Dakshina KannadaFeatured Story

ಧಾರ್ಮಿಕ ಕಾರ್ಯಕ್ರಮದ ಕೆಳಗೆ ಕೋಮು ದ್ವೇಷದ ಕಾಮೆಂಟ್: ಆರೋಪಿಯ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಾಕಾರಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕಾಸರಗೋಡು ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಜೇಶ್ವರ ನಿವಾಸಿ ಗಣೇಶ್ ಪ್ರಸಾದ್ (41) ಎಂದು ಗುರುತಿಸಲಾಗಿದೆ.

ಕಳೆದ ಜನವರಿ ತಿಂಗಳಿನಲ್ಲಿ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಕಿರಾತ್’ (ಕುರಾನ್ ಪಠಣ) ಸ್ಪರ್ಧೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವಿಡಿಯೋವೊಂದು ಪ್ರಮುಖ ಮಾಧ್ಯಮ ಸಂಸ್ಥೆಯ ಫೇಸ್‌ಬುಕ್ ಪುಟದಲ್ಲಿ ಪ್ರಸಾರವಾಗುತ್ತಿತ್ತು. ಈ ವೇಳೆ ಆರೋಪಿ ಗಣೇಶ್ ಪ್ರಸಾದ್ ತನ್ನ ಫೇಸ್‌ಬುಕ್ ಖಾತೆಯಿಂದ, “ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂಬ ಪ್ರಚೋದನಾಕಾರಿ ಕಾಮೆಂಟ್ ಹಾಕಿದ್ದ ಎನ್ನಲಾಗಿದೆ.

ಈ ವಿಚಾರವಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 196 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಸೆಕ್ಷನ್ 66ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಆರೋಪಿಯ ಪತ್ತೆ ಹಚ್ಚಿದ ಪೊಲೀಸರು, ಮಾರ್ಚ್ 27 ರಂದು ಆತನನ್ನು ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಲುವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Back to top button