
ಗುಜರಾತ್ ಮಾದರಿ ಬದಲಾವಣೆ: ಬಿಎಸ್ವೈ ಸ್ಥಾನಕ್ಕೆ ಬಿಎಲ್ ಸಂತೋಷ್ ?
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವ ಬಿರುಸಿನ ಚಟುವಟಿಕೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಅಡಿಯೋ ಬಾಂಬ್ ಸ್ಫೋಟಗೊಂಡ ಬಳಿಕ ಯಡಿಯೂರಪ್ಪ ನಿದ್ದೆ ಮಾಡುತ್ತಿಲ್ಲ. ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಬದಲಾವಣೆ ಆಗಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಗುಜರಾತ್ನಲ್ಲಿ ಪ್ರಭಾವಿ ಸಿಎಂ ಎನಿಸಿಕೊಂಡಿದ್ದ ಕೇಶುಭಾಯಿ ಪಟೇಲ್ ಅವರನ್ನು ಇಳಿಸಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಮಾದರಿಯಲ್ಲಿಯೇ ರಾಜ್ಯದಲ್ಲೂ ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿ ಪಕ್ಷದ ನಿಷ್ಠಾವಂತರಿಗೆ ಸಿಎಂ ಪಟ್ಟ ಕಟ್ಟಲಾಗುತ್ತಿದೆ ಎಂಬ ಮಾತು ಕೇಳಿ ಬರಲಾರಂಭಿಸಿದೆ.
ಸದ್ಯ ನಡೆಯುತ್ತಿರುವ ಚರ್ಚೆಯ ಪ್ರಕಾರ ಆರ್ಎಸ್ಎಸ್ ನಿಷ್ಠಾವಂತ ನಾಯಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೋದಿ ರೀತಿಯಲ್ಲಿ ಕರ್ನಾಟಕ ಸಿಎಂ ಆಗಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
2001ರಲ್ಲಿ ಕೇಶುಭಾಯಿ ಪಟೇಲ್ ಗುಜರಾತ್ ಸಿಎಂ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಕೇಶುಭಾಯಿ ಪಟೇಲ್ ಆಡಳಿತ ಅವಧಿಯಲ್ಲಿ ನಡೆದ ಸಂಸತ್ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲನ್ನಪ್ಪಿತ್ತು. ಇದೇ ಸಮಯದಲ್ಲಿ ಭ್ರಷ್ಟಾಚಾರ, ಅದಕ್ಷ ಆಡಳಿತ ಮಾತು ಕೇಳಿ ಬಂದಿತ್ತು. 2001 ರಲ್ಲಿ ಭುಜ್ನಲ್ಲಿ ಸಂಭವಿಸಿದ ಭೀಕರ ಭೂಕಂಪ ನಿರ್ವಹಣೆ ಮಾಡದೇ ವಿಫಲವಾಗಿತ್ತು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲುವ ಆತಂಕ ಎದುರಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ನರೇಂದ್ರ ಮೋದಿ, ಕೇಶುಭಾಯಿ ಪಟೇಲ್ ಆಡಳಿತದಲ್ಲಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರು. ಕೇಂದ್ರ ಬಿಜೆಪಿ ನಾಯಕರು ಸಿಎಂನ್ನು ಬದಲಾವಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಅದೇ ಸಮಯದಲ್ಲಿ ನರೇಂದ್ರ ಮೋದಿ ಅವರನ್ನು ಸಿಎಂಯನ್ನಾಗಿ ನೇಮಿಸಲಾಯಿತು. ಕೇಂದ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅರ್ಎಸ್ಎಸ್ ಹಿನ್ನೆಲೆಯುಳ್ಳ ಮೋದಿ ರಾತ್ರೋ ರಾತ್ರಿ ಗುಜರಾತ್ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯದಲ್ಲೂ ಇಂತಹದೇ ಬದಲಾವಣೆ ಆಗಬಹುದು ಎಂಬ ಚರ್ಚೆ ನಡೆಯುತ್ತಿದೆ.




