Udupi

ಕಾರ್ಕಳ ತಾಲೂಕು ಕೆಡಿಪಿ ಸಭೆ ಕರೆಯುವಂತೆ ಶಾಸಕರಿಗೆ ನಾಮನಿರ್ದೇಶಿತ ಸದಸ್ಯರ ಆಗ್ರಹ | ‘ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನೇಮಕ ಮಹಿಳಾ ಆಯೋಗದ ಅಧ್ಯಕ್ಷರಿಂದ ಸಾಧ್ಯವಾದರೆ, ಶಾಸಕರಿಂದ ಯಾಕಾಗಲಿಲ್ಲ?: ಎಂ.ಪಿ. ಮೊಯಿದ್ದಿನಬ್ಬ

ಕಾರ್ಕಳ: ರಾಜ್ಯ ಸರ್ಕಾರದಿಂದ ಕಾರ್ಕಳ ತಾಲೂಕು ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಮಿತಿ)ಗೆ ನಾಮನಿರ್ದೇಶಿತ ಸದಸ್ಯರ ನೇಮಕವಾಗಿ ಹಲವು ತಿಂಗಳು ಕಳೆದಿದ್ದರೂ, ಸಮಿತಿಯ ಅಧ್ಯಕ್ಷರಾಗಿರುವ ಕಾರ್ಕಳ ಶಾಸಕ ಇನ್ನೂ ಸಭೆ ಕರೆದಿಲ್ಲ ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಎಂ.ಪಿ. ಮೊಯಿದ್ದಿನಬ್ಬ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಕಾರ್ಯಕ್ರಮಗಳು 33ಕ್ಕೂ ಹೆಚ್ಚು ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ಅವುಗಳ ಪ್ರಗತಿಯನ್ನು ಪರಿಶೀಲಿಸಲು ನಿಯಮಿತವಾಗಿ ಕೆಡಿಪಿ ಸಭೆ ನಡೆಸುವುದು ಅಗತ್ಯವಾಗಿದೆ. ಆದರೆ ಸಭೆ ಕರೆಯದೇ ಇರುವುದರಿಂದ ಅಭಿವೃದ್ಧಿ ಕಾರ್ಯಗಳ ಸಮರ್ಪಕ ಪರಿಶೀಲನೆ ನಡೆಯುತ್ತಿಲ್ಲ ಎಂದು ದೂರಿದರು.

ಅಧಿಕಾರಿಗಳೊಂದಿಗೆ ಶಾಸಕರು ಮಾತ್ರ ಸಭೆ ನಡೆಸುವುದು ಸರ್ಕಾರದಿಂದ ನಾಮನಿರ್ದೇಶಿತರಾದ ಸದಸ್ಯರನ್ನು ಕಡೆಗಣಿಸಿದಂತಾಗಿದ್ದು, ಇದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಸರ್ಕಾರದ ಯೋಜನೆಗಳು ಎಲ್ಲರ ಸಹಭಾಗಿತ್ವದಲ್ಲಿ ಜಾರಿಯಾಗಬೇಕೇ ಹೊರತು ಒಬ್ಬರ ಇಚ್ಛೆಗೆ ಅನುಗುಣವಾಗಿ ನಡೆಯಬಾರದು. ನಾಮನಿರ್ದೇಶಿತ ಸದಸ್ಯರಿಗೂ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸಮಾನ ಕಾಳಜಿ ಇದೆ ಎಂದು ಅವರು ಹೇಳಿದರು.

ಕೆಡಿಪಿ ಸಭೆ ನಡೆಸದ ಪರಿಣಾಮಕ್ಕೆ ಕಾರ್ಕಳ ಸರಕಾರಿ ಆಸ್ಪತ್ರೆಯ ಪರಿಸ್ಥಿತಿಯೇ ದೊಡ್ಡ ಉದಾಹರಣೆಯಾಗಿದೆ ಎಂದು ಮೊಯಿದ್ದಿನಬ್ಬ ಹೇಳಿದರು. ಆಸ್ಪತ್ರೆಯಲ್ಲಿ ಮಹಿಳಾ ವೈದ್ಯಾಧಿಕಾರಿ ಹಾಗೂ ತಜ್ಞ ವೈದ್ಯರ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ, ಈ ವಿಚಾರ ಕೆಡಿಪಿ ಸಭೆಯಲ್ಲಿ ಚರ್ಚೆಯಾಗದೇ ಉಳಿದಿದೆ. ಒಂದು ವೇಳೆ ಸಭೆ ನಡೆದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು.

“ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರು ಆಸ್ಪತ್ರೆಗೆ ಭೇಟಿ ನೀಡಿದ ಒಂದೇ ದಿನದಲ್ಲಿ ವೈದ್ಯರ ನೇಮಕ ಸಾಧ್ಯವಾಗುತ್ತದೆ. ಆದರೆ ಕಳೆದ 22 ವರ್ಷಗಳಿಂದ ಶಾಸಕ ಹಾಗೂ ಸಚಿವರಾಗಿದ್ದವರಿಗೆ ಈ ಸಮಸ್ಯೆ ಪರಿಹರಿಸಲು ಯಾಕೆ ಸಾಧ್ಯವಾಗಲಿಲ್ಲ?” ಎಂದು ಅವರು ಪ್ರಶ್ನಿಸಿದರು.

ಕ್ಷೇತ್ರದ ಜನರ ಹಿತದೃಷ್ಟಿಯಿಂದ ತಕ್ಷಣ ಕೆಡಿಪಿ ಸಭೆ ಕರೆದು ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ (ಕುಕ್ಕುಂದೂರು) ಹಾಗೂ ಅಮಿತಾ ಶೆಟ್ಟಿ (ಸಾಣೂರು) ಉಪಸ್ಥಿತರಿದ್ದರು.

Back to top button