
ದಾವಣಗೆರೆ: ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಾ ಕೊಠಡಿಯ ಆಕ್ಸಿಜನ್ ಸಿಲಿಂಡರ್ ಸ್ಫೋಟ
ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ
ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಆಸ್ಪತ್ರೆಯ ಎರಡನೇ ಮಹಡಿಯ ಕೀಲು ಮೂಳೆ, ಕಣ್ಣು, ಕಿವಿ ಹಾಗೂ ಮೂಗಿನ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಮಂಗಳವಾರ ಬೆಳಿಗ್ಗೆ 8.45ಕ್ಕೆ ಈ ಅವಘಡ ಸಂಭವಿಸಿದೆ.
ಬೆಳಿಗ್ಗೆ 9 ಕ್ಕೆ ಶುರುವಾಗುವ ಶಸ್ತ್ರಚಿಕಿತ್ಸಾ ಸೇವೆಗೆ ರೋಗಿಗಳು ಹೊರಭಾಗದಲ್ಲಿ ಕಾಯುತ್ತಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಿಗ್ಗೆ 8ಕ್ಕೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ವೈದ್ಯಕೀಯ ಸಿಬ್ಬಂದಿ ಶಸ್ತ್ರಚಿಕಿತ್ಸೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ 12 ಕೆ.ಜಿ ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ವೈದ್ಯರು ಹಾಗೂ ಸಿಬ್ಬಂದಿ ಹೊರಗೆ ಬಂದಿದ್ದಾರೆ. ಆ ಬಳಿಕ ಸ್ಪೋಟ ಸಂಭವಿಸಿದ್ದು, ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ಅಂದಾಜು ₹ 75 ಲಕ್ಷ ಮೌಲ್ಯದ ಯಂತ್ರೋಪಕರಣಗಳು ಭಸ್ಮವಾಗಿವೆ.
ಸಿಲಿಂಡರ್ ಸ್ಫೋಟದ ಪರಿಣಾಮ ಅನಸ್ತೇಶಿಯಾ ವಿಭಾಗದ ಯಂತ್ರಗಳು, ಸಾಮಗ್ರಿಗಳು ಧ್ವಂಸ ಆಗಿವೆ. ರಾಸಾಯನಿಕಗಳು ಇದ್ದ ಕಾರಣಕ್ಕೆ ದಟ್ಟ ಹೊಗೆ ಕಾಣಿಸಿಕೊಂಡಿದೆ. ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಕಟ್ಟಡದಿಂದ ಹೊರಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
‘ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಎಲ್ಲರೂ ಕೊಠಡಿಯಿಂದ ಹೊರಗೆ ಬಂದೆವು. ಅವಘಡ ಸಂಭವಿಸುತ್ತಿದ್ದಂತೆ ಆಕ್ಸಿಜನ್ ಪೂರೈಕೆ ಸ್ಥಗಿತ ಮಾಡಿ ವಿದ್ಯುತ್ ಕಡಿತಗೊಳಿಸಲಾಯಿತು. ರೋಗಿಗಳಿಗೆ ಅರಿವಳಿಕೆ ನೀಡಿದ್ದರೆ ಪರಿಸ್ಥಿತಿ ಕೈಮೀರುವ ಸಾಧ್ಯತೆ ಇತ್ತು’ ಎಂದು ಸ್ಥಳದಲ್ಲಿದ್ದ ವೈದ್ಯೆ ಡಾ.ಶಿಲ್ಪಶ್ರೀ ತಿಳಿಸಿದರು.
ಸಿಲಿಂಡರ್ ಸ್ಫೋಟ ಆಗಿರುವಂತೆ ಕಾಣುತ್ತಿಲ್ಲ. ತಾಂತ್ರಿಕ ಕಾರಣಕ್ಕೆ ಸಿಲಿಂಡರ್ ಸೋರಿಕೆಯಾಗಿ ಅವಘಡ ಸಂಭವಿಸಿದ ಸಾಧ್ಯತೆ ಇದೆ. ಪರಿಶೀಲನೆ ಬಳಿಕ ವಾಸ್ತವ ತಿಳಿಯಲಿದೆ’ ಎಂದು ಬಯೊ ಮೆಡಿಕಲ್ ಎಂಜಿನಿಯರ್ ಲಂಕೇಶ್ ಮಾಹಿತಿ ನೀಡಿದರು.




