಿನ ಪ್ರಾಚಾರ್ಯ ಎ ಎಂ ಚಟ್ಟರಕಿ, ಶಿಕ್ಷಕರಾದ ಸಿ ಜಿ ಹಾರಿವಾಳ, ಐ ಆರ್ ಹೊಸಮನಿ, ಸಲೀಮ್ ಶೇಖ, ಹಿದಾಯತ್ ಮಾಶಾಳಕರ್, ಆಬೀದ್ ಇನಾಮದಾರ, ಜಾವಿದ್ ಗುಡಗುಂಟಿ, ಹಾಜಿ ಪಿಂಜಾರ, ಶಾಹಿದ್ ಶೇಖ, ಬಂದೇನವಾಜ ಕವಲಗಿ, ಸಂಗಮೇಶ ಸಗರ, ಮೊಹಸೀನ್ ಕೊಕಟನೂರ, ಮುನ್ನಾ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.

IMG 20240229 WA0046 Vijayapura

ಒತ್ತಡದ ಬದುಕಿಗೆ ಕ್ರೀಡೆ ಸಹಕಾರಿ: ಡಿಸಿ ಟಿ.ಭೂಬಾಲನ್

ವಿಜಯಪುರ: ದೈನಂದಿನ ಕೆಲಸದ ಒತ್ತಡದ ಮಧ್ಯೆಯೂ ಮನಸ್ಸು ಮತ್ತು ದೇಹಕ್ಕೆ ಚೈತನ್ಯ ಒದಗಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿದ್ದು, ದೈನಂದಿನ ಜೀವನದಲ್ಲಿ ಚಟುವಟಿಕೆಯಿಂದಿರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಇವರ ಸಹಯೋಗದಲ್ಲಿ ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ವಿಜಯಪುರ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಪ್ರತಿದಿನ ಚೈತನ್ಯದಿಂದರಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ದೈನಂದಿನ ಬದುಕಿನ ಜೀವನಶೈಲಿಯಾಗಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲವು ಸಾಮಾನ್ಯವಾಗಿದ್ದು, ಭಾಗವಹಿಸುವಿಕೆ ಅತಿಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಇಲ್ಲಿ ಹಮ್ಮಿಕೊಂಡಿರುವ ಎಲ್ಲ ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಕ್ರೀಡಾ ಸ್ಪೂರ್ತಿ ಮೆರೆಯಬೇಕು. ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಜ್ಯಮಟ್ಟಕ್ಕೂ ಜಿಲ್ಲೆಯ ಸ್ಪರ್ಧಾಳುಗಳು ಭಾಗವಹಿಸಲಿ ಎಂದು ಹಾರೈಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ವ್ಯಕ್ತಿತ್ವವನ್ನು ಸದೃಢಗೊಳಿಸಲು ಪೂರಕವಾಗಿ ಸಹಕಾರಿಯಾಗಿವೆ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಕ್ರೀಡೆ ಅತ್ಯುತ್ತಮ ಸಾಧನವಾಗಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಜೊತೆಗೆ ಸಂವಹನ ಕೌಶಲ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಆಲೋಚನಾ ಮಟ್ಟ ಹೆಚ್ಚಿಸುವಲ್ಲಿ ಹಾಗೂ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳಲು ಸಮರ್ಪಣೆ ಹಾಗೂ ತಾಳ್ಮೆಯ ಮೌಲ್ಯ ಕಲಿಸಿಕೊಡುವಲ್ಲಿ ಆಟೋಟಗಳ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ನಿಯಮಿತವಾಗಿ ಒಂದಾದರೊಂದು ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮತದಾನ ಜಾಗೃತಿಗಾಗಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಹೊಂಗಯ್ಯ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ಜಾವೀದ ಎಂ.ಜಮಾದಾರ, ಎಸ್.ಎಸ್.ಕೆರೂರ, ವಿಜಯಕುಮಾರ ಹತ್ತಿ, ವಿಶ್ವನಾಥ ಬೆಳೆನ್ನವರ, ಗಂಗಾಧರ ಜೇವೂರ, ನಿಜು ಮೇಲಿನಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

IMG 20240229 WA0043 Vijayapura

Latest Indian news

Popular Stories