Crime

ಮಲ್ಪೆ ಕೊಲೆ ಪ್ರಕರಣ – ಆರೋಪಿ ಬಂಧನ

ಉಡುಪಿ: ಮಲ್ಪೆ ಬಾಬುತೋಟ ಧಕ್ಕೆ ಸಮೀಪದ ಖಾಲಿ ಜಾಗದಲ್ಲಿ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಕುತ್ತಿಗೆಗೆ ಆಯುಧದಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹುಬ್ಬಳ್ಳಿಯ ಆರೋಗ್ಯ ದಾಸ್‌ @ ಕಾಮಿ (55) ಎಂದು ಗುರುತಿಸಲಾಗಿದೆ.

ಮಲ್ಪೆಯ ಡಬಾಂಡೇಶ್ವರ ನಿವಾಸಿ ರಿಷಭ್‌ ಅವರು ಬಾಬುತೋಟ ಧಕ್ಕೆ ಬಳಿ ಮಲ್ಪೆ ಮರೈನ್‌ ಏಜೆನ್ಸಿ ನಡೆಸುತ್ತಿದ್ದು, ಏಜೆನ್ಸಿ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಆಂಧ್ರಪ್ರದೇಶ ಮೂಲದ ಪರಮೇಶಿ @ ಪರಮ್‌ ವೇಲಿ (55) ಎಂಬಾತ ಗುಜರಿ ವಸ್ತುಗಳನ್ನು ಹೆಕ್ಕಿಕೊಂಡು ಜೀವನ ನಡೆಸುತ್ತಾ, ಪ್ಲಾಸ್ಟಿಕ್‌ ಗೋಣಿ ಚೀಲ ಹಾಕಿಕೊಂಡು ಮಲಗುತ್ತಿದ್ದನು.

ಸೆ.28ರಂದು ಸಂಜೆ 7 ಗಂಟೆಗೆ ರಿಷಭ್‌ ಅವರು ಏಜೆನ್ಸಿಗೆ ಶೆಟರ್‌ ಹಾಕಿ ತೆರಳುವಾಗ ಪರಮೇಶಿ ಖಾಲಿ ಜಾಗದಲ್ಲಿ ಕುಳಿತಿರುವುದು ಕಂಡುಬಂದಿತ್ತು. ಸೆ.29ರಂದು ಬೆಳಗ್ಗೆ 8.30ರ ಸುಮಾರಿಗೆ ಏಜೆನ್ಸಿಗೆ ಬಂದಾಗ ಪರಮೇಶಿ ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿರುವುದು ಕಂಡುಬಂದಿದೆ. ಆತನ ಕುತ್ತಿಗೆ ಭಾಗದಿಂದ ರಕ್ತ ಹರಿದು ನೆಲದ ಮೇಲೆ ಬಿದ್ದಿತ್ತು.

ಸೆ.28ರ ಸಂಜೆ 7ರಿಂದ ಸೆ.29ರ ಬೆಳಗ್ಗೆ 8.30ರ ನಡುವಿನ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ಪರಮೇಶಿಯ ಕುತ್ತಿಗೆಗೆ ಆಯುಧದಿಂದ ಇರಿದು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿತ್ತು. ಈ ಕುರಿತು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2026, ಕಲಂ 103 ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತನಿರೀಕ್ಷಕ ರಾಮಚಂದ್ರ ನಾಯಕ್‌ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಮಲ್ಪೆ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಅನೀಲ್‌ ಕುಮಾರ್‌ ಡಿ. ಹಾಗೂ ಸಿಬ್ಬಂದಿ ಹೆಚ್‌ಸಿ ವಿಶ್ವನಾಥ್‌, ಹೆಚ್‌ಸಿ ಆದರ್ಶ ಮತ್ತು ಸಿಪಿಸಿ ಕುಬೇರ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹುಬ್ಬಳ್ಳಿಯ ಹೊರವಲಯದಲ್ಲಿ ಬಂಧಿಸಿದೆ.

ಕೊಲೆಗೆ ನಿಖರ ಕಾರಣ ಹಾಗೂ ಆರೋಪಿಯ ಕೃತ್ಯದ ಹಿಂದಿನ ಉದ್ದೇಶದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Back to top button