
ಕಿಂಡಿ ಅಣೆಕಟ್ಟು ಯೋಜನೆಯಿಂದ ಕೊಯನಾಡಿಗೆ ಕಾದಿದೆಯಾ ಅಪಾಯ !
ಮಡಿಕೇರಿ ಮೇ ೨೧ : ೨೦೧೮ ರಲ್ಲಿ ಸಂಭವಿಸಿದ ಮಹಾಮಳೆ ಮತ್ತು ಜಲಸ್ಫೋಟದ ಅನಾಹುತದಿಂದ ಸಾವು, ನೋವುಗಳಿಗೆ ಸಾಕ್ಷಿಯಾದ ಸಂಪಾಜೆ ಸಮೀಪದ ಕೊಯನಾಡು ಗ್ರಾಮದಲ್ಲಿ ಇದೀಗ ಪಯಸ್ವಿನಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಈ ಯೋಜನೆಯಿಂದ ಮತ್ತೊಂದು ಅಪಾಯ ಕಾದಿದೆ ಎಂದು ಸ್ಥಳೀಯ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಗ್ರಾಮಸ್ಥರು ಸ್ಥಳೀಯರ ಬೇಡಿಕೆ ಇಲ್ಲದಿದ್ದರೂ ವಿನಾಕಾರಣ ಕಿಂಡಿ ಅಣೆಕಟ್ಟು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ೧೦ ಕ್ಕೂ ಹೆಚ್ಚು ಮನೆಗಳು, ಶಾಲೆ ಹಾಗೂ ಹೆದ್ದಾರಿ ಮುಳುಗಡೆಯಾಗಲಿದೆ ಎಂದು ಗಮನ ಸೆಳೆದಿದ್ದಾರೆ.
ಪ್ರತಿವರ್ಷ ಮಳೆಗಾಲದಲ್ಲಿ ಪಯಸ್ವಿನಿ ನದಿ ಪ್ರವಾಹದ ರೀತಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಇದರ ಪರಿಣಾಮವಾಗಿ ೨೦೧೮ ಮತ್ತು ೧೯ ರಲ್ಲಿ ಬಂಡೆಕಲ್ಲು, ಮರ, ಮರಳು, ಅಕ್ಕಪಕ್ಕದ ಮನೆಗಳು ಕೊಚ್ಚಿ ಬಂದಿವೆ. ಅಂದು ನಡೆದ ಮಹಾಮಳೆಯ ಅನಾಹುತದ ಕುರುಹುಗಳು ಇಂದಿಗೂ ಇಲ್ಲೇ ಉಳಿದುಕೊಂಡಿವೆ. ಅಪಾಯದ ಮುನ್ಸೂಚನೆ ಇದ್ದರೂ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ. ಕೊಯನಾಡು ಗ್ರಾಮಕ್ಕೆ ಈ ಅಣೆಕಟ್ಟಿನ ಅಗತ್ಯವಿಲ್ಲದಿದ್ದರೂ ಅನುದಾನ ಖರ್ಚು ಮಾಡುವ ಮತ್ತು ಇದರಿಂದ ದುರ್ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದ್ದು, ಮಳೆಗಾಲದಲ್ಲಿ ಕಲ್ಲು, ಮರಳು, ಮರ ಮತ್ತಿತರ ತ್ಯಾಜ್ಯಗಳು ಇಲ್ಲಿ ಬಂದು ನಿಲ್ಲುವುದಲ್ಲದೆ ನದಿ ನೀರಿನ ಹರಿವಿಗೆ ತಡೆಯೊಡ್ಡಲಿದೆ. ಇದರಿಂದ ಪಕ್ಕದಲ್ಲೇ ಇರುವ ಶಾಲೆ, ಮನೆಗಳು ಹಾಗೂ ಹೆದ್ದಾರಿ ಸಂಪೂರ್ಣ ಜಲಾವೃತಗೊಳ್ಳಲಿದ್ದು, ಸಾವು, ನೋವುಗಳು ಕೂಡ ಸಂಭವಿಸಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಿಷ್ಪçಯೋಜಕ ಯೋಜನೆಯ ಬಗ್ಗೆ ಗ್ರಾ.ಪಂ ಗೆ ದೂರು ನೀಡಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿರುವ ಸ್ಥಳೀಯರು, ತಕ್ಷಣ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಕಾಮಗಾರಿಯನ್ನು ಸ್ಥಗಿತಗೊಳಿಸುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಅನಾಹುತಗಳನ್ನು ತಡೆಯಬೇಕೆಂದು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂದರ್ಭ ಸ್ಥಳೀಯ ಗ್ರಾಮಸ್ಥರಾದ ಎನ್.ವಿ.ಸುರೇಶ್, ಎನ್.ವಿ.ನಾಗಪ್ಪ, ಎಂ.ಜಿ.ಯತಿನ್, ಎನ್.ವಿ.ಲೋಕೇಶ್, ಎನ್.ವಿ.ನಿತಿನ್, ಎಂ.ಜೆ.ಶಾAತಿ, ಎನ್.ಎನ್.ಪ್ರಶಾಂತ್, ಕೆ.ಕೆ.ರೇಖಾ, ಕೆ.ಎಲ್.ಕೂಸಪ್ಪ ಮತ್ತಿತರರು ಹಾಜರಿದ್ದರು. ಫೋಟೋ :: ಕೊಯನಾಡು ಚೆಕ್ ಡ್ಯಾಮ್, ಕೊಯನಾಡು ಓಲ್ಡ್






