
ಕುಡಿಯುವ ನೀರಿನ ಸಮಸ್ಯೆ ಕಂಡು ಬರದಂತೆ ಮುನ್ನೆಚ್ಚರಿಕೆ ವಹಿಸಿ : ಸುಷಮಾ ಗೋಡಬೋಲೆ
ಕಾರವಾರ : ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷಮಾ ಗೋಡಬೋಲೆ ಸೂಚಿಸಿದರು. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಹುದಾದ ಗ್ರಾಮಗಳ ಪಟ್ಟಿಯನ್ನು ಮುಂಚಿತವಾಗಿ ಸಿದ್ದಪಡಿಸಿಕೊಂಡು ಆ ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ಸೇರಿದಂತೆ ಪರ್ಯಾಯ ನೀರಿನ ವ್ಯವಸ್ಥೆಗೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು ಜಿಲ್ಲೆಯಲ್ಲಿ ಹೊಸ ಬೋರ್ವೆಲ್ ಕೊರೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ವೈಜ್ಞಾನಿಕವಾಗಿ ಅಂತರ್ಜಲ ಮರುಪೂರಣ ವ್ಯವಸ್ಥೆ ಅವಡಿಸಿಕೊಂಡಲ್ಲಿ ಮಾತ್ರ ಅನುಮತಿಯನ್ನು ನೀಡುವಂತೆ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ದುಸ್ಥಿತಿಯಲ್ಲಿರುವ ಮಳೆಮಾಪನ ಯಂತ್ರಗಳು ದುರಸ್ಥಿ, ಹೊಸದಾಗಿ ಅಳವಡಿಕೆಯಾಗುವ ವರೆಗೆ ಬೆಳೆ ವಿಮೆ ಪಾವತಿಗೆ ಈ ಹಿಂದಿನಂತೆ ಗ್ರಾಮ ಪಂಚಾಯತ್ಗಳಲ್ಲಿ ಅಳವಡಿಸಿರುವ ಮ್ಯಾನ್ಯುಯಲ್ ಗೇಜ್ ಯಂತ್ರಗಳ ಮಾಪನವನ್ನು ವಿಮಾ ಪರಿಹಾರದ ಮೊತ್ತ ಪಾವತಿಗೆ ಪರಿಗಣಿಸುವ ಕುರಿತಂತೆ ಜಿಲ್ಲೆಯ ತೋಟಗಾರಿಕಾ ಇಲಾಖೆ ಮೂಲಕ ಇಲಾಖೆಯ ಕೇಂದ್ರ ಕಚೇರಿಗೆ ಪತ್ರ ಬರೆಯುವಂತೆ ತಿಳಿಸಿದರು.
ಗ್ಯಾಸ್ ಸಮಸ್ಯೆ :
ಗ್ಯಾಸ್ ಸಿಲೆಂಡರ್ ಸಮಸ್ಯೆಯಿಂದ ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಗೆ ಯಾವುದೇ ಸಮಸ್ಯೆಯಾಗಿಲ್ಲವೆಂದು ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಇಡುಗಂಟು ಸೌಲಭ್ಯವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪಂಚಾಯತ್ ನ ಎಲ್ಲಾ ಶಾಖಾ ಮುಖ್ಯಸ್ಥರು ಮತ್ತು ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಹಾಜರಿದ್ದರು.




