Crime

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಇದನ್ನು ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ – ಎಸ್.ಐ.ಓ ರಾಜ್ಯಾಧ್ಯಕ್ಷ ಝೀಶಾನ್ ಅಖಿಲ್ ಸಿದ್ದೀಕಿ

ಕರ್ನಾಟಕ ಕುವೆಂಪು, ಗುರು ನಾರಾಯಣರ ನಾಡು. ಇದು ಸರ್ವ ಜನಾಂಗದ ಶಾಂತಿಯ ನಾಡು. ಇದನ್ನು ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಕರ್ನಾಟಕದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿ ದಾರಿ ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕಾಗಿ ಕೆಲವೊಂದು ಹಿತಾಸಕ್ತಿಗಳು ಸಕ್ರಿಯವಾಗಿದೆ ಎಂದು ಎಸ್.ಐ.ಓ ರಾಜ್ಯಾಧ್ಯಕ್ಷರಾದ ಝೀಶಾನ್ ಅಖಿಲ್ ಸಿದ್ದೀಕಿ ಹೇಳಿದರು.

ಅವರು ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ನೂತನ ಬ್ಲಾಕ್ ಉದ್ಘಾಟಿಸಿ ನಂತರ ನಡೆದ “ಉಜ್ವಲ ಭವಿಷ್ಯಕ್ಕಾಗಿ” ಸಮುದಾಯಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೇಲೆ ಮಿತಿ ಮೀರಿದ ಮಾಹಿತಿಗಳನ್ನು ಹೇರಲಾಗುತ್ತಿದೆ. ಅದನ್ನು ಪರಿಶೀಲಿಸಿ ಉಪಯೋಗಿಸುವ ಅಗತ್ಯವಿದೆ. ಮಾಧ್ಯಮಗಳ ಮೂಲಕ ಯುವಕರಲ್ಲಿ ದ್ವೇಷ ಪಸರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಡನ್ನು ಕಟ್ಟುವ, ನ್ಯಾಯವನ್ನು ಸ್ಥಾಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿ ಸಮುದಾಯವನ್ನುದ್ದೇಶಿಸಿ ಹೇಳಿದರು.

ಈ ದೇಶದಲ್ಲಿ ಶಾಂತಿ ಸ್ಥಾಪನೆಗೆ, ನ್ಯಾಯಯುತ ಸಮಾಜದ ನಿರ್ಮಾಣಕ್ಕಾಗಿ ಯುವಕರು ಮುಂದಡಿ ಇಡಬೇಕು. ಇಂದು ಯುನಿಫಾರ್ಮ್ ಸಿವಿಲ್ ಕೋಡ್, ವಕ್ಫ್ ಹೆಸರಿನಲ್ಲಿ ಅನಗತ್ಯ ಚರ್ಚೆಗಳನ್ನು ಹುಟ್ಡು ಹಾಕಿ ಅಭದ್ರತೆಯ ವಾತಾವರಣ ಸೃಷ್ಟಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಸ್ಪರ ಕೈ ಹಿಡಿದು ಮುಂದೆ ಸಾಗಬೇಕು. ಸಮುದಾಯ ಸಾಮಾಜಿಕವಾಗಿ ಒಳಗೊಳ್ಳುವ, ಸಂಬಂಧಗಳನ್ನು ಗಟ್ಟಿಯಾಗಿ ಬೇರೂರುವಂತೆ ಕಾಪಾಡಿಕೊಳ್ಳಬೇಕಾದ ಅಗತ್ಯದೊಂದಿಗೆ ಅರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಕೂಡಿ ಬೆಳೆಯುವ ಅಗತ್ಯವಿದೆ ಎಂದು ಕರೆ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button