
ಬೀದರ್: ನಿರೀಕ್ಷೆಯಂತೆ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿಯ ಶರಣು ಸಲಗರ್ ಗೆದ್ದಿದ್ದಾರೆ. ಅನುಕಂಪವನ್ನೇ ಬಹುವಾಗಿ ನಂಬಿದ್ದ ಕಾಂಗ್ರೆಸ್ ಈ ಕ್ಷೇತ್ರವನ್ನು ಕಳೆದುಕೊಂಡಿದೆ. ಜಾತಿ ಲೆಕ್ಕಾಚಾರದಲ್ಲಿ ತೊಡಗಿದ್ದ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಕ್ಷದ ನಾಯಕತ್ವದ ವಿರುದ್ಧ ತಿರುಗು ಬಿದ್ದು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೀನಾಯ ಸೋಲು ಕಂಡಿದ್ದಾರೆ.
ನಗರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಭಾನುವಾರ ಮತ ಎಣಿಕೆ ಆರಂಭವಾಗುತ್ತಿದ್ದ0ತೆಯೇ ಶರಣು ಸಲಗರ್ ಅವರ ಗೆಲುವಿನ ಲಕ್ಷಣಗಳು ಗೋಚರಿಸಿದ್ದವು. ಮೊದಲ ಸುತ್ತಿನಿಂದ ಆರಂಭವಾದ ಅವರ ಮುನ್ನಡೆ ಕೊನೆಯ ಸುತ್ತಿನಲ್ಲೂ ಯಥಾರೀತಿ ಉಳಿದುಕೊಂಡಿತ್ತು. 28 ಸುತ್ತುಗಳ ಎಣಿಕೆಯಲ್ಲಿ ಅವರು ಒಮ್ಮೆಯೂ ಹಿಂದೆ ಬೀಳಲಿಲ್ಲ. ಅಂತಿಮವಾಗಿ 71,012 ಮತಗಳೊಂದಿಗೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಮಾಲಾ ಬಿ. ನಾರಾಯಣರಾವ್ ಅವರನ್ನು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿ0ದ ಪರಾಭಗೊಳಿಸಿದ್ದಾರೆ.
ಬಸವಕಲ್ಯಾಣ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಬಿಜೆಪಿ ದಾಖಲಿಸಿದ ಎರಡನೇ ಗೆಲುವು ಇದಾಗಿದೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ 15 ಚುನಾವಣೆಗಳು ನಡೆದಿವೆ. 2008 ರಲ್ಲಿ ಒಮ್ಮೆ ಮಾತ್ರ ಬಿಜೆಪಿ ಇಲ್ಲಿ ಗೆದ್ದಿತ್ತು. ಶರಣು ಸಲಗರ್ ಅವರು ಪಕ್ಷಕ್ಕೆ ಎರಡನೇ ಗೆಲುವು ತಂದುಕೊಟ್ಟಿದ್ದಾರೆ.
ಚುನಾವಣಾ ರಣತಂತ್ರ, ಸಂಘಟಿತ ಪ್ರಚಾರ, ಅತ್ಯುತ್ತಮ ಕಾರ್ಯಯೋಜನೆ ಜೊತೆಗೆ ಪಕ್ಷದ ನಾಯಕತ್ವವು ವಿಶೇಷ ನಿಗಾ ಇಟ್ಟು ಕಾಲಕಾಲಕ್ಕೆ ಕೈಗೊಂಡ ತೀರ್ಮಾನಗಳ ಫಲವಾಗಿ ಬಸವಕಲ್ಯಾಣದಲ್ಲಿ ಬಿಜೆಪಿ ಗೆಲ್ಲುವಂತಾಗಿದೆ. ಎನ್ಸಿಪಿಯಿಂದ ಕಣಕ್ಕೆ ಇಳಿದಿದ್ದ ಮರಾಠಾ ಸಮಾಜದ ಮುಖಂಡ ಎಂ.ಜಿ. ಮುಳೆ ಅವರು ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮಾಡುವ ಮೂಲಕ ಮರಾಠಾ ಮತ ವಿಭಜನೆ ತಪ್ಪಿಸುವಲ್ಲಿ ಬಿಜೆಪಿ ನಾಯಕತ್ವ ಯಶಸ್ವಿಯಾಗಿತ್ತು. ಟಿಕೆಟ್ ಕಾರಣಕ್ಕೆ ಮುನಿಸಿಕೊಂಡವರ ಪೈಕಿ ಮಲ್ಲಿಕಾರ್ಜುನ ಖೂಬಾ ಅವರನ್ನು ಹೊರತುಪಡಿಸಿ, ಉಳಿದೆಲ್ಲ ಮುಖಂಡರ ಮನವೊಲಿಸುವಲ್ಲು ಬಿಜೆಪಿ ನಾಯಕರು ಯಶಸ್ವಿಯಾಗಿದ್ದರು.
ಶಿಕ್ಷಕ ವೃತ್ತಿ ತೊರೆದು ರಾಜಕೀಯಕ್ಕೆ ಧುಮುಕಿದ ಶರಣು ಸಲಗರ್ ಅವರ ಕನಸು ನನಸಾಗಿದೆ. ಶಾಸಕರ ಆಪ್ತಸಹಾಯಕರಾಗಿ, ವಿಧಾನಸೌಧ ಸುತ್ತಿದ್ದ ಅವರೀಗ ನೇರವಾಗಿ ಶಾಸನಸಭೆ ಪ್ರವೇಶಿಸಿದ್ದಾರೆ. ಬಸವಕಲ್ಯಾಣದ ಮತದಾರರು ಸಲಗರ್ ಅವರನ್ನು ಮೊದಲ ಯತ್ನದಲ್ಲಿಯೇ ಆಯ್ಕೆ ಮಾಡಿ, ವಿಧಾನಸೌಧಕ್ಕೆ ಕಳಿಸುವ ಮೂಲಕ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಗೆದ್ದವರ ವಿವರ:
1957 ಅನ್ನಪೂರ್ಣಾಬಾಯಿ (ಕಾಂಗ್ರೆಸ್)
1962 ಅನ್ನಪೂರ್ಣಾಬಾಯಿ (ಕಾಂಗ್ರೆಸ್)
1967 ಸಿದ್ರಾಮಪ್ಪ ಖೂಬಾ (ಪಕ್ಷೇತರ)
1972 ಬಾಪುರಾವ ಹುಲಸೂರಕರ್ (ಕಾಂಗ್ರೆಸ್)
1978 ಬಾಪುರಾವ್ ಹುಲಸೂರಕರ್ (ಕಾಂಗ್ರೆಸ್)
1983 ಬಸವರಾಜ ಪಾಟೀಲ್ ಅಟ್ಟೂರ್ (ಜನತಾಪಕ್ಷ)
1985 ಬಸವರಾಜ ಪಾಟೀಲ್ ಅಟ್ಟೂರ್ (ಜನತಾಪಕ್ಷ)
1989 ಬಸವರಾಜ ಪಾಟೀಲ್ ಅಟ್ಟೂರ್ (ಜನತಾದಳ)
1994 ಬಸವರಾಜ ಪಾಟೀಲ್ ಅಟ್ಟೂರ್ (ಜನತಾದಳ)
1999 ಎಂ.ಜಿ. ಮುಳೆ (ಜೆಡಿಎಸ್)
2004 ಮಲ್ಲಿಕಾರ್ಜುನ ಖೂಬಾ (ಜೆಡಿಎಸ್)
2008 ಬಸವರಾಜ ಪಾಟೀಲ್ ಅಟ್ಟೂರ್ (ಬಿಜೆಪಿ)
2013 ಮಲ್ಲಿಕಾರ್ಜುನ ಖೂಬಾ (ಜೆಡಿಎಸ್)
2018 ಬಿ.ನಾರಾಯಣರಾವ್ (ಕಾಂಗ್ರೆಸ್)
2021 ಶರಣು ಸಲಗರ್ (ಬಿಜೆಪಿ)




