INTERNATIONALFeatured Story

Pakistan Train Hijack:16 ಭಯೋತ್ಪಾದಕರ ಹತ್ಯೆ- 104 ಪ್ರಯಾಣಿಕರ ರಕ್ಷಣೆ

ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೈಲಿನ ಮೇಲೆ ದಾಳಿ ನಡೆಸಿದ ಉಗ್ರರು ನೂರಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದರು. ಈ ಪೈಕಿ ಕಾರ್ಯಾಚರಣೆ ನಡೆಸಿರುವ ಪಾಕಿಸ್ತಾನದ ಭದ್ರತಾ ಪಡೆ 104 ಪ್ರಯಾಣಿಕರನ್ನು

ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, 16 ಉಗ್ರರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

 

ಕ್ವೆಟ್ಟಾದಿಂದ ಪೆಶಾವರಕ್ಕೆ ತೆರಳುತ್ತಿದ್ದ ಒಂಬತ್ತು ಬೋಗಿಗಳಿರುವ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 400 ಪ್ರಯಾಣಿಕರು ಸಂಚರಿಸುತ್ತಿದ್ದರು. ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದ ಸಮೀಪದ ಸುರಂಗದಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದರು. ನಂತರ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತು.

ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯ ಮಧ್ಯೆ 58 ಪುರುಷರು, 31 ಮಹಿಳೆಯರು ಹಾಗೂ 15 ಮಕ್ಕಳು ಸೇರಿದಂತೆ 104 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಭದ್ರತಾ ಪಡೆ ತಿಳಿಸಿದೆ. ಅವರೆಲ್ಲರನ್ನು ಮತ್ತೊಂದು ರೈಲಿನ ಮೂಲಕ ಕಚ್ಚಿ ಜಿಲ್ಲೆಯ ಮಾಚ್‌ಗೆ ಕಳುಹಿಸಲಾಗಿದೆ.

ಉಗ್ರರ ವಿರುದ್ಧದ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, 16 ಉಗ್ರರನ್ನು ಕೊಂದಿದ್ದು ಸುರಂಗವನ್ನು ಭದ್ರತಾ ಪಡೆ ಸುತ್ತುವರಿದಿದೆ ಎಂದು ಮೂಲಗಳು ತಿಳಿಸಿವೆ. ಸುರಂಗದ ಬಳಿ ಭಾರಿ ಗುಂಡಿನ ಚಕಮಕಿ ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 26 ಜನರು ಮೃತಪಟ್ಟು, 62 ಮಂದಿ ಗಾಯಗೊಂಡಿದ್ದರು. ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡ ನಂತರ ಪಾಕಿಸ್ತಾನ ರೈಲ್ವೆ ಕ್ವೆಟ್ಟಾದಿಂದ ಪೇಶಾವರಕ್ಕೆ ರೈಲು ಸೇವೆಗಳನ್ನು ಪುನರಾರಂಭಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button