
ವಕ್ಫ್ ತಿದ್ದುಪಡಿ ಮಸೂದೆ 2024 ಹಿಂಪಡೆಯಲು ಆಗ್ರಹ: ಮಂಗಳೂರಿನಲ್ಲಿ ಖಾಝಿಗಳು, ಮುಸ್ಲಿಂ ಧಾರ್ಮಿಕ ಮುಖಂಡರಿಂದ ಜಂಟಿ ಪತ್ರಿಕಾಗೋಷ್ಠಿ
ಮಂಗಳೂರು: ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ದಾಳಿಯ ಭಾಗವಾಗಿ 2024ರ ಆಗಸ್ಟ್ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರ ವಿರೋಧದ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಆದರೆ, ಪ್ರಸ್ತುತ ಸಮಿತಿಯು ವಿರೋಧ ಪಕ್ಷಗಳ ಪ್ರತಿನಿಧಿಗಳು ಸೂಚಿಸಿದ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ಮೊದಲಿಗಿಂತಲೂ ಅಪಾಯಕಾರಿ ಅಂಶಗಳನ್ನು ಸೇರಿಸಿ ಮಂಡಿಸಿದೆ. ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರಲ್ಲಿ ಅಸುರಕ್ಷತೆಯನ್ನು ಮೂಡಿಸುವ ಮತ್ತು ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸಿರುವ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರವು ಕೂಡಲೇ ಹಿಂಪಡೆಯಬೇಕು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧೀನದಲ್ಲಿ ಖಾಝಿಗಳು ಹಾಗೂ ಉಲಮಾಗಳು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾಝಿಗಳು, ವಕ್ಫ್ ಎಂಬುದು ದೇವರ ಹೆಸರಿನಲ್ಲಿ ಸಮರ್ಪಿಸಲಾದ ದಾನವಾಗಿದ್ದು, ಯಾರಿಗೂ ಯಾವತ್ತೂ ಪರಭಾರೆ ಮಾಡಲಾಗದ, ಸಮುದಾಯದ ಧಾರ್ಮಿಕ ಹಾಗೂ ಸಾಮಾಜಿಕ ಕೆಲಸಗಳಿಗೆ ಮಾತ್ರ ಬಳಸಬಹುದಾದ ಸೊತ್ತು. ಇವುಗಳ ನಿರ್ವಹಣೆಗೆ 1913 ರಲ್ಲಿ ವಕ್ಫ್ ಕಾಯಿದೆಯನ್ನು ರೂಪಿಸಲಾಗಿತ್ತು. 1955ರಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ವಕ್ಫ್ ಬೋರ್ಡ್ ಅನ್ನು ಅಂಗೀಕರಿಸಿ, 1995 ರಲ್ಲಿ ಹಾಗೂ 2013 ರಲ್ಲಿ ಅಗತ್ಯ ತಿದ್ದುಪಡಿಗಳನ್ನು ತಂದು ವಕ್ಫ್ ಸ್ವತ್ತುಗಳನ್ನು ಸಂರಕ್ಷಿಸಲು ಪ್ರಯತ್ನಿಸಲಾಗಿತ್ತು.
ಭಾರತದ ಸಂವಿಧಾನದಲ್ಲಿ ಆರ್ಟಿಕಲ್ 25, 26, 27 ಮತ್ತು 28 ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದಿದ್ದು, ಆರ್ಟಿಕಲ್ 26 ರ ಎ,ಬಿ,ಸಿ,ಡಿ ಕಲಮುಗಳು ಧಾರ್ಮಿಕ ಆಚರಣೆಯ ಭಾಗವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಉದ್ದೇಶಗಳಿಗೆ ಸಂಸ್ಥೆಗಳನ್ನು ಕಟ್ಟಿಕೊಳ್ಳುವ, ಧಾರ್ಮಿಕ ವಿಷಯದಲ್ಲಿ ಅದನ್ನು ತಮ್ಮ ಧರ್ಮಾನುಸಾರ ಪಾಲನೆಮಾಡುವ, ಸ್ಥಿರ ಹಾಗೂ ಚರಾಸ್ತಿಗಳನ್ನು ಹೊಂದುವ ಮತ್ತು ಅವನ್ನು ಕಾನೂನು ರೀತ್ಯ ನಿರ್ವಹಣೆ ಮಾಡುವ ಹಕ್ಕನ್ನು ಕೊಡುತ್ತದೆ. ಇದರಂತೆ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲ ಧರ್ಮೀಯರು ಧಾರ್ಮಿಕ ಸಂಸ್ಥೆಗಳನ್ನು ಕಟ್ಟಿಕೊಂಡು ದೇಣಿಗೆಗಳನ್ನು ಸ್ವೀಕರಿಸುತ್ತಿದ್ದು, ಮುಸ್ಲಿಂ ಸಮುದಾಯದ ಧಾರ್ಮಿಕ ದಾನಗಳ ಆಚಾರಗಳನ್ನು ಮುನ್ನಡೆಸಲು ವಕ್ಫ್ ಬೋರ್ಡ್ ಕಾಯಿದೆಯನ್ನು ರೂಪಿಸಲಾಗಿದೆ.
ಇದೀಗ ಕೇಂದ್ರದ ಬಿಜೆಪಿ ಸರ್ಕಾರವು ವಕ್ಫ್ ಕಾಯಿದೆಗೆ ಅಮೂಲಾಗ್ರ ತಿದ್ದುಪಡಿ ಮಾಡಲು ಮುಂದಾಗಿದ್ದು, ಅದಕ್ಕಾಗಿ United Wakf -Management, Empowerment, Efficiency, Development- Act- UMEED- ಮಸೂದೆಯನ್ನು ಜಾರಿಗೆ ತರುತ್ತಿದೆ.
ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳನ್ನು ಕಬಳಿಸುವ ಮತ್ತು ಅಳಿದುಳಿದ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲೂ ಸಮುದಾಯದ ನಿಯಂತ್ರಣವನ್ನು ತಪ್ಪಿಸುವ ಉದ್ದೇಶವನ್ನೇ ಹೊಂದಿದೆ ಎಂದರು.
ತಿದ್ದುಪಡಿ ಮಸೂದೆಯು ಹಲವಾರು ಅನ್ಯಾಯಕಾರಿ ಅಂಶಗಳನ್ನು ಒಳಗೊಂಡಿದ್ದು, ಮುಸ್ಲಿಮರನ್ನು ದಮನಿಸುವ ಕೋಮುವಾದಿ ಉದ್ದೇಶವನ್ನಷ್ಟೇ ಹೊಂದಿದೆ.
ಜಂಟಿ ಸಂಸದೀಯ ಸಮಿತಿಯ ಮುಂದೆ 98 ಲಕ್ಷದಷ್ಟು ಲಿಖಿತ ಮನವಿಗಳು ಬಂದಿದ್ದು, ಅದರಲ್ಲಿ ಬಹುಪಾಲು ಈ ತಿದ್ದುಪಡಿಗಳನ್ನು ವಿರೋಧಿಸುವುವೇ ಆಗಿತ್ತು. ಆದಾಗ್ಯೂ ಸರ್ಕಾರವು ವಿರೋಧ ಪಕ್ಷಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನೂ ಅವಗಣಿಸಿ, ಸರ್ವಾಧಿಕಾರಿ ಪ್ರವೃತ್ತಿ ತೋರಿ ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಿದೆ. ಈ ತಿದ್ದುಪಡಿಯು ವಕ್ಫ್ ಆಸ್ತಿಗಳನ್ನು ಸರ್ಕಾರ ಒತ್ತುವರಿ ಮಾಡುವ ಮತ್ತು ವಕ್ಫಿನ ಇಸ್ಲಾಮಿಕ್ ಧಾರ್ಮಿಕತೆಯನ್ನು ನಾಶಮಾಡುವ ದುರುದ್ದೇಶ ಪೂರಿತ ನಡೆಯಾಗಿದ್ದು, ಮುಸ್ಲಿಮರ ಅಸ್ತಿತ್ವ ಮತ್ತು ಅಸ್ಮಿತೆಯನ್ನು ನಾಶ ಮಾಡುವ ಉಗ್ರ ಕೋಮುವಾದಿತ್ವದ ಭಾಗವಾಗಿದೆ. ದೇಶದ ಅಲ್ಪಸಂಖ್ಯಾತ ಸಮಾಜಕ್ಕೆ ಸಂರಕ್ಷಣೆ ಒದಗಿಸುವುದು ಯಾವುದೇ ಸರ್ಕಾರದ ಜವಾಬ್ದಾರಿಯಾಗಿದ್ದು, ಅವರಿಗೆ ಸಂವಿಧಾನದಲ್ಲಿ ನೀಡಲಾಗಿರುವ ಧಾರ್ಮಿಕ ಹಕ್ಕಿನ ಮೇಲಿನ ದಾಳಿಯು ಸಂವಿಧಾನದ ಮೇಲಿನ ದಾಳಿಯೇ ಆಗಿದೆ. ಆದ್ದರಿಂದ ಸರ್ಕಾರವು ಪ್ರಸ್ತಾವಿತ ಮಸೂದೆಯನ್ನು ಹಿಂಪಡೆಯಲೇ ಬೇಕು.
ದೇಶದ ಸಂವಿಧಾನ, ಜಾತ್ಯತೀತ ಸಿದ್ಧಾಂತ ಮತ್ತು ಬಹುತ್ವ ಸಂಸ್ಕೃತಿಯಲ್ಲಿ ನಂಬಿಕೆ ಇರುವ ಎಲ್ಲ ಪ್ರಜ್ಞಾವಂತ ಭಾರತೀಯರು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಧ್ವನಿ ಎತ್ತಬೇಕು ಕರೆ ನೀಡಿದರು.
ಖಾಝಿ ಅಹ್ಮದ್ ಮುಸ್ಲಿಯಾರ್ ತಾಖಾ ಉಸ್ತಾದ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಉಸ್ಮಾನುಲ್ ಫೈಝಿ ತೋಡಾರು, ಯು ಕೆ ಮುಹಮ್ಮದ್ ಸ ಅದಿ ವಳವೂರು, ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಎನ್ ಕೆ ಎಂ ಶಾಫಿ ಸಾದಿ ಬೆಂಗಳೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ, ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ಟಿ ಎಂ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್, ಅನೀಸ್ ಕೌಸರಿ, ಉಮರ್ ದಾರಿಮಿ ಸಾಲ್ಮಾರ, ಖಾಸಿಂ ದಾರಿಮಿ ಸವಣೂರು, ಎಂ ವೈ ಅಬ್ದುಲ್ ಹಫೀಳ್ ಸಅದಿ ಕೊಡಗು, ಅಬೂಬಕ್ಕರ್ ಸಿದ್ದೀಖ್ ದಾರಿಮಿ ಕಡಬ, ಕೆಕೆಎಂ ಕಾಮಿಲ್ ಸಖಾಫಿ ಸುರಿಬೈಲ್, ರಫೀಕ್ ಹುದವಿ ಕೋಲಾರ, ಕೆ ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ, ಹುಸೈನ್ ದಾರಿಮಿ ರೆಂಜಲಾಡಿ, ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು, ಅಬೂಸಾಲಿಹ್ ಫೈಝಿ ತುಂಬೆ, ಮುಹಮ್ಮದ್ ಅಲಿ ತುರ್ಕಲಿಕೆ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲ, ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ (ಅಧ್ಯಕ್ಷರು ದ. ಕ. ವಕ್ಫ್ ಸಲಹಾ ಸಮಿತಿ ದ.ಕ), ಅಶ್ರಫ್ ಕಿನಾರ ಮಂಗಳೂರು (ಉಪಾಧ್ಯಕ್ಷರು ದ. ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ) ಉಪಸ್ಥಿತರಿದ್ದರು.




