Featured StoryINTERNATIONAL

‘Navigation systems’ ಸ್ಥಗಿತಗೊಳಿಸಿ ನಿಷೇಧಿತ ಮಾರ್ಗದಲ್ಲಿ ಸಂಚರಿಸಿದ್ದರು’, ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದ್ದರು: UAE ಹಡಗುಗಳ ಮೇಲಿನ ದಾಳಿಗೆ Iran ಸಮರ್ಥನೆ

ಟೆಹ್ರಾನ್/ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಧ್ವಜ ಹೊಂದಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ನಡೆದ ಕ್ಷಿಪಣಿ ದಾಳಿಯ ಹೊಣೆಯನ್ನು ಇರಾನ್ ಅಧಿಕೃತವಾಗಿ ಹೊತ್ತುಕೊಂಡಿದ್ದು, ಈ ದಾಳಿಯನ್ನು “ರಕ್ಷಣಾತ್ಮಕ ಕ್ರಮ” ಎಂದು ಸಮರ್ಥಿಸಿಕೊಂಡಿದೆ.

ಹಲವು ಬಾರಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ನಿಷೇಧಿತ ಮಾರ್ಗದಲ್ಲಿ ಹಡಗುಗಳು ಸಂಚರಿಸಲು ಯತ್ನಿಸಿದ್ದರಿಂದ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ.

ಹಡಗುಗಳು ತಮ್ಮ ನ್ಯಾವಿಗೇಶನ್ ವ್ಯವಸ್ಥೆಯನ್ನು (Navigation System) ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದವು. ಅಲ್ಲದೆ, ಗಣಿಗಳು (ಮೈನ್‌ಗಳು) ಅಳವಡಿಸಲಾಗಿದ್ದ ಮಾರ್ಗದ ಮೂಲಕ ಸಂಚರಿಸಲು ಪ್ರಯತ್ನಿಸಿದ್ದವು. ಈ ಹಿನ್ನೆಲೆಯಲ್ಲಿ, ಸಮುದ್ರ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ರಕ್ಷಣಾತ್ಮಕ ಕ್ರಮವಾಗಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಈ ಕಾರ್ಯಾಚರಣೆಯ ಮೂಲಕ ಎರಡೂ ಹಡಗುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ” ಎಂದು ಐಆರ್‌ಜಿಸಿ ಹೇಳಿಕೊಂಡಿದೆ.

ಜೊತೆಗೆ, ಗಲ್ಫ್ ಪ್ರದೇಶದಲ್ಲಿ ಅಮೆರಿಕದೊಂದಿಗೆ ಭದ್ರತಾ ಸಹಕಾರ ಮುಂದುವರಿಸುತ್ತಿರುವ ರಾಷ್ಟ್ರಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದು, ಇಂತಹ ಚಟುವಟಿಕೆಗಳು ಮುಂದುವರಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ ಗಾಯಾಳುಗಳಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಈ ಘಟನೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಜಗತ್ತಿನ ಅತ್ಯಂತ ಮಹತ್ವದ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ.

Back to top button