Uttara Kannada

ಪ್ರಯಾಣಿಕರನ್ನು ಭಕ್ತಿಯಿಂದ ಕಾಣಿ : ಶಾಸಕ ಸೈಲ್

ಕಾರವಾರ : ಸಾರ್ವಜನಿಕರಿಗೆ ಶಕ್ತಿ ಯೋಜನೆ ಕೊಟ್ಟರೇ ಸಾಲದು, ಪ್ರಯಾಣಿಕರನ್ನು ಭಕ್ತಿಯಿಂದ ಕಾಣಬೇಕು ಎಂದು ಕಾರವಾರ ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ತಾಲೂಕು ಪಂಚಾಯತ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರವಾರ –ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಒಂದುವರೆ ವರ್ಷದಲ್ಲಿ ಸುಮಾರು ೩೦೦ ಕೋಟಿ ರೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಎಷ್ಟು ಕಾಮಗಾರಿ ಮುಗಿದಿವೆ ?, ಎಷ್ಟು ಪ್ರಗತಿಯಲ್ಲಿವೆ ಎಂಬುದರ ಬಗ್ಗೆ ಮಾಹಿತಿ ನೀಡಿ
ಎಲ್ಲಾ ಕಾಮಗಾರಿಗಳ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದ ಅವರು ಮುಕ್ತಾಯವಾಗಿರುವ ಕಾಮಗಾರಿಗಳ ಉದ್ಘಾಟನೆಗೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಎಲ್ಲಾ ಸರ್ಕಾರಿ ಕಚೇರಿಯ ಸೂಚನ ಫಲಕದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮಾಹಿತಿಯನ್ನು ಕಡ್ಡಾಯವಾಗಿ ಅಳವಡಿಸಿ, ಸರಕಾರದ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ ಕಾರ್ಯನಿರ್ವಹಿಸಿ, ಕೆಲಸ ಮಾಡಲು ಯಾವುದೇ ಅಡತಡೆ ಉಂಟು ಮಾಡಿದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದರು.
ಶಕ್ತಿ ಯೋಜನೆಯಡಿ ಇಲ್ಲಿಯವರಿಗೆ ೯೮.೭೮, ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇದರಿಂದ ಓಟ್ಟು ೩೧.೧೪ ಕೋಟಿ ಆದಾಯ ಗಳಿಕೆಯಾಗಿದೆ. ೧೩ ಹೊಸ ಬಸ್ಸು ಬಂದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕಾರವಾರದಲ್ಲಿ ೪ ಕೋಟಿ ವೆಚ್ಚದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದರು . ಬಸ್‌ಗಳ ಕೊರತೆ ಇರುವ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸಿ, ಬಸ್ ಚಾಲಕರ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಮ್ಮ ಗಮನಕ್ಕೆ ತನ್ನಿ ಎಂದ ಅವರು ಚಾಲಕರ ಕೊರತೆ ಇರುವುದರಿಂದ ಆರ್. ಟಿ ಓ, ವಾ.ಕ.ರ.ಸಾ .ಸಂಸ್ಥೆ ಮತ್ತು ತಹಶೀಲ್ದಾರವರ ನೇತೃತ್ವದಲ್ಲ್ಲಿ ಮೌಖಿಕ ಸಂದರ್ಶನದ ಮೂಲಕ ಚಾಲಕರನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯತ ಆಡಳಿತ ಅಧಿಕಾರಿ ಸೋಮಶೇಖರ ಮೇಸ್ತಾ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಪಿ. ಗೌಡರ, ತಹಶಿಲ್ದಾರ ನಿಶ್ಚಲ್ ನರೋನಾ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
…….

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button