Crime

ಬಳ್ಳಾರಿ: ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಪಡೆದ ಜಿಲ್ಲಾ ಆಸ್ಪತ್ರೆ

ಬಳ್ಳಾರಿ,ಅ.06: ಬಳ್ಳಾರಿ ಜಿಲ್ಲಾ ಆಸ್ಪತ್ರೆ ಕಾಯಕಲ್ಪ ಕಾರ್ಯಕ್ರಮದಡಿಯಲ್ಲಿ 2019-20ನೇ ಸಾಲಿನ ಇಡೀ ರಾಜ್ಯದಲ್ಲಿಯೇ ಮೊದಲನೇ ಸ್ಥಾನ ಪಡೆದು ಗಮನಸೆಳೆದಿದೆ.
ಇತ್ತೀಚೆಗೆ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ 2019-20 ನೇ ಸಾಲಿನಲ್ಲಿ ಕಾಯಕಲ್ಪ ತಂಡದವರು ಭೇಟಿ ನೀಡಿ ಆಸ್ಪತ್ರೆಯ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿ;ಆಯಾ ವಿಭಾಗಗಳ ಕೆಲಸ ಕಾರ್ಯಗಳ ಸಾಧನೆಯನ್ನು ಮೌಲ್ಯ ಮಾಪನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ ಈ ಆಸ್ಪತ್ರೆಗೆ ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನ (1ನೇ ಬಹುಮಾನ)ನೀಡಿದೆ.
ಈ ಆಸ್ಪತ್ರೆಗೆ ಈಗಾಗಲೇ ಈ ಹಿಂದೆ ಕಾಯಕಲ್ಪ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಆಗಾಗ ಆಸ್ಪತ್ರೆಗೆ ಬಂದು ಪರಿಶೀಲಿಸಿ ಅವರು ನೀಡಿರುವ ಸಲಹೆಯಂತೆ ಕಾರ್ಯನಿರ್ವಹಿಸಿ ಮೊಟ್ಟ ಮೊದಲನೆಯದಾಗಿ 2016-17ನೇ ಸಾಲಿನಲ್ಲಿ 6ನೇ ಸ್ಥಾನ, 2017-18 ನೇ ಸಾಲಿನಲ್ಲಿ 2ನೇ ಸ್ಥಾನ ಹಾಗೂ 2018-19ನೇ ಸಾಲಿನಲ್ಲಿ 3ನೇ ಸ್ಥಾನ ಮತ್ತು ಪ್ರಸ್ತುತ 2019-20 ನೇ ಸಾಲಿನಲ್ಲಿ 1ನೇ ಸ್ಥಾನ ಪಡೆದಿದೆ.
ಪ್ರಶಸ್ತಿ ಸಂದಿರುವುದಕ್ಕೆ ಸಂತಸ ಹಂಚಿಕೊಂಡ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಕಾಯಕಲ್ಪ ತಂಡವು ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಮೆಚ್ಚಿ ಮೌಲ್ಯಮಾಪನ ಮಾಡಿರುತ್ತಾರೆ. ಆದರೆ ಈಗ ಅವರ ಸಲಹೆ ಸೂಚನೆಗಳು ಹಾಗೂ ಇತರ ಅಧಿಕಾರಿಗಳ ನಿರ್ದೇಶನದಂತೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರದ್ಧೆ ಮತ್ತು ಜವಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಕ್ಕಾಗಿ ಈ ಆಸ್ಪತ್ರೆಗೆ ಮೊದಲನೇ ಸ್ಥಾನ ದೊರಕಿದೆ ಮತ್ತು ನಮ್ಮ ಜವಾಬ್ದಾರಿಯೂ ಇನ್ನಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆ ಈ ಹಿಂದೆ ಸ್ವಾಯತ್ತ ಸಂಸ್ಥೆಯಾದ ವಿಮ್ಸ್ ಆಡಳಿತ ವ್ಯಾಪ್ತಿಯಲ್ಲಿತ್ತು.2016 ಏ.1ರಿಂದ ಬೇರ್ಪಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇರ್ಪಡೆಯಾಗಿರುತ್ತದೆ. ಅಂದಿನಿಂದ ಈ ಆಸ್ಪತ್ರೆ ಕ್ರಮೇಣವಾಗಿ ಒಂದೊಂದೆ ಸೌಲಭ್ಯ ಪಡೆದು ಅದೇ ರೀತಿಯಾಗಿ ಎಲ್ಲಾ ವರ್ಗದ ಸಿಬ್ಬಂದಿ ಸೇವೆ ಪಡೆದು ಎಲ್ಲಾ ವಿಭಾಗಗಳ ತಜ್ಞವೈದ್ಯರು ಅವರವರ ತಜ್ಞತೆಗೆ ತಕ್ಕಂತೆ ಬೇರೆ ಬೇರೆ ವಿಭಾಗಗಳನ್ನು ಪ್ರಾರಂಭ ಮಾಡಲಾಯಿತು. ಇದರಿಂದ ಸಾರ್ವಜನಿಕರಿಗೆ ಬಳ್ಳಾರಿ ನಗರ ಹಾಗೂ ತಾಲ್ಲೂಕುಗಳಲ್ಲಿ ಹತ್ತಿರದ ಆಂಧ್ರಪ್ರದೇಶದಿಂದ ಬೇರೆ ಬೇರೆ ಸಣ್ಣ ಪುಟ್ಟ ಕಾಯಿಲೆಗೆ ರೋಗಿಗಳು, ಹಾಗೂ ಗರ್ಭಿಣಿ ಸ್ತ್ರೀಯರು ಬಂದು ಸುಗಮವಾಗಿ ಹೆರಿಗೆ ಮಾಡಿಸಿಕೊಂಡು ಹೋಗುತ್ತಾರೆ. ಅದಲ್ಲದೆ ಮಕ್ಕಳಿಗೂ ಸಹ ಒಳ್ಳೆಯ ರೀತಿಯ ಆರೋಗ್ಯ ಸೇವೆ ಒದಗಿಸುವುದರಿಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಹೋಗಿರುತ್ತಾರೆ. ಇದರಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿದೆ ಎಂದು ಅವರು ವಿವರಿಸಿದ್ದಾರೆ.
ಈ ಆಸ್ಪತ್ರೆಯು ಈ ಮಟ್ಟಕ್ಕೆ ಬೆಳೆದು ಮೆಚ್ಚುಗೆ ಪಡೆಯಲು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರುಗಳು, ಶುಶ್ರೂಷಕರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಇತರೆ ಸಿಬ್ಬಂದಿ ಹಾಗೂ ಗ್ರೂಪ್-ಡಿ ನೌಕರರು ಇದಕ್ಕೆ ಮುಖ್ಯ ಕಾರಣರಾಗುತ್ತಾರೆ. ಅದೇ ರೀತಿಯಾಗಿ ಈ ಆಸ್ಪತ್ರೆಗೆ ಎನ್.ಹೆಚ್.ಎಂ ಅಡಿಯಲ್ಲಿ ಬೇರೆ ಬೇರೆ ಕಾರ್ಯಕ್ರಮಗಳು, ಪ್ರಾರಂಭವಾಗಿ ಅನುμÁ್ಠನಗೊಂಡಿದ್ದು ಹಾಗೂ ಶೇಕಡಾವಾರು ಗುರಿ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆ ಕಾಯಕಲ್ಪ ಕಾರ್ಯಕ್ರಮದಡಿಯಲ್ಲಿ ಈಗ ಮೊದಲನೇ ಸ್ಥಾನ (1ನೇ ಬಹುಮಾನ) ಪಡೆಯಲು ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು,ಡಿಎಚ್‍ಒಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲ ಜನಪ್ರತಿನಿಧಿಗಳ ಸಲಹೆ ಮತ್ತು ಸಹಕಾರವೇ ಕಾರಣ ಎಂದು ತಿಳಿಸಿರುವ ಎನ್.ಬಸರೆಡ್ಡಿ ಅವರು ಈ ಆಸ್ಪತ್ರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ, ಏನೇ ಸೌಲಭ್ಯ ಬೇಕಾದರೂ ಕೇಳಿದ ತಕ್ಷಣವೇ ಅನುಕೂಲ ಮಾಡಿ ಕೊಟ್ಟಿರುತ್ತಾರೆ. ಅದೇ ರೀತಿಯಾಗಿ ರಾಜ್ಯ ಮಟ್ಟದಿಂದಲೂ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಔಷಧಿ, ಪೀಠೋಪಕರಣ, ವೈದ್ಯಕೀಯ ಸಲಕರಣೆಗಳು, ಇದರೊಂದಿಗೆ ಅನುದಾನವು ಯಾವುದೇ ಕೊರತೆ ಇಲ್ಲದಂತೆ ಒದಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ ಎಲ್ಲಾ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಕಾಯಕಲ್ಪ ಕಾರ್ಯಕ್ರಮದಡಿ ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನಗಳಿಸಿರುವುದಕ್ಕೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಇದೊಂದು ಸಂತೋಷಕರ ವಿಷಯ. ಇನ್ಮುಂದೆಯೂ ಸಹ ಎಲ್ಲಾ ಸಿಬ್ಬಂದಿ ವರ್ಗದವರು ಇದೇ ರೀತಿಯಾಗಿ ಶ್ರದ್ಧೆ ಮತ್ತು ಸಹಕಾರದಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿರುವ ಅವರು, ಆಸ್ಪತ್ರೆಯ ಈ ಸಾಧನೆಯ ಗರಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆಯನ್ನು ಅವರು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button