
ಸಿಜೆಪಿ ಪ್ರತಿಭಟನೆಗೆ ಸೋನಮ್ ವಾಂಗ್ಚುಕ್ ಬೆಂಬಲ
ನವದೆಹಲಿ: “ನೀಟ್ ಪ್ರಶ್ನೆ ಪತ್ರಿಕೆಯ ವಿರುದ್ಧ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸಿದಾಗ, ಅವರು ದುರ್ಬಲರಾಗಿದ್ದರು. ಆದರೀಗ, ಅವರಿಗೆ ಶಕ್ತಿಶಾಲಿ ಧ್ವನಿಯಿದೆ. ಹೀಗಾಗಿ, ಅವರು ದೇಶವನ್ನು ಅಲುಗಾಡಿಸಬಲ್ಲರು” ಎಂದು ಹೇಳಿರುವ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ನೀಡಿರುವ ಪ್ರತಿಭಟನಾ ಕರೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಚುನಾವಣಾ ಆಯೋಗದೊಳಗೇ ಭಿನ್ನಮತ ತಲೆದೋರಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸದಿದ್ದರೆ ಅಕ್ಟೋಬರ್ 2ರಿಂದ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಅಭಿಜೀತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ ಎಚ್ಚರಿಕೆ ನೀಡಿದೆ. ಮುಂಬೈನಿಂದ ದೇಶವ್ಯಾಪಿ ಪ್ರತಿಭಟನೆಗೆ ಚಾಲನೆ ನೀಡಲಾಗುವುದು ಎಂದೂ ಅದು ಹೇಳಿದೆ.
ಈ ಕರೆಗೆ ಬೆಂಬಲ ಸೂಚಿಸಿರುವ ಸೋನಂ ವಾಂಗ್ಚುಕ್, “ಸ್ವಚ್ಛ ಚುನಾವಣಾ ಪ್ರಕ್ರಿಯೆ ದೇಶದ ಅತಿ ದೊಡ್ಡ ಅಗತ್ಯವಾಗಿದೆ. ನಾನು ಈ ಕರೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ” ಎಂದು ಘೋಷಿಸಿದ್ದಾರೆ. ದೇಶದಲ್ಲಿ ಉತ್ತರದಾಯಿತ್ವ ಹಾಗೂ ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವ ಪ್ರಯತ್ನಗಳು ಬೆಂಬಲಕ್ಕೆ ಅರ್ಹವಾಗಿವೆ ಎಂದು ಅವರು ಹೇಳಿದ್ದಾರೆ.
ಆದರೆ, ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆಯಲ್ಲಿ ನನಗೆ ಖುದ್ದು ಭಾಗಿಯಾಗಲು ಸಾಧ್ಯವಾಗಲಾರದು ಎಂದೂ ಅವರು ಹೇಳಿದ್ದಾರೆ. “ನಾನು ವೈಯಕ್ತಿಕವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಆದರೆ, ನಾನು ನನ್ನ ಪ್ರಾರಂಭಿಕ ಬೆಂಬಲವನ್ನು ನೀಡುತ್ತೇನೆ. ಕಾಕ್ರೋಚ್ ಜನತಾ ಪಾರ್ಟಿಯವರು ದುರ್ಬಲರಾಗಿದ್ದಾಗ, ಜಂತರ್ ಮಂತರ್ ನಲ್ಲಿ ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ. ಆದರೀಗ ಅವರಿಗೆ ಶಕ್ತಿಶಾಲಿ ಧ್ವನಿಯಿದೆ ಹಾಗೂ ಅವರ ಧ್ವನಿ ದೇಶವನ್ನು ಅಲುಗಾಡಿಸಬಲ್ಲದು ಎಂದು ಆಶಿಸುತ್ತೇನೆ” ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಜುಲೈ ತಿಂಗಳಲ್ಲಿ ಜಂತರ್ ಮಂತರ್ ನಲ್ಲಿ 26 ದಿನಗಳ ಸುದೀರ್ಘ ಕಾಲ ನಡೆದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಮಹತ್ವದ ಪಾತ್ರ ವಹಿಸಿದ್ದರು. “ಈ ಪ್ರತಿಭಟನೆಗಳನ್ನು ಬೆಂಬಲಿಸುವುದರ ಹಿಂದಿರುವ ನನ್ನ ಚಿಂತನೆಯೆಂದರೆ, ಅವರು ಸ್ವಯಂಪ್ರೇರಿತವಾಗಿ ಈ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ, ಈ ವಿಷಯದ ಬೆಂಬಲಕ್ಕೆ ಹಲವಾರು ಮಂದಿ ಇದ್ದಾರೆ. ಇದರಿಂದ ನನಗೆ ಸಂತೋಷವಾಗಿದ್ದು, ಮುಖ್ಯ ಚುನಾವಣಾ ಆಯುಕ್ತರ ವಿಷಯಕ್ಕೆ ನನ್ನ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.




