Crime

ಬಳ್ಳಾರಿ: ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ:ಡಿಸಿ ನಕುಲ್

ಬಳ್ಳಾರಿ,ಅ.06: ಕಂದಾಯ ಇಲಾಖೆಯ ಸಿಬ್ಬಂದಿಯು ಅಧಿಕ ಕೆಲಸದ ಕಾರಣದಿಂದ ಸಮಯದ ಪರಿವೆಯೇ ಇಲ್ಲದೇ ಅತ್ಯಂತ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಜೀವನಶೈಲಿಯ ಮೇಲೆ ಪ್ರಭಾವ ಬಿರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ದೈಹಿಕ ಅಭ್ಯಾಸಕ್ಕೆ ಒತ್ತು ನೀಡಬೇಕು ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಘಟಕದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವಿಶ್ವಹೃದಯ ದಿನಾಚರಣೆ ನಿಮಿತ್ತ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗೆ ಆಯೋಜಿಸಿದ್ದ ಉಚಿತ ಹೃದಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿಬ್ಬಂದಿಗೆ ಸತತ ಒತ್ತಡದಿಂದ ನಾನಾ ಕಾಯಿಲೆಗಳು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದರೇ ನಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಳ್ಳಬೇಕಿದೆ ಎಂದು ಹೇಳಿದ ಡಿಸಿ ನಕುಲ್ ಅವರು ಕೆಲಸದ ಒತ್ತಡದ ಮಧ್ಯೆಯೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ಬಳ್ಳಾರಿ ಡಿಸಿ ಕಚೇರಿಯ 28ಜನರು ಕೊವಿಡ್ ಸೊಂಕಿತರಾಗಿ ಗುಣಮುಖರಾಗಿ ಬಂದಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದ ಡಿಸಿ ನಕುಲ್ ಅವರು ಎಲ್ಲರೂ ಕಡ್ಡಾಯವಾಗಿ ಸುಗರ್,ಬಿಪಿ, ಇಸಿಜಿ ಚೆಕ್ ಮಾಡಿಕೊಳ್ಳಬೇಕು ಎಂದರು.
2 ಕೋಟಿ ರೂ.ವೆಚ್ಚದಲ್ಲಿ ರೆಡ್‍ಕ್ರಾಸ್ ಭವನ ನಿರ್ಮಾಣ: ಭಾರತೀಯ ರೆಡ್‍ಕ್ರಾಸ್ ಸೇವೆ ಜಿಲ್ಲೆಯಲ್ಲಿ ಅಮೋಘ ಸೇವೆ ಸಲ್ಲಿಸುತ್ತಿದೆ. ಇತ್ತೀಚಿನ ಕೊರೊನಾ ಸಂದರ್ಭದಲ್ಲಂತೂ ರೆಡ್‍ಕ್ರಾಸ್ ಸ್ವಯಂ ಸೇವಕರು ಸಲ್ಲಿಸಿದ ಸೇವೆ ಅದ್ಭುತ ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಡಿಸಿ ನಕುಲ್ ಅವರು ಜಿಲ್ಲಾ ಖನಿಜ ನಿಧಿ ಅಡಿ 2 ಕೋಟಿ ರೂ.ವೆಚ್ಚದಲ್ಲಿ ಅಲ್ಲಿಪುರ ಬಳಿ ಭಾರತೀಯ ರೆಡ್ ಕ್ರಾಸ್ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದರು.
ಭವನ ನಿರ್ಮಾಣ ಮಾಡುವುದರಿಂದ ರೆಡ್‍ಕ್ರಾಸ್‍ನ ಆರೋಗ್ಯ ಶಿಬಿರ ಸೇರಿದಂತೆ ಇನ್ನೀತರ ಶಿಬಿರಗಳು ಹಾಗೂ ಕಾರ್ಯಕ್ರಮಗಳು ನಡೆಸಲು ಅನುಕೂಲವಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ವಿಮ್ಸ್ ನಿರ್ದೇಶಕ ಡಾ.ದೇವಾನಂದ, ರೆಡ್ ಕ್ರಾಸ್ ಉಪಸಭಾಪತಿ ಡಾ.ಎಸ್.ಜೆ.ವಿ.ಮಹಿಪಾಲ್ ಮಾತನಾಡಿದರು.
ಬಳ್ಳಾರಿ ಹೃದಯಾಲಯದ ಮುಖ್ಯಸ್ಥರು ಹಾಗೂ ಖ್ಯಾತ ಹೃದಯತಜ್ಞರಾದ ಡಾ.ನರೇಂದ್ರಗೌಡ ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ರೆಡ್ ಕ್ರಾಸ್ ನ ಕಾರ್ಯದರ್ಶಿ ಎಂ.ಎ.ಶಕೀಬ್ ನಿರೂಪಿಸಿದರು.
ನಂತರ ತಜ್ಞ ವೈದ್ಯರುಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳ ಹೃದಯ ತಪಾಸಣೆ ಹಾಗೂ ಇನ್ನೀತರ ಆರೋಗ್ಯ ತಪಾಸಣೆ ಮಾಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button