ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನೋವಿನ ಸಂಗತಿ: ಮೈತ್ರೇಯಿ

ವಿಜಯಪುರ : ಮಹಿಳೆ ಒಂದೆಡೆ ಸಾಧನೆಯ ಹಾದಿ ಕ್ರಮಿಸಿದ್ದಾಳೆ, ಇನ್ನೊಂದೆಡೆ ಆಕೆಯ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುವುದು ನೋವಿನ ಸಂಗತಿ ಎಂದು ನ್ಯಾಯವಾದಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮೈತ್ರೇಯಿ ವಿಷಾದ ವ್ಯಕ್ತಪಡಿಸಿದರು.

ವಿಜಾಪುರ ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ಸಹಯೋಗದಲ್ಲಿ `ಪ್ರಗತಿಯ ವೇಗವರ್ಧನೆಗೆ ಮಹಿಳೆಯರ ಮೇಲೆ ಹೂಡಿಕೆ’ ಎಂಬ ಘೋಷವಾಕ್ಯದೊಂದಿಗೆ ವಿಜಯಪುರದ ಲೋಯೋಲಾ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಮಹಿಳಾ ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಸಮಾನತೆಯನ್ನು ಸಾಧಿಸಿದ್ದಾಳೆ. ಆದರೂ ಸಹ ಅವಳ ಮೇಲೆ ಆಗುವ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಲೆ ಇದೆ.

ಈ ದೌರ್ಜನ್ಯವನ್ನು ಕೊನೆಗಾಣಿಸಬೇಕಾದರೆ ಮಹಿಳಾ ಶಕ್ತಿ ಒಂದಾಗಬೇಕು, ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಮಹಿಳೆಯರು ಬದ್ಧತೆಯಿಂದ ಒಂದಾಗಬೇಕು, ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೇಯರ್ ಮೆಹಜಬೀನ್ ಹೊರ್ತಿ ಮಾತನಾಡಿ, ಮಹಿಳೆ ಇವತ್ತು ಎಲ್ಲ ಕೇತ್ರದಲ್ಲಿಯೂ ಸಾಧನೆಯ ದಾಪುಗಾಲು ಇರಿಸಿದ್ದಾಳೆ, ತಾನು ಸಮರ್ಥಳು ಎಂದು ಸ್ವಸಾಮರ್ಥ್ಯದಿಂದ ನಿರೂಪಿಸಿದ್ದಾಳೆ, ಹೀಗಾಗಿ ಮಹಿಳೆಗೆ ಆತ್ಮಸ್ತೈರ್ಯ ತುಂಬುವ ಕಾರ್ಯ ನಡೆಯಬೇಕಿದೆ, ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರವನ್ನು ನೀಡುವ ಮೂಲಕ ಆಕೆಯನ್ನು ಸಮಾಜದಲ್ಲಿ ಗೌರಯುತವಾಗಿ ಬಾಳುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಫಾದರ ಟಿಯೋಲ ಮಚಾದೋ ಮಾತನಾಡಿ, ಮಹಿಳಾ ಒಕ್ಕೂಟಗಳು ಮಹಿಳೆಯರ ಒಗ್ಗಟ್ಟಿಗಾಗಿ, ಮಹಿಳಾ ಸಂಘಟನೆಗಾಗಿ ಕಾರ್ಯೋನ್ಮುಖವಾಗಬೇಕು ಎಂದರು. ಆರೋಗ್ಯ ಅಧಿಕಾರಿ ಡಾ.ಕವಿತಾ ದೊಡಮನಿ ಅವರಿಗೆ ವಿವಿಧ ಸ್ಲಂ ಸಂಘಟನೆಗಳು ಕೊಡಮಾಡುವ ವಿಜಯಪುರ ರತ್ನ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ಪ್ರಧಾನ ಮಾಡಿ ಗೌರವಿಸಲಾಯಿತು.

ಏಕತೆ ಮತ್ತು ಸಮಾನತೆಯ ಸಂಕೇತವಾಗಿ ಸಂವಿಧಾನ ಪೀಠಿಕೆ ಓದಲಾಯಿತು. ನಂತರ ಗಣ್ಯರು ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಆಯೋಜನೆ ಮಾಡಲಾಗಿದ್ದ ಆಟೋಟಗಳ ಸ್ಟಾಲ್ಗಳನ್ನು ಮತ್ತು ಪುಡ್ ಸ್ಟಾಲ್ಗಳನ್ನು ಸಹ ಸ್ಥಾಪಿಸಿದ್ದು ವಿಶೇಷವಾಗಿತ್ತು.
ಫರ್ಜಾನಾ ಜಮಾದಾರ, ಸುಶೀಲಾ ದಳವಾಯಿ, ಸಿಸ್ಟರ್ ಜಯಾ ಜಮಖಂಡಿ, ರೇಣುಕಾ ಯಂಟಮಾನ, ತೇಜಸ್ವಿನಿ ಬಂಡಿವಡ್ಡರ ಮೊದಲಾದವರು ಉಪಸ್ಥಿತರಿದ್ದರು.ಶೋಭಾ ವಾಲಿಕಾರ ಸ್ವಾಗತಿಸಿದರು. ಸುಧಾ ಮಾನೆ ವಂದಿಸಿದರು. ರಾಧಾ ಕಾಂಬಳೆ ಕಾರ್ಯಕ್ರಮ ನಿರೂಪಿಸಿದರು.

Latest Indian news

Popular Stories